ಆಧುನಿಕ ಜಗತ್ತಿನಲ್ಲಿ ಸಹಾಯ, ಸಹಕಾರ ಎನ್ನುವುದು ಸ್ಥಾನವನ್ನು ಪಡೆಯಲು ಇರುವ ಸರಕಾಗಿ ಪರಿಣಮಿಸಿದೆ. ಇಂತಹ ಅಸಹನೀಯ ಪರಿಸ್ಥಿಯಲ್ಲೂ ಜನರು ಅರಿಯದ, ಯಾವುದೇ ಫಲಾಪೇಕ್ಷೆ ಇಲ್ಲದೆ ತನ್ನಷ್ಟಕ್ಕೆ ಕಾರ್ಯಾಚರಿಸುವ ರಝ್ಝಾಕ್ ಹಾಜಿಯಂತವರನ್ನು ಪರಿಚಯಿಸುವುದು, ಅವರನ್ನು ಗುರುತಿಸುವುದು ನಮ್ಮ ಕರ್ತವ್ಯ ಎಂಬ ಕಾರಣಕ್ಕಾಗಿ ಈ ಲೇಖನವನ್ನು ಓದುಗರ ಮುಂದಿಡುತ್ತಿದ್ದೇವೆ.
ಉಡುಪಿ ಜಿಲ್ಲೆಯ ಹೆಜಮಾಡಿಯ ಪ್ರಸಿದ್ದ “ಕೋಟೆ” ಮನೆತನದಲ್ಲಿ 1952ರ ಎಪ್ರಿಲ್ 4ರಂದು ಹಾಜಿ ಕೋಟೆ ಸುಲೈಮಾನ್ ಮತ್ತು ಸಲೀಮಾಬಿ ದಂಪತಿಯ ಮಗನಾಗಿ ರಝ್ಝಾಕ್ ಹಾಜಿಯವರು ಹುಟ್ಟಿದರು. ಹೆಜಮಾಡಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದ ಅವರು ಮುಂಬೈಯಲ್ಲಿ ಎಸಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿಯನ್ನು ಸಂಪಾದಿಸಿದರು. ಬಳಿಕ 1975 ಡಿ.2ರಂದು ಕೊಲ್ಲಿ ರಾಷ್ಟ್ರದ ಬಹರೈನಿಗೆ ಉದ್ಯೋಗಿಯಾಗಿ ಆಗಮಿಸಿ, ಒಂದು ವರ್ಷದ ಬಳಿಕ ಎಸಿ ವರ್ಕ್ ಶಾಪ್ ತೆರೆದರು. ತನ್ನ ಕಠಿಣ ಪರಿಶ್ರಮ ಹಾಗೂ ಸ್ಪಷ್ಟ ಗುರಿಯೊಂದಿಗೆ ಟ್ರಾನ್ಸ್‌ಪೋರ್ಟ್ ಕಂಪೆನಿ ಮತ್ತು ಸ್ಕ್ರ್ಯಾಪ್ ರಫ್ತು ಮಾಡಿಕೊಂಡು “ಮೆಟೆಲ್ಕೊ” ಎಂಬ ಕಂಪೆನಿಯನ್ನು ಸ್ಥಾಪಿಸಿ, ಅದರಲ್ಲಿ ಯಶಸ್ಸು ಗಳಿಸಿದರು. ಅದಲ್ಲದೆ, ರಝಾಕ್ ಹಾಜಿಯವರು ತನ್ನ ತಮ್ಮನಾದ ಸಯೀದ್ ಹಾಜಿಯರೊಂದಿಗೆ ಸೇರಿ ಬಹರೈನ್ ಸರಕಾರದ ತ್ಯಾಜ್ಯ ನಿರ್ವಹಣಾ ಕಂಪೆನಯನ್ನು ನಡೆಸುತ್ತಾ ಬಂದಿದ್ದಾರೆ.
