janadhvani

Kannada Online News Paper

ಹಾಜಿ ಮಮ್ತಾಝ್ ಅಲಿ,ಕೃಷ್ಣಾಪುರ! ಈ ಹೆಸರು ದಕ್ಷಿಣ ಕನ್ನಡ ಮಾತ್ರವಲ್ಲ ಅತ್ತ ಕೇರಳದಲ್ಲಿಯೂ ಚಿರಪರಿಚಿತ ಹೆಸರು.ಹಾಜಾರ್ ರವರನ್ನು ಹತ್ತಿರದಿಂದ ಬಲ್ಲವರು ಅವರ ಸೇವೆಯ ಕುರಿತು ಹೇಳಿದಾಗ ಅವರ ಕುರಿತು ಬರೆಯಬೇಕೆಂದು ನಾನು ತೀರ್ಮಾನಿಸಿದೆ.

ಶ್ರೀಮಂತರೆಂದರೆ ಜನ ಸಾಮಾನ್ಯರ ಕೈಗೆಟುಕದವರೆಂಬ ಆರೋಪವನ್ನು ಸುಳ್ಳಾಗಿಸುವ ಹಾಜಿ ಮಮ್ತಾಝ್ ಅಲಿಯವರು ಸದಾ ಜನ ಸೇವೆಯಲ್ಲಿಯೇ ತೃಪ್ತಿ ಕಂಡವರು.. ಶ್ರೀಮಂತಿಕೆ ಎಂಬ ದೊಡ್ಡತನ ಅವರ ಜೀವನದಲ್ಲಿ ಕಾಣಲು ಸಾಧ್ಯವಿಲ್ಲ. ಹಿರಿಯರು, ಕಿರಿಯರು, ಅಸಹಾಯಕರು, ನೊಂದವರು, ಬಡವರು ಯಾರೇ ಅವರ ಬಳಿ ಬರಲಿ ಅವರನ್ನು ಮುಗುಳ್ನಗೆಯೊಂದಿಗೆ ಮಾತನಾಡಿ ಸಾಂತ್ವನ ಪಡಿಸುವ ಹಾಜಾರ್ ರವರ ಗುಣ ಯಾರ ಮನಸ್ಸನ್ನೂ ಗೆಲ್ಲದಿರದು.

ಶ್ರೀಮಂತ ರೆಂದರೆ ಸದಾ ಬ್ಯುಸಿ ಇರುವವರು. ವ್ಯಾಪಾರ, ವಹಿವಾಟು ಗಳಲ್ಲಿ ತಲ್ಲೀನರಾದವರು.ಅವರನ್ನು ಮಾತನಾಡಿಸಲು ಸಮಯ ನಿಗಧಿ ಪಡಿಸಬೇಕು.ಆದರೆ,ಹಾಜಿ ಮಮ್ತಾಝ್ ಅಲಿಯವರು ಹಾಗಲ್ಲ.ಎಷ್ಟೇ ಬ್ಯುಸಿ ಇರಲಿ ಮುಕ್ತವಾಗಿ ಮಾತನಾಡಲು ಸಿಗುವ ಅಪರೂಪದ ನಾಯಕ. ಕರ್ನಾಟಕ ಸುನ್ನೀ ಚಳುವಳಿಯಲ್ಲಿ ಅವರದೇ ಆದ ಪಾತ್ರವಿದೆ‌.

ಇಲ್ಲಿಯ ಯಾವುದೇ ಸುನ್ನೀ ಸಂಸ್ಥೆಗಳ ಸಮ್ಮೇಳನ, ಸಮಾರಂಭ ಇರಲಿ, ಸಂಘಟನೆ ಗಳ ಕಾರ್ಯಕ್ರಮ ಇರಲಿ ಹಾಜಿ ಮಮ್ತಾಝ್ ಅಲಿಯವರ ಸಕ್ರೀಯ ಸಾನಿಧ್ಯ ಇದ್ದೇ ಇರುತ್ತದೆ. ಸುನ್ನತ್ ಜಮಾ ಅತ್ ನ ಕಾರ್ಯಕ್ರಮ ಗಳಿಗೆ ತನ್ನ ಎಲ್ಲಾ ವ್ಯವಹಾರ ಗಳನ್ನು ಬದಿಗೊತ್ತಿ ಉಲಮಾಗಳೊಂದಿಗೆ ಸೇರಿ ದುಡಿಯುತ್ತಾರೆ. ಉಮಾರಾ ನಾಯಕರು ಎಂದರೆ ನಾಯಕತ್ವ ಕೊಡುವವರು ,ಆದೇಶ ಮಾಡುವವರೆಂಬ ಆಪಾದನೆ ಯನ್ನು ಹಾಜರ್ ರವರು ಸುಳ್ಳಾಗಿಸುತ್ತಾರೆ. ಅವರೇ ಸ್ವತಃ ಕಾರ್ಯಾಚರಣೆ ಗಿಳಿದು ಇತರರನ್ನು ಹುರಿದುಂಬಿಸುತ್ತಾರೆ.

ಉಲಮಾಗಳು, ಮುತ ಅಲ್ಲಿಮರು ಎಂದರೆ ಹಾಜಾರ್ ರವರಿಗೆ ತುಂಬಾ ಪ್ರೀತಿ. ಸಣ್ಣ ಮುತ ಅಲ್ಲಿಮನಾದರೂ ಗೌರವ ಕೊಟ್ಟೇ ಮಾತನಾಡುತ್ತಾರೆ. ಸದಾ ಉಲಮಾಗಳೊಂದಿಗೆಯೇ ಅವರ ಒಟನಾಟ.ಉಲಮಾಗಳು ನೇತೃತ್ವ ನೀಡುವ ಬಹುತೇಕ ಸಂಘ, ಸಂಸ್ಥೆ ಗಳಲ್ಲಿ ಹಾಜಾರ್ ರವರ ಸಾನಿಧ್ಯ ಇದ್ದೇ ಇರುತ್ತದೆ.ಹೀಗೆ ಉಲಮಾಗಳ ಜೊತೆ ಅವಿನಾಭಾವ ಸಂಬಂಧ ಇಟ್ಟುಕೊಂಡ ಉಮರಾ ನಾಯಕರ ಪೈಕಿ ಹಾಜಾರ್ ರವರು ಮುಂಚೂಣಿ ಯಲ್ಲಿದ್ದಾರೆ.

ಮಂಗಳೂರಿನ ಪ್ರತಿಷ್ಠಿತ ಪಂಪುವೆಲ್ ನ ವಿಷನ್ ಗ್ರಾಫಿಕ್ಸ್ ಇದರ ಮ್ಹಾಲಕ ಹನೀಫ್ ರವರು ಒಮ್ಮೆ ನನ್ನೊಂದಿಗೆ ಹೀಗೆ ಹೇಳಿದ್