ಮಂಗಳೂರು: ಕರಾವಳಿಯಲ್ಲಿ ಮುಂಗಾರು ಚುರುಕಾಗಿದ್ದು, ಜಿಲ್ಲೆಗಳಾದ್ಯಂತ ಇಂದು ಕೂಡ ಭಾರೀ ಮಳೆ ಮುಂದುವರಿದಿದೆ. ಸಾರ್ವಜನಿಕರು ಎಚ್ಚರದಿಂದ ಇರುವಂತೆ ಇಂದು ರೆಡ್ ಅಲರ್ಟ್ ಹಾಗೂ ಆ.6 ರಿಂದ 8ರ ವರೆಗೆ ಆರಂಜ್ ಅಲರ್ಟ್ ನ್ನು ದ.ಕ ಜಿಲ್ಲಾಧಿಕಾರಿ ಘೋಷಿಸಿದ್ದಾರೆ. ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಟೋಲ್ ಫ್ರೀ ಸಂಖ್ಯೆ- 1077 ಗೆ ಕರೆ ಮಾಡುವಂತೆ ಕೋರಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯ, ಬಂಟ್ವಾಳ ಹಾಗೂ ಬೆಳ್ತಂಗಡಿ ಭಾಗಗಳಲ್ಲಿ ಭಾರೀ ಮಳೆಯಾಗಿದೆ. ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯಾದ ಹಿನ್ನಲೆಯಲ್ಲಿ ಕುಮಾರಧಾರಾ ಮತ್ತು ನೇತ್ರಾವತಿ ನದಿ ನೀರಿನ ಮಟ್ಟ ಹೆಚ್ಚಾಗಿದೆ.

ಕುಮಾರಧಾರಾ ನದಿ ನೀರಿನ ಹರಿವು ಹೆಚ್ಚಾದ ಪರಿಣಾಮ ಕಳೆದ ಮೂರು ದಿನಗಳಿಂದ ಕುಕ್ಕೆ ಸುಬ್ರಹ್ಮಣ್ಯ ಕುಮಾರಧಾರಾ ಸ್ನಾನಘಟ್ಟ ನದಿ ನೀರಿನಲ್ಲಿ ಮುಳುಗಡೆಯಾಗಿದೆ. ಅಲ್ಲದೆ ನಿನ್ನೆ ಮಧ್ಯರಾತ್ರಿ ಕಿಮಾರಧಾರಾ ನದಿ ನೀರು ಸುಬ್ರಹ್ಮಣ್ಯ- ಮಂಜೇಶ್ವರ ರಾಜ್ಯ ಹೆದ್ದಾರಿಗೂ ಬಂದ ಹಿನ್ನಲೆಯಲ್ಲಿ ಇಂದು ಮುಂಜಾನೆವರೆಗೆ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಕುಕ್ಕೆ ಸುಬ್ರಹ್ಮಣ್ಯ ಗುಂಡ್ಯ ಸಂಪರ್ಕ ಕಲ್ಪಿಸುತ್ತಿದ್ದ ಹಳೆ ಸೇತುವೆಯೂ ಮಳುಗಡೆಯಾಗಿದ್ದು, ಕಿಂಡಿ ಅಣೆಕಟ್ಟೂ ಮುಳುಗಡೆಯಾಗಿದೆ.




ಸುಬ್ರಹ್ಮಣ್ಯ ಪರಿಸರದಲ್ಲಿ ಇಂದೂ ಮಳೆಯಾಗುತ್ತಿದ್ದು,ನದಿ ನೀರು ಮತ್ತೆ ರಸ್ತೆಗೆ ಬರುವ ಲಕ್ಷಣಗಳು ಗೋಚರಿಸುತ್ತಿವೆ. ಮಳೆಯ ಜೊತೆಗೆ ಭಾರೀ ಗಾಳಿಯೂ ಬೀಸಿದ ಕಾರಣ ಜಿಲ್ಲೆಯ ಹಲವೆಡೆ ಭಾರೀ ಗಾತ್ರದ ಮರಗಳು ನೆಲಕ್ಕುರುಳಿವೆ. ಹಲವು ಕಡೆಗಳಲ್ಲಿ ಮರ ಹೆದ್ದಾರಿ ಮೇಲೂ ಉರುಳಿದ ಘಟನೆಗಳೂ ನಡೆದಿವೆ.




ಹಲವೆಡೆ ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದ ಪರಿಣಾಮ ನೂರಕ್ಕೂ ಮಿಕ್ಕಿದ ವಿದ್ಯುತ್ ಕಂಬಗಳು ಧರೆಗುರುಳಿವೆ. ಇದರಿಂದಾಗಿ ಜಿಲ್ಲೆಯ ಹಲವೆಡೆ ನಿನ್ನೆ ರಾತ್ರಿಯಿಂದಲೇ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಗಾಳಿಯಿಂದಾಗಿ ಹಾನಿಗೊಳಗಾದ ವಿದ್ಯುತ್ ಕಂಬಗಳ ಮರು ಜೋಡಣೆಯ ಬಳಿಕವೇ ವಿದ್ಯುತ್ ಸಂಪರ್ಕದ ನಿರೀಕ್ಷೆ ಇರಿಸಲಾಗಿದೆ.




ಬೆಳ್ತಂಗಡಿ ತಾಲೂಕಿನಲ್ಲೂ ಭಾರೀ ಮಳೆಯಾಗುತ್ತಿದ್ದು, ಮೃತ್ಯುಂಜಯ ಹೊಳೆಯೂ ತುಂಬಿ ಹರಿಯಲಾರಂಭಿಸಿದೆ. ಕಳೆದ ಬಾರಿಯ ಮಳೆಗೆ ಈ ಹೊಳೆ ರೌದ್ರಾವತರ ತೋರಿದ ಪರಿಣಾಮ ಚಾರ್ಮಾಡಿ, ದಿಡುಪೆ ಭಾಗಗಳಲ್ಲಿ ಭಾರೀ ಅನಾಹುತ ಸಂಭವಿಸಿತ್ತು. ನೂರಕ್ಕೂ ಮಿಕ್ಕಿದ ಮನೆಗಳಿಗೆ ಹಾನಿಯಾಗಿತ್ತು. ಚಾರ್ಮಾಡಿ ಘಾಟ್ ಭಾಗದಲ್ಲಿ ನಿನ್ನೆಯೂ ಸಣ್ಣ ಪುಟ್ಟ ಗುಡ್ಡ ಜರಿತ ಸಂಭವಿಸಿದ್ದು,ವಾಹನ ಸಂಚಾರಕ್ಕೆ ಅಡಚಣೆಯಾಗಿಲ್ಲ.