janadhvani

Kannada Online News Paper

ಸೌದಿಯಲ್ಲಿ ಸಂಕಷ್ಟಕ್ಕೆ ಸಿಲುಕಿರುವವರನ್ನು ತಾಯ್ನಾಡಿಗೆ ಕಳಿಸಲು ಶ್ರಮಿಸುತ್ತಿರುವ ಅಬ್ದುಲ್ ರಝಾಕ್ ಉಳ್ಳಾಲ

ಲೇಖನ: ಆಸಿಫ್ ಬದ್ಯಾರ್
                              ಮದೀನಾ ಮುನವ್ವರ.

ಜಗತ್ತು ಇಂದು ಕೊರೊನಾ ಎಂಬ ಮಹಾಮಾರಿ ರೋಗದಿಂದ ತತ್ತರಿಸಿ ಹೋಗಿದೆ. ಕೊರೊನಾ ನಿಯಂತ್ರಣಕ್ಕಾಗಿ ಜಗತ್ತಿನ ಎಲ್ಲಾ ರಾಷ್ಟ್ರಗಳು ತಮ್ಮ ಪ್ರದೇಶಗಳನ್ನು ಲಾಕ್ ಡೌನ್ ಮಾಡಿಕೊಂಡಿದ್ದರಿಂದ ಅಂತರಾಷ್ಟ್ರೀಯ ವಿಮಾನಯಾನ ಸೇವೆಗಳು ಸ್ಥಗಿತಗೊಂಡು ದೇಶ ವಿದೇಶದ ಸಂಪರ್ಕವನ್ನು ಕಳೆದುಕೊಂಡು ತಿಂಗಳುಗಳು ಕಳೆದಿದೆ.

ಪರಿಣಾಮವಾಗಿ ಜಗತ್ತಿನ ಅನೇಕ ಶ್ರೀಮಂತ ರಾಷ್ಟ್ರಗಳು ಸಹ ಆರ್ಥಿಕ ನಷ್ಟವನ್ನು ಅನುಭವಿಸತೊಡಗಿದೆ. ಜೊತೆಗೆ ವಿಶ್ವದಲ್ಲೆಡೆ ಇರುವ ನಮ್ಮ ದೇಶದ ಅನಿವಾಸಿಗಳು ಕೆಲಸ, ವೇತನಗಳನ್ನು ಕಳೆದುಕೊಂಡು, ಊರಿಗೂ ಮರಳಲಾಗದೆ ಕಷ್ಟಕರ ಪರಿಸ್ಥಿತಿಯಲ್ಲಿ ದಿನದೂಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಒಂದಿಬ್ಬರು ಅನಿವಾಸಿ ಶ್ರೀಮಂತ ಉದ್ಯಮಿಗಳು ತಮ್ಮ ಸಂಸ್ಥೆಯ ಅಧೀನದಲ್ಲಿರುವ ಕಾರ್ಮಿಕರನ್ನೂ, ಸಂಕಷ್ಟಕ್ಕೆ ಸಿಲುಕಿರುವ ಕೆಲವು ಮಂದಿ ಅನಿವಾಸಿಗಳನ್ನು ಊರಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತಿದ್ದರೂ ಬಹುಸಂಖ್ಯಾತ ಅನಿವಾಸಿಗಳು ಈಗಲೂ ತಮ್ಮ ತಾಯ್ನಾಡಿಗೆ ಮರಳುವ ವ್ಯವಸ್ಥೆಯ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲದೆ ಕಂಗಾಲಾಗಿದ್ದಾರೆ.
ಇಂತಹ ಸಂದಿಗ್ಧ ಸಮಯದಲ್ಲಿ ಯಾವುದೇ ಪ್ರಚಾರವಿಲ್ಲದೆ ಅನಿವಾಸಿ ಕನ್ನಡಿಗರ ಸಮಸ್ಯೆಗಳಿಗೆ ತನ್ನನ್ನು ತಾನು ತೊಡಗಿಸಿಕೊಂಡ ವ್ಯಕ್ತಿ ಅವರೇ ಅಬ್ದುಲ್ ರಝಾಕ್ ಉಳ್ಳಾಲ.

ಮಂಗಳೂರಿನ ಕುತ್ತಾರು ಸಂತೋಷ ನಗರ ನಿವಾಸಿ #ಅಬ್ದುಲ್ ರಝಾಕ್# ರವರು ಕರ್ನಾಟಕದ ಅನಿವಾಸಿ ಕನ್ನಡಿಗರ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆ.ಸಿ.ಎಫ್) ಇದರ ಮದೀನಾ ಮುನವ್ವರ ವಲಯ ಸಮಿತಿಯ ಸಾಂತ್ವನ ಚಟುವಟಿಕೆಗಳ ಮೂಲಕ ಸೌದಿ ಅರೇಬಿಯಾದಲ್ಲಿ ಗುರುತಿಸಿಕೊಂಡವರು.

