janadhvani

Kannada Online News Paper

ಹೊಸದಿಲ್ಲಿ: ಭಾರತೀಯ ಜನತಾ ಪಕ್ಷದ ನಾಯಕ ಹಾಗೂ ಕೇಂದ್ರ ರೈಲ್ವೇ ಖಾತೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಅವರು ಇಂದು ನಿಧನ ಹೊಂದಿದ್ದಾರೆ.

ಸಂಸದ ಸುರೇಶ್ ಅಂಗಡಿ ಅವರಿಗೆ ಕಳೆದ ವಾರ ಕೋವಿಡ್ ಸೋಂಕು ತಗಲಿತ್ತು. ಯಾವುದೇ ರೋಗ ಲಕ್ಷಣ ಇಲ್ಲದೇ ಇದ್ದರೂ ಸುರೇಶ್ ಅಂಗಡಿ ಅವರು ವೈದ್ಯರ ಸಲಹೆ ಮೇರೆಗೆ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು.ಆದರೆ ಚಿಕಿತ್ಸೆಗೆ ಸ್ಪಂದಿಸದೆ 65 ವರ್ಷದ ಸಂಸದ ಅಂಗಡಿ ಅವರು ಇಂದು ಸಾಯಂಕಾಲ ಮೃತಪಟ್ಟಿದ್ದಾರೆ.

ಸುರೇಶ್ ಅಂಗಡಿ ಅವರು ಬೆಳಗಾವಿ ಲೋಕಸಭಾ ಕ್ಷೇತ್ರದಿಂದ 2004, 2009, 2014 ಮತ್ತು 2019ರಲ್ಲಿ ಸತತ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.
ಸಂಸತ್ ಅಧಿವೇಶನಕ್ಕೂ ಮುನ್ನ ಎಲ್ಲಾ ಸಂಸದರಿಗೂ ಕೋವಿಡ್ 19 ಸೋಂಕು ಪತ್ತೆ ಪರೀಕ್ಷೆಯನ್ನು ನಡೆಸಲಾಗಿತ್ತು. ಅದರಲ್ಲಿ ಸುರೇಶ್ ಅಂಗಡಿ ಅವರಿಗೆ ಸೋಂಕು ಪಾಸಿಟಿವ್ ಕಾಣಿಸಿಕೊಂಡಿತ್ತು.

ಶ್ವಾಸಕೋಶದ ಸೋಂಕಿಗೆ ಗುರಿಯಾಗಿದ್ದ ಸುರೇಶ್ ಅಂಗಡಿ ಅವರನ್ನು ಕೃತಕ ಉಸಿರಾಟ ವ್ಯವಸ್ಥೆಯಲ್ಲಿ ಇರಿಸಲಾಗಿತ್ತು.
ಸುರೇಶ್ ಅಂಗಡಿ ಅವರು ಪತ್ನಿ ಮಂಗಳ ಅಂಗಡಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಸುರೇಶ್ ಅಂಗಡಿ ಅವರನ್ನು ಇನ್ನೆರಡು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ನೀಡಿದ್ದರು. ಆದರೆ ದುರದೃಷ್ಟವೆಂಬಂತೆ ಸುರೇಶ್ ಅಂಗಡಿ ಅವರು ಇಂದು ಕೋವಿಡ್ 19 ಸೋಂಕಿಗೆ ಬಲಿಯಾಗಿರುವುದು ಎಲ್ಲರಿಗೂ ಆಘಾತ ತಂದಿದೆ.
ಮಧುಮೇಹ, ರಕ್ತದೊತ್ತಡದಂತಹ ಯಾವುದೇ ಸಮಸ್ಯೆಗಳಿಲ್ಲದೆಯೂ ಸುರೇಶ್ ಅಂಗಡಿ ಅವರು ಈ ಮಹಾಮಾರಿಗೆ ಬಲಿಯಾಗಿರುವುದು ಆಘಾತಕಾರಿಯಾಗಿದೆ.

error: Content is protected !! Not allowed copy content from janadhvani.com