ಚಿಕ್ಕಂದಿನಿಂದಲೇ ಸಮಾಜ ಸೇವೆಪರ ಒಲವು ಹೊಂದಿದ್ದ ಅವರು ಬಹರೈನ್ ನಲ್ಲೂ ಸಮಾಜ ಪರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. ತಮ್ಮ ಸುತ್ತಮುತ್ತಲಿರುವ ಜನರ ಅನುಕೂಲಕ್ಕಾಗಿ ಮತ್ತು ಬಹರೈನ್ ನಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಾ ಬಂದರು. ಸಮಾಜ ಸೇವಕರೆನಿಸಿಕೊಂಡವರ ಪೈಕಿ ಅನೇಕರು ಸ್ವಾರ್ಥ ಮನೋಭಾವದವರಾಗಿರುತ್ತಾರೆ. ಆದರೆ ಅವರೆಲ್ಲರಿಗಿಂತಲೂ ಭಿನ್ನರೆನಿಸಿಕೊಂಡ ರಝ್ಝಾಕ್ ಹಾಜಿ, ತಾನು ಮಾಡಿದ ಸಮಾಜ ಸೇವೆಯನ್ನು ಪ್ರಚಾರಕ್ಕಾಗಿ ಉಪಯೋಗಿಸದೆ “ಬಹರೈನ್ ನೆಲದಲ್ಲಿ ಸುಮಾರು 50 ವರ್ಷಗಳಿಂದ” (2025 ಡಿಸೆಂಬರ್ 2ಕ್ಕೆ 50 ವರ್ಷ) ಸಮಾಜ ಸೇವಕರಾಗಿ ಬ್ಯಾರಿ ಸಮುದಾಯದವರ ಅಭಿಮಾನವಾಗಿ ಬೆಳದು ನಿಂತವರಾಗಿದ್ದಾರೆ.
ಅವರಿಗೆ ಇಷ್ಟ ಇಲ್ಲದಿದ್ದರೂ ಅವರ ಬಗ್ಗೆ ಅನಿವಾಸಿ ಕನ್ನಡಿಗರಿಗೆ ತಿಳಿಸಬೇಕೆಂಬ ನಿಟ್ಟಿನಲ್ಲಿ ಈ ಲೇಖನವನ್ನು ಬರೆಯುತ್ತಿದ್ದೇನೆ.
ನಾಯಕನಲ್ಲಿರಬೇಕಾದ ಪ್ರಮಾಣಿಕತೆ, ಔದಾರ್ಯ, ಸಕಾರಾತ್ಮಕ ಭಾವನೆ ಹಾಗೂ ದೈರ್ಯ, ತಾಳ್ಮೆ ಎಲ್ಲವನ್ನೂ ಮೈಗೂಡಿಸಿಕೊಂಡವರು ರಝ್ಝಾಕ್ ಹಾಜಿ. ಶ್ರೀಮಂತ ವ್ಯಕ್ತಿಯಾದರೂ ಬಡವರ ಪಾಲಿನ ಆಶಾಕಿರಣವಾಗಿದ್ದಾರೆ. ಬಡ ಕೂಲಿಕಾರ್ಮಿಕರೂ ತನ್ನ ಮನೆಗೆ ಭೇಟಿ ನೀಡಿದರೆ ಅವರನ್ನು ಮನೆಯಲ್ಲಿ ಕೂರಿಸಿ ಅತಿಥಿ ಸತ್ಕಾರ ಮಾಡಿ ಅವರ ಯೋಗಕ್ಷೇಮ ವಿಚಾರಿಸಿ ಸಂತೋಷದಿಂದ ಕಳುಹಿಸಿ ಕೊಡುವ ವ್ವಕ್ತಿತ್ವ ಹಾಜಿ ಅವರದ್ದು. ಕನ್ನಡ ಸಂಘ ದೊಂದಿಗೆ ಹಾಗೂ ಅನಿವಾಸಿ ಕನ್ನಡಿಗರ ಇತರ ಸಂಘಟನೆಯೊಂದಿಗೂ ಉತ್ತಮ ಸಂಭಂದವನ್ನು ಹೊಂದಿರುವ ಅವರು, ರಾಜಕೀಯ ನಾಯಕರು ಹಾಗೂ ಗಣ್ಯ ವ್ಯಕ್ತಿಗಳು, ಧಾರ್ಮಿಕ ನೇತಾರರು ಬಹರೈನ್ ಗೆ ಭೇಟಿ ನೀಡಿದಾಗ ಅವರನ್ನು ಗೌರವಿಸಿ ಅತಿಥಿ ಸತ್ಕಾರ ಮಾಡಿ ಕಳುಹಿಸುವ ದೊಡ್ಡ ಗುಣ ಸ್ವಭಾವ ಅವರಲ್ಲಿದೆ. ಶಿಕ್ಷಣದಲ್ಲಿ ಮುಸಲ್ಮಾನರು ಹಿಂದುಳಿದಿರುವುದನ್ನು ಗಮನಿಸಿದ ರಝ್ಝಾಕ್ ಹಾಜಿ, ಬಹರೈನ್ ದೇಶದಲ್ಲಿ ಶಾಲೆಯನ್ನು ಆರಂಭಿಸಿದ್ದರು. ಆದರೆ ಶಿಕ್ಷಣ ಕ್ಷೇತ್ರ ಕೂಡ ವ್ಯಾಪಾರೀಕರಣಗೊಂಡಿರುವುದನ್ನು ಗಮನಿಸಿ ಅದನ್ನು ಅಲ್ಲಿಗೇ ಬಿಟ್ಟು ದಕ್ಷಿಣ ಕನ್ನಡ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಶನ್ ಎಂಬ ಸಂಸ್ಥೆಯನ್ನು ಆರಂಭಿಸಿ ಬಡ ವಿದ್ಯಾರ್ಥಿಗಳಿಗೆ ಉನ್ನತ ವಿಧ್ಯಾಭ್ಯಾಸಕ್ಕೆ ಸಹಾಯ ನೀಡಲು ಮುಂದಾದರು.
ಮುಸ್ಲಿಮ್ ಸಮುದಾಯದ ಆರ್ಥಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿ ಹಿತದೃಷ್ಟಿಯಿಂದ 1992 ರಲ್ಲಿ ತನ್ನ ಮನೆಯಲ್ಲಿ ಸಮುದಾಯ ಭಾಂದವರು ಮತ್ತು ಸಮಾನ ಮನಸ್ಕರನ್ನು ಒಟ್ಟು ಸೇರಿಸಿ ಸಮಾಜದ ಸಮಸ್ಯೆಗಳ ಕುರಿತು ಸಮಾಲೋಚನೆ ನಡೆಸಿ ದಕ್ಷಿಣ ಕನ್ನಡ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಶನ್ ಎಂಬ ಸಂಘಟನೆಯನ್ನು ಆರಂಭಿಸಿದರು. ದಕ್ಷಿಣ ಕನ್ನಡ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ 9 ಸದಸ್ಯರಿಂದ ಆರಂಭಗೊಂಡಿತು. ಉನ್ನತ ವಿಧ್ಯಾಭ್ಯಾಸ ಪಡೆದು ಬಹರೈನಿಗೆ ಆಗಮಿಸಿದವರು ಉಧ್ಯಮಿಗಳು ಸೇರಿ ಆರಂಭಿಸಿದ ಈ ಸಂಘಟನೆಯ ಅಧ್ಯಕ್ಷರಾಗಿಯು ಸುಮಾರು 33 ವರ್ಷಗಳಿಂದ ರಝ್ಝಾಕ್ ಹಾಜಿ ಸೇವಾ ನಿರತರಾಗಿದ್ದಾರೆ.
ಈ ಸಂಘಟನೆಯ ಮುಖಾಂತರ ಕರ್ನಾಟಕದ ಸುಮಾರು 150 ಬಡ ನಿರ್ಗತಿಕರನ್ನು ಗುರುತಿಸಿ ಕರ್ನಾಟಕದಲ್ಲಿರುವ ಒಂದು ಸಂಸ್ಥೆಯ ಮುಖಾಂತರ ಪ್ರತಿ ತಿಂಗಳಲ್ಲಿಯೂ ಪಡಿತರ ಆಹಾರದ ಕಿಟ್ಗಳನ್ನು ನೀಡುತ್ತಿದೆ, ಸಂಸ್ಥೆಯ ಸದಸ್ಯರ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ, ಮಕ್ಕಳ ಮದುವೆ, ಮನೆ ನಿರ್ಮಾಣಕ್ಕೆ ಹಣ ಸಹಾಯವನ್ನು ನೀಡುತ್ತಾ ಬಂದಿದೆ. ಅದೇ ರೀತಿ ಸದಸ್ಯರಿಗೆ ಹಣದ ಆವಶ್ಯಕತೆ ಬಂದರೆ ಬಡ್ಡಿ ರಹಿತ ಸಾಲವನ್ನು ಸುಮಾರು 33 ವರ್ಷಗಳಿಂದಲೂ ನೀಡುತ್ತಾ ಬಂದಿದೆ. ಈ ಸಂಘಟನೆಯ ಮುಖಾಂತರ ಅನೇಕ ಡಾಕ್ಟರ್, ಇಂಜಿನೀಯರ್ ಗಳನ್ನು ಸಮಾಜಕ್ಕೆ ಅರ್ಪಿಸಿದೆ.
ಪ್ರತೀ ತಿಂಗಳು ಎರಡನೇ ಶುಕ್ರವಾರ ಈ ಸಂಘಟನೆಯ ಮಾಸಿಕ ಸಭೆಗೆ ಹೋಗುವುದೆಂದರೆ ಎಲ್ಲಾ ಸದಸ್ಯರಿಗೂ ಹಬ್ಬದಲ್ಲಿ ಪಾಲ್ಗೊಂಡ ಖುಷಿ .ತನ್ನ ಕುಟುಂಬದವರ ಜೀವನದ ಹೊಣೆಯನ್ನು ಹೊತ್ತು ಉದ್ಯೋಗ ಅರಸಿ ಕೊಲ್ಲಿ ರಾಷ್ಟ್ರ ಬಹರೈನಿಗೆ ಬಂದು ತನ್ನ ಕುಟುಂಬವೆಲ್ಲವನ್ನೂ ತೊರೆದು ಅನಿವಾಸಿಯಾಗಿ ಇಲ್ಲಿ ವಾಸಿಸುತ್ತಿರುವ ಸದಸ್ಯರಿಗೆ ತಿಂಗಳ ಎರಡನೇಯ ಶುಕ್ರವಾರ ಹಬ್ಬದ ವಾತಾವರಣ ಎಲ್ಲರೂ ಸುಖ ದುಃಖವನ್ನು ಹಂಚಿ ಸಂತೋಷ ದಿಂದ ಕಳೆಯುವ ದಿನ.
ಶ್ರೀಮಂತನೆಂಬ ಅಹಂಕಾರ ಇಲ್ಲದೆ ಎಲ್ಲರೊಂದಿಗೂ ತಾಳ್ಮೆಯಿಂದ ಸಹೋದರನಂತೆ ಯೋಗ ಕ್ಷೇಮ ವಿಚಾರಿಸಿ ಕಷ್ಟದಲ್ಲಿರುವವರಿಗೆ ಪರಿಹಾರವನ್ನು ಕಂಡುಕೊಳ್ಳುವ ರಝ್ಝಾಕ್ ಹಾಜಿ, ಅನಾಥರ ರಕ್ಷಕರಾಗಿಯೂ ಅನ್ನದಾತ ರಾಗಿಯು ಶಿಕ್ಷಣದ ಮಹತ್ವವನ್ನು ಅರಿತು ಶಿಕ್ಷಣಕ್ಕೆ ಆದ್ಯತೆ ನೀಡುತ್ತಿರುವ ಶಿಕ್ಷಣದಾತರಾಗಿದ್ದಾರೆ.
2023 ಸೆಪ್ಟಂಬರ್ 6ರಂದು ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಬಹರೈನ್ ಇಂಡಿಯನ್ ಸ್ಕೂಲ್ ಸಭಾಂಗಣದಲ್ಲಿ ಅಬ್ದುಲ್ ರಝ್ಝಾಕ್ ಹಾಜಿಯವರನ್ನು ಬಹರೈನ್ ದೇಶದಲ್ಲಿ ಮಾಡಿದ ಸಮಾಜಸೇವೆ ಹಾಗೂ ಅತ್ಯುತ್ತಮ ಉದ್ಯಮಿ ಎಂಬ ನಿಟ್ಟಿನಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸಿದರು. ಕರ್ನಾಟಕ ಸರಕಾರದ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದರು. 2024 ರಲ್ಲಿ ಸೌದಿ ಅರೇಬಿಯದಲ್ಲಿ ನಡೆದ 17ನೇ ವಿಶ್ವ ಕನ್ನಡ ಸಾಂಸ್ಕೃತಿಕ ಸಮ್ಮೇಳನದಲ್ಲಿ ಸಾಮಾಜಿಕ ಕಾರ್ಯಕರ್ತ ರಝಾಕ್ ಹಾಜಿಯವರನ್ನು ಕರ್ನಾಟಕ ಸರಕಾರದ ಸಭಾಪತಿ ಯು.ಟಿ.ಖಾದರ್ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಕಟ ಪೂರ್ವ ಅಧ್ಯಕ್ಷ ಫ್ರೊ. ಎಸ್.ಜಿ .ಸಿದ್ದರಾಮಯ್ಯ , ಡಾ.ಆರತಿ ಕೃಷ್ಣ (ಉಪಾಧ್ಯಕ್ಷರು ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ ಸರಕಾರ), ಶಾಸಕ ಅಶೋಕ್ ಕುಮಾರ್ ರೈ, ಸಚಿವ ರಹೀಮ್ ಖಾನ್, ವಕೀಲ ಪಧ್ಮರಾಜ್ ಆರ್. ಹಾಗೂ ಸಮ್ಮೇಳನ ಸಮಿತಿಯ ಸ್ಥಾಪಕಾಧ್ಯಕ್ಷ ಮಂಜುನಾಥ ಸಾಗರ್ ಉಪಸ್ಥಿತಿಯಲ್ಲಿ “ವಿಶ್ವಮಾನ್ಯ ಅಂತರಾಷ್ಟ್ರೀಯ ಪ್ರಶಸ್ತಿ 2024” ನೀಡಿ ಸನ್ಮಾನಿಸಲ್ಪಟ್ಟರು.
2024 ರಂದು ಕರ್ನಾಟಕ ಕನ್ನಡ ಭವನ ಬಹರೈನ್ ನಲ್ಲಿ ಕರ್ನಾಟಕ ಸರಕಾರದ ಗೃಹಸಷಿವ ಜಿ.ಪರಮೇಶ್ವರ ರವರಿಂದಲೂ ಸನ್ಮಾನಿಸಲ್ಪಟ್ಟಿದ್ದಲ್ಲದೆ, ಬಹರೈನ್ ನಲ್ಲಿರುವ ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನಿಸಲ್ಪಟ್ಟವರಾಗಿದ್ದಾರೆ.
2002 ನೇಯ ಇಸವಿಯಲ್ಲಿ ದುಬೈ ಯಿಂದ ಬಹರೈನ್ ಗೆ ಆಗಮಿಸಿದ ಇ.ಕೆ. ಇಬ್ರಾಹಿಮ್ ಕಿನ್ಯ ಹಾಗೂ ಬಾಪಕುಂಞಿ ಉಚ್ಚಿಲರನ್ಬೊಳಗೊಂಡ ಡಿಕೆಎಸ್‌ಸಿ ಸಂಸ್ಥೆಗಯ ಪೋಷಕ ಸಂಘಟನೆಯನ್ನು ಆರಂಭಿಸಲು ಮುಂದಾಗಿ ಇದರ ಅಧ್ಯಕ್ಷ ಸ್ಥಾನವನ್ನು ಹಾಜಿಯವರಲ್ಲಿ ವಹಿಸಬೇಕೆಂದು ಕೇಳಿಕೊಂಡಾಗ ಅಧ್ಯಕ್ಷ ಸ್ಥಾನವನ್ನು ನಿರಾಕರಿಸಿ ನನ್ನ ಎಲ್ಲಾ ಸಹಕಾರವನ್ನು ನೀಡುವೆನೆಂಬ ಭರವಸೆಯನ್ನು ನೀಡಿ ಅವರ ಮನೆಯಲ್ಲಿಯೇ ಹೊಸ ಸಮಿತಿಯನ್ನು ರಚಿಸಿ ಆ ಸಂಘಟನೆಯ ಬೆಳವಣಿಗೆಗೆ ಉತ್ತೇಜನ ನೀಡಿದರು. ಕುಂಬೋಳ್ ಆಟಕೋಯ ತಂಘಳ್ ಬಹರೈನಿಗೆ ಭೇಟಿ ನೀಡಿದ ಸಂದರ್ಭದಲ್ಲಿ ರಝ್ಝಾಕ್ ಹಾಜಿಯವರನ್ನು ಭೇಟಿಯಾಗಿ ಮೂಳೂರು ಮರ್ಕಝ್ ನಲ್ಲಿ ಕಲಿಯು ವಿಧ್ಯಾರ್ಥಿಗಳ ಕೊಠಡಿಗೆ ಸಹಾಯ ಮಾಡಬೇಕೆಂದು ತಿಳಿಸಿದಾಗ ಒಂದು ಕೊಠಡಿಯ ಖರ್ಚನ್ನು ನೀಡಿ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದವರು ರಝ್ಝಾಕ್ ಹಾಜಿ.
2014 ರಲ್ಲಿ ಬಹರೈನ್ ನೆಲದಲ್ಲಿ ಕೆಸಿಎಫ್ ಎಂಬ ಸಂಘಟನೆ ಆರಂಭಗೊಂಡು ಈ ಸಂಘಟನೆಯನ್ನು ಫಾರೂಕ್ ಕುಂಬ್ರ ಮತ್ತು ಉಸ್ಮಾನ್ ಸಂಪ್ಯ ಮುನ್ಡಡೆಸುತ್ತಿದ್ದರು. ಬಹರೈನ್ ಬ್ಯಾರಿ ಸಮುದಾಯದ ನಾಯಕರಾಗಿದ್ದಂತಹ ರಝ್ಝಾಕ್ ಹಾಜಿಯವರನ್ನು ಭೇಟಿಯಾಗಿ ಅವರಿಗೆ ಕೆಸಿಎಫ್ ಸಂಘಟನೆಯ ಬಗ್ಗೆ ಮನವರಿಕೆ ಮಾಡಿಕೊಟ್ಟು ಸಂಸ್ಥೆಯ ಮೊದಲನೇಯ ಬೃಹತ್ ಕಾರ್ಯಕ್ರಮಕ್ಕೆ ಆಮಂತ್ರಣ ನೀಡಿದ ಸಂದರ್ಭದಲ್ಲಿ ಕೆಸಿಎಫ್ ಬಹರೈನ್ ಸಂಘಟನೆಯನ್ನು ಇಬ್ಬರು ಇಂಜಿನಿಯರ್ ಗಳು ನಡೆಸುತ್ತಿದ್ದಾರೆಂದು ತಿಳಿದು ರಝ್ಝಾಕ್ ಹಾಜಿಯವರು ತುಂಬಾ ಸಂತೋಷಪಟ್ಟರು. ಕೆಸಿಎಫ್‌ನ ಸಭೆಗಳನ್ನು ನಡೆಸಲು ತಮ್ಮ ಆಫೀಸನ್ನೇ ಬಿಟ್ಟುಕೊಟ್ಟರು. ಕೆಸಿಎಫ್ ಸಂಘಟನೆಯ ಸಭೆಗಳು ಸ್ವಲಾತ್ ಮಜ್ಲಿಸ್ಗಳು ಬೇರೆ ಬೇರೆ ಕಡೆ ನಡೆಯುತ್ತಿದ್ದು ಕೆಸಿಎಫ್ ಸಂಘಟನೆಗೆ ಶಾಶ್ವತವಾಗಿ ಒಂದು ಸೆಂಟರ್ ಮನಾಮದಲ್ಲಿ ಬೇಕೇಂದನ್ನು ರಝ್ಝಾಕ್ ಹಾಜಿಯವರ ಗಮನಕ್ಕೆ ತಂದಾಗ 2015 ಜನವರಿಯಲ್ಲಿ ಕೂರತ್ ತಂಙಳ್ ಮತ್ತು ಝೈನಿ ಉಸ್ತಾದರನ್ನು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ತಮ್ಮ ಮನೆಗೆ ಆಹ್ವಾನಿಸಿ ಕೆಸಿಎಫ್ ಸೆಂಟರಿಗೆ ನೆರವಿತ್ತರು.
ಮಂಜನಾಡಿ ಅಬ್ಬಾಸ್ ಉಸ್ತಾದರು ಅಲ್ ಮದೀನ ಸ್ಥಾಪನೆಯ ಸಹಾಯಾರ್ಥ ಬಹರೈನಿಗೆ ಭೇಟಿ ನೀಡಿದ ಎಲ್ಲಾ ಸಂದರ್ಭದಲ್ಲೂ ಸಹಾಯವನ್ನು ನೀಡಿ ಶಿಕ್ಷಣಕ್ಕೆ ತನ್ನ ಬೆಂಬಲ ಇರುವುದನ್ನು ಸದಾ ಸಾಬೀತು ಪಡಿಸಿದ್ದರು.
ರಝ್ಝಾಕ್ ಹಾಜಿಯವರು ಬಹರೈನ್ ನಲ್ಲಿ ಖಡಿಮೆ ಸಂಬಳದಲ್ಲಿರುವ ವ್ಯಕ್ತಿಗಳನ್ನು ಅವರ ಕಂಪನಿಯಲ್ಲಿ ಕೆಲಸಮಾಡುತ್ತಿರುವವರನ್ನು ಗುರುತಿಸಿ ಆಯ್ಕೆಮಾಡಿ ಉಮ್ರಾ ಯಾತ್ರೆಗೆ ಕಳುಹಿಸುತ್ತಾ ಬಂದಿದ್ದಾರೆ. ಉತ್ತರ ಕರ್ನಾಟಕದಲ್ಲಿ ಶಿಕ್ಷಣದ ಕ್ರಾಂತಿಯನ್ನು ನೀಡುತ್ತಿರುವ “ಇಹ್ಸಾನ್ ಕರ್ನಾಟಕ”ಕ್ಕೆ ತಮ್ಮ ಸಹಾಯವನ್ನು ನೀಡಿದ್ದನ್ನು ಮರೆಯಲು ಸಾಧ್ಯ ಇಲ್ಲ.
2018 ರಲ್ಲಿ ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ ಬಹರೈನ್ ಸಮಿತಿಯ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಬಹರೈನಿಗೆ ಆಗಮಿಸಿದ ನಾಯಕರ ಒತ್ತಾಯಕ್ಕೆ ಮಣಿದು ಕರ್ನಾಟಕ ಕಾಂಗ್ರೆಸ್ ಪಕ್ಷದ ಅಲ್ಪ ಸಂಖ್ಯಾತ ಘಟಕ ಬಹರೈನ್‌ನ ಅಧ್ಯಕ್ಷರಾಗಿ ಆಯ್ಕೆಯಾದರು. ತದನಂತರ ಬಂದ ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ ಇದರ ಉಪಾಧ್ಯಕ್ಷರಾದ ಆರತಿ ಕೃಷ್ಣ ರಝ್ಝಾಕ್ ಹಾಜಿಯವರನ್ನು ಕರ್ನಾಟಕ ಕಾಂಗ್ರೆಸ್ ಅನಿವಾಸಿ ಬಹರೈನ್ ಘಟಕದ ಅಧ್ಯಕ್ಷರನ್ನಾಗಿ ಬಹರೈನ್ ಕನ್ನಡಿಗರ ಸಂಘ ಸಂಸ್ಥೆಗಳ ನಾಯಕರ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು. ಅಭಿಮಾನಿಗಳ ಹಿತೈಷಿಗಳ ಒತ್ತಾಯಕ್ಕೆ ಮಣಿದು ಆ ಸ್ಥಾನವನ್ನೂ ಅವರು ವಹಿಸಿದ್ದರು.
✍️ ಹನೀಫ್ ಸಾಗ್ ಬಾಗ್ ಕಿನ್ಯ ಬಹರೈನ್