ಕೆ.ಸಿ.ಎಫ್ ಸಂಘಟನೆಯ ಅಧೀನದಲ್ಲಿ ಮದೀನಾ ಹಾಗೂ ಸೌದಿಯ ಹಲವೆಡೆ ತಿಂಗಳುಗಳ ಕಾಲ ಆಸ್ಪತ್ರೆಯ ಫ್ರೀಝರ್ ಗಳಲ್ಲಿದ್ದ ಹಲವಾರು ಮ್ರತದೇಹಗಳನ್ನೂ, ಹಾಗೂ ಉಮ್ರಾ ಯಾತ್ರಾರ್ಥಿಗಳಾಗಿ ಬಂದು ಮದೀನಾದಲ್ಲಿ ಮರಣ ಸಂಭವಿಸಿದಾಗ ಅವರ ಅಂತ್ಯಕ್ರಿಯೆ ನಡೆಸಲು ಬೇಕಾಗುವ ಸೌದಿಯ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಸರಿಪಡಿಸಿ ಕನಿಷ್ಟ ದಿನಗಳಲ್ಲಿ ದಫನ ಮಾಡುವ ಕೆ.ಸಿ.ಎಫ್ ಸಾಂತ್ವನ ತಂಡದ ಕಾರ್ಯಕ್ಷೇತ್ರದಲ್ಲಿ ಮಂಚೂಣಿಯಲ್ಲಿರುವರು.

ಇದರ ಜೊತೆಗೆ ಇದೀಗ ಸೌದಿ ಅರೇಬಿಯಾದಲ್ಲಿ ಕೋವಿಡ್-19 ಕಾರಣದಿಂದಾಗಿ ಸಂಕಷ್ಟವನ್ನು ಎದುರಿಸುವ ಅನಿವಾಸಿಗಳ ಪಟ್ಟಿಯನ್ನು ಸಂಗ್ರಹಿಸಿ ಅವರಿಗೆ ತಮ್ಮ ಊರಿಗೆ ತೆರಳಲು ಬೇಕಾಗುವ ಕೆಲವು ದಾಖಲೆಗಳನ್ನು ನೋಂದಾಯಿಸಿ ಸೌದಿಯ ಜಿದ್ದಾದಲ್ಲಿರುವ ಭಾರತೀಯ ದೂತಾವಾಸ ಕಚೇರಿಯ ಅಧಿಕಾರಿಗಳು ಹಾಗೂ ಊರಿನ ಪ್ರಮುಖ ರಾಜಕೀಯ ನಾಯಕರ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದುಕೊಂಡು ನೊಂದ ಅನಿವಾಸಿಗಳನ್ನು ತಾಯ್ನಾಡಿಗೆ ತಲುಪಿಸುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.

ಇದೇ ವೇಳೆ ತುಂಬಾ ದಿನಗಳಿಂದ ನಿರೀಕ್ಷಿಸುತ್ತಿದ್ದ ಭಾರತ ಸರಕಾರದ ಅಧಿಕೃತ ವಂದೇ ಭಾರತ್ ಮಿಷನ್ ಪ್ರಾಯೋಜಿತ ಪ್ರಥಮ ವಿಮಾನವು ಜಿದ್ದಾದಿಂದ ಬೆಂಗಳೂರಿಗೆ ಗರ್ಭಿಣಿ ಮಹಿಳೆಯರು, ಮಕ್ಕಳು, ವಯಸ್ಕರು ಸೇರಿದಂತೆ ನೂರಕ್ಕೂ ಹೆಚ್ಚು ಪ್ರಯಾಣಿಕರು ಇಂದು (ಶನಿವಾರ) ಪ್ರಯಾಣ ಕೈಗೊಳ್ಳಲಿದ್ದು ಇದಕ್ಕೆ ಸಹಕರಿಸಿದ ಭಾರತದ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೂ, ಪ್ರತ್ಯೇಕವಾಗಿ ಎಲ್ಲಾ ಸಮಯದಲ್ಲೂ ಸೌದಿ ಅರೇಬಿಯಾದಲ್ಲಿರುವ ಅನಿವಾಸಿಗಳ ಸಮಸ್ಯೆಗೆ ಸ್ಪಂದಿಸುವ ಜಿದ್ದಾದಲ್ಲಿರುವ ಭಾರತೀಯ ದೂತಾವಾಸ ಕಛೇರಿಯ ಅಧಿಕಾರಿಗಳಿಗೆ ವಿಶೇಷ ಅಭಿನಂದನೆಗಳು ಸಲ್ಲಬೇಕೆಂದು ಈ ಮೂಲಕ ಅಬ್ದುಲ್ ರಝಾಕ್ ಉಳ್ಳಾಲ್ ರವರು ತಿಳಿಸಿದ್ದಾರೆ.

error: Content is protected !! Not allowed copy content from janadhvani.com