janadhvani

Kannada Online News Paper

ಕೊರೋನಾ ಗಾಳಿಯಲ್ಲೂ ಹರಡುತ್ತದೆ- ಒಪ್ಪಿಕೊಂಡ ವಿಶ್ವ ಆರೋಗ್ಯ ಸಂಸ್ಥೆ

ಜಿನಿವಾ, ಜುಲೈ.8: ಕೊರೊನಾ ವೈರಸ್ ಗಾಳಿಯ ಮೂಲಕ ಹರಡುತ್ತದೆ ಎಂಬ ವಾದವನ್ನು ತಳ್ಳಿಹಾಕಲಾಗದು ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ.

ವಿಶ್ವದಾದ್ಯಂತ 200 ಕ್ಕೂ ಹೆಚ್ಚು ವಿಜ್ಞಾನಿಗಳು ಕೊರೊನಾ ವೈರಸ್ ಗಾಳಿಯ ಮೂಲಕ ಹರಡುತ್ತದೆ ಎಂದು ಪ್ರತಿಪಾದಿಸಿದ್ದರು. ಇದಕ್ಕೆ ಸಂಬಂಧಿಸಿದ ಆಧಾರಗಳನ್ನು ಪರಿಗಣಿಸಿರುವ ಡಬ್ಲ್ಯುಎಚ್ ಒ ಅವರ ವಾದವನ್ನು ಬೆಂಬಲಿಸಿದೆ. ಈ ಹಿನ್ನಲೆಯಲ್ಲಿ ಕೊರೊನಾ ವೈರಸ್ ಗೆ ಸಂಬಂಧಿಸಿದ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಬೇಕು ಎಂದು ವಿಜ್ಞಾನಿಗಳ ತಂಡ ವಿಶ್ವ ಆರೋಗ್ಯ ಸಂಸ್ಥೆಯನ್ನು ಕೋರಿದೆ.

ಈ ಬಗ್ಗೆ ಜು.7ರಂದು ಹೇಳಿಕೆ ನೀಡಿರುವ ವಿಶ್ವಸಂಸ್ಥೆಯ ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣದ ತಾಂತ್ರಿಕ ಮುಖ್ಯಸ್ಥ ಬೆನೆಡೆಟ್ಟಾ ಅಲೆಗ್ರಾಂಜಿ, ಸಾರ್ವಜನಿಕ ಸ್ಥಳಗಳಲ್ಲಿ, ವಿಶೇಷವಾಗಿ ಕಿಕ್ಕಿರಿದ, ಮುಚ್ಚಿದ, ಕಳಪೆ ಗಾಳಿ ಇರುವ ಜಾಗಗಳಂತಹ ನಿರ್ದಿಷ್ಟ ಪರಿಸ್ಥಿತಿಯಲ್ಲಿ ಗಾಳಿಯಲ್ಲಿ ಸೋಂಕು ಹರಡುವ ಸಾಧ್ಯತೆ ಇರುವುದನ್ನ ತಳ್ಳಿ ಹಾಕಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಆದಾಗ್ಯೂ, ಗಾಳಿಯಲ್ಲಿ ಕೊರೊನಾ ಸೋಂಕು ಹರಡುವ ಬಗ್ಗೆ ಸದ್ಯ ಇರುವ ಪುರಾವೆಗಳನ್ನ ಸಂಗ್ರಹಿಸಿ ಅರ್ಥೈಸಿ, ಸಂಶೋಧಿಸುವ ಅವಶ್ಯಕತೆಯಿದೆ ಎಂದು ತಿಳಿಸಿದ್ದಾರೆ. ಇನ್ನು ಈ ಬಗ್ಗೆ ವಿಶ್ವಸಂಸ್ಥೆ ವಿಜ್ಞಾನಿಗಳ ವಾದವನ್ನ ಬೆಂಬಲಿಸುತ್ತೆ ಎಂದು ತಾಂತ್ರಿಕ ಮುಖ್ಯಸ್ಥ ಬೆನೆಡೆಟ್ಟಾ ಅಲೆಗ್ರಾಂಜಿ ತಿಳಿಸಿದ್ದಾರೆ.

32 ದೇಶದ 233 ವಿಜ್ಞಾನಿಗಳು ಗಾಳಿಯಲ್ಲಿ ಕೊರೊನಾ ಸೋಂಕು ಹರಡುತ್ತದೆ ಎಂದು ಎರಡು ದಿನಗಳ ಹಿಂದೆ ವಾದ ಮಂಡಿಸಿದ್ದರು. ಇದು ಇಡೀ ಜಗತ್ತಿನ ಜನರನ್ನ ಆತಂಕಕ್ಕೆ ದೂಡಿದೆ. ಈ ರೀತಿ ಆದರೆ ಕೊರೊನಾ ಅತ್ಯಂತ ವೇಗವಾಗಿ ಜನರನ್ನ ಸೋಂಕಿತರನ್ನ ಮಾಡಲಿದೆ ಎನ್ನುವ ಭಯ ಈಗ ಎಲ್ಲೆಡೆ ಮೂಡಿದೆ. ಇನ್ನು ಈ ಸಂಬಂಧ ಕೆಲ ವಿಜ್ಞಾನಿಗಳು ಗಾಳಿಯಲ್ಲಿ ಸೋಂಕು ಹರಡಲ್ಲ ಎನ್ನುತ್ತಿದ್ದಾರೆ. ಬೇರೆ ಬೇರೆ ವ್ಯಾಖ್ಯಾನಗಳ ಮೂಲಕ ಸದ್ಯ ಗೊಂದಲಮಯವಾದ ವಾತಾವರಣ ನಿರ್ಮಾಣವಾಗಿದೆ.