janadhvani

Kannada Online News Paper

ಕಾಸರಗೋಡು- ದ.ಕ.ಜಿಲ್ಲೆ: ಗಡಿ ರಸ್ತೆ ತೆರವುಗೊಳಿಸಲು ಕೇರಳ ಹೈಕೋರ್ಟ್ ಆದೇಶ

ತಿರುವನಂತಪುರ: ಕಾಸರಗೋಡಿನಿಂದ ದಕ್ಷಿಣ ಕನ್ನಡ ಜಿಲ್ಲೆಗೆ ತೆರಳುವ ಜಾಲ್ಸೂರು, ಪಾಣತ್ತೂರು, ಮಾಣಿಮೂಲೆ ಮತ್ತು ಸಾರಡ್ಕ ರಸ್ತೆಗಳನ್ನು ತೆರವುಗೊಳಿಸಬೇಕು ಎಂದು ಕೇರಳ ಹೈಕೋರ್ಟ್ ಆದೇಶ ನೀಡಿದೆ.

ಕೇಂದ್ರ ಸರಕಾರದ ಅನ್ ಲಾಕ್ ಮಾರ್ಗಸೂಚಿ 3.0 ಪ್ರಕಾರ ಜನಸಂಚಾರಕ್ಕೆ ಯಾವುದೇ ನಿರ್ಬಂಧ ಹೇರಬಾರದು ಎಂದು ಹೈಕೋರ್ಟ್ ಆದೇಶಿಸಿದೆ.

ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ- ಕಾಸರಗೋಡು ನಡುವಿನ 14ಕ್ಕೂ ಅಧಿಕ ರಸ್ತೆಗಳನ್ನು ಮಣ್ಣು ಹಾಕಿ ಬಂದ್ ಮಾಡಲಾಗಿತ್ತು. ಇದರಿಂದಾಗಿ ಉಭಯ ಜಿಲ್ಲೆಗಳ ನಡುವಿನ ಸಂಪರ್ಕ ಸ್ಥಗಿತಗೊಂಡಿತ್ತು. ಈ ನಡುವೆ ಕೇರಳ ಸರಕಾರ ಮಾತ್ರ ರಸ್ತೆ ಸಂಚಾರ ಬಂದ್ ಮಾಡಿತ್ತು. ಈ ಕಾರಣದಿಂದ ಕಾಸರಗೋಡು ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್ ಕೇರಳ ಹೈಕೋರ್ಟ್ ಗೆ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಕೋರಿ ರಿಟ್ ಅರ್ಜಿ ಸಲ್ಲಿಸಿದ್ದರು.

ರಿಟ್ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಕೇರಳ ಸರ್ಕಾರಕ್ಕೆ ಮಧ್ಯಂತರ ಆದೇಶ ನೀಡಿದೆ. ಕಾಸರಗೋಡು ಭಾಗದ ಸುಮಾರು 5 ಸಾವಿರಕ್ಕೂ ಹೆಚ್ಚು ಜನರು ಪ್ರತಿನಿತ್ಯದ ಕೆಲಸಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯನ್ನೇ ಅವಲಂಬಿಸಿದ್ದಾರೆ. ಇವರಲ್ಲಿ ಮುಖ್ಯವಾಗಿ ಗಡಿನಾಡ ಕನ್ನಡಿಗರೇ ಹೆಚ್ಚಾಗಿದ್ದು, ಈ ಜನರ ಮಕ್ಕಳ ವಿದ್ಯಾಭ್ಯಾಸ, ಉದ್ಯೋಗ ಎಲ್ಲವೂ ದಕ್ಷಿಣ ಕನ್ನಡದಲ್ಲೇ ನಡೆಯುತ್ತಿದೆ. ಹೈಕೋರ್ಟ್ ಗಡಿ ತೆರೆಯುವಂತೆ ಮಧ್ಯಂತರ ಆದೇಶ ನೀಡುವ ಜೊತೆಗೆ ಕೊರೋನಾ ತಡೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆಯೂ ಕೇರಳ ಸರ್ಕಾರಕ್ಕೆ ಆದೇಶಿಸಿದೆ.

ಕಾಸರಗೋಡು ಜಿಲ್ಲಾಧಿಕಾರಿ ಮತ್ತೆ ತಮ್ಮ ಕರ್ನಾಟಕ ವಿರೋಧಿ ನೀತಿಗೆ ಮುಂದಾಗಿದ್ದಾರೆ ಎಂದು ಕಾಸರಗೋಡು ಬಿಜೆಪಿ ಜಿಲ್ಲಾಧ್ಯಕ್ಷ ಅಡ್ವೊಕೇಟ್ ಕೆ. ಶ್ರೀಕಾಂತ್ ಆರೋಪಿಸಿದ್ದಾರೆ. ಗಡಿ ತೆರೆದಿದ್ದರೂ ಕೇರಳ ಪ್ರವೇಶಿಸುವ ಪ್ರತಿಯೊಬ್ಬನ ಆಂಟಿಜೆನ್ ಪರೀಕ್ಷೆ ನಡೆಸಲು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಇದರಿಂದಾಗಿ ಕೇರಳ ಗಡಿ ಮೂಲಕ ಪ್ರವೇಶಿಸುವ ಪ್ರತೀ ವ್ಯಕ್ತಿಯೂ ಈ ಪರೀಕ್ಷೆಗೆ ಒಳಪಡಬೇಕಾಗುತ್ತದೆ. ಪರೀಕ್ಷೆಯಲ್ಲಿ ಕೊರೊನಾ ನೆಗೆಟಿವ್ ಬಂದರಷ್ಟೇ ಕೇರಳ ಪ್ರವೇಶಿಸಬಹುದು ಎನ್ನುವ ಸೂಚನೆಯನ್ನೂ ನೀಡಿದ್ದಾರೆ.

ಇದರಿಂದಾಗಿ ಜನರ ಓಡಾಟಕ್ಕೆ ಮತ್ತೆ ಕಡಿವಾಣ ಹಾಕುವ ಪ್ರಯತ್ನ ನಡೆಸಲಾಗಿದೆ ಎನ್ನುವುದು ವಕೀಲ ಶ್ರೀಕಾಂತ್ ಅವರ ಅಭಿಪ್ರಾಯ. ಈ ಕಾರಣಕ್ಕಾಗಿ ಬಿಜೆಪಿ ಮತ್ತೆ ಹೋರಾಟವನ್ನು ಮುಂದುವರಿಸಿದ್ದು, ಕೇಂದ್ರ ಸರಕಾರದ ಆದೇಶದಂತೆ ಜನರಿಗೆ ಮುಕ್ತ ಅವಕಾಶ ನೀಡುವ ತನಕ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪಾಸ್‌ ಅಗತ್ಯವಿಲ್ಲ
ಕಾಸರಗೋಡು ಜಿಲ್ಲೆಯಿಂದ ಕರ್ನಾಟಕಕ್ಕೂ ತಿರುಗಿ ಜಿಲ್ಲೆಗೆ ಪ್ರತೀ ದಿನ ಪ್ರಯಾಣಿಸುವರಿಗೆ ಗುರುವಾರದಿಂದ ಯಾವುದೇ ರೆಗ್ಯೂಲರ್‌ ಪಾಸ್‌ ಅಗತ್ಯವಿಲ್ಲ. ಇದರಂತೆ ಪ್ರತೀ ದಿನ ಯಾತ್ರೆ ಮಾಡುವುದಕ್ಕಾಗಿ ರೆಗ್ಯೂಲರ್‌ ಪಾಸ್‌ ನೀಡಿರುವ ಆದೇಶವನ್ನು ಹಿಂಪಡೆಯಲಾಗಿದೆ. ಆದರೆ ಇನ್ನು ಮುಂದೆ ಆ್ಯಂಟಿಜನ್‌ ತಪಾಸಣೆ ನಡೆಸಿ ಲಭಿಸುವ ನೆಗೆಟಿವ್‌ ಸರ್ಟಿಫಿಕೆಟ್‌ ಸಹಿತ ಕೋವಿಡ್‌-19 ಜಾಗ್ರತಾ ಪೋರ್ಟಲ್‌ನಲ್ಲಿರಿಜಿಸ್ಪ್ರೇಶನ್‌ ಮಾಡಬೇಕು. ತಲಪ್ಪಾಡಿ ಚೆಕ್‌ಪೋಸ್ಟ್‌ನಲ್ಲಿ ಇದಕ್ಕೆ ಅಗತ್ಯವಾದ ತಪಾಸಣೆ ನಡೆಸಲು ಜಿಲ್ಲಾ ವೈದ್ಯಾಧಿಕಾರಿಗಳು ವ್ಯವಸ್ಥೆ ಮಾಡಿದ್ದಾರೆ. ಪ್ರಯಾಣಿಸುವ ಎಲ್ಲರ ಮಾಹಿತಿಗಳನ್ನು ಗೂಗಲ್‌‌ಶೀಟ್‌ನಲ್ಲಿ ದಾಖಲಿಸಿಸಲಾಗುತ್ತದೆ.

ಪ್ರಸ್ತುತ ತಲಪಾಡಿ ಅಲ್ಲದೇ ಜಾಲ್ಸೂರು, ಪಾಣತ್ತೂರು, ಮಾಣಿಮೂಲೆ, ಸಾರಡ್ಕ ಮೂಲಕ ತೆರಳುವರು ಆ್ಯಂಟಿಜನ್‌ ಟೆಸ್ಟ್‌ ನಡೆಸಿ ಲಭಿಸುವ ನೆಗೆಟಿವ್‌ ಸರ್ಟಿಫಿಕೆಟ್‌ ಸಹಿತ ಕೋವಿಡ್‌-19 ಜಾಗೃತಾ ಪೋರ್ಟಲ್‌ನಲ್ಲಿ ನೋಂದಾಯಿಸಬೇಕು.

ಇದೇ ಸಂದರ್ಭ ಕರ್ನಾಟಕ ಗಡಿ ಹೊಂದಿರುವ ಸಮೀಪದ ಗ್ರಾಮ ವಾಸಿಗಳಿಗೆ ನಿತ್ಯ ಪ್ರಯಾಣಿಸುವುದಕ್ಕಾಗಿ ಯಾವುದೇ ತಪಾಸಣೆ ಅಗತ್ಯವಿಲ್ಲ. ಆದರೆ ಆ ಗ್ರಾಮ ಪಂಚಾಯಿತಿ ವ್ಯಾಪ್ತಿ ಬಿಟ್ಟು ಇನ್ನೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಪ್ರವೇಶಿಸುವುದಿಲ್ಲ ಎಂಬುವುದನ್ನು ಸಂಬಂಧಪಟ್ಟ ಪಂಚಾಯಿತಿಗಳು ನಿಗಾ ವಹಿಸಬೇಕು.

error: Content is protected !! Not allowed copy content from janadhvani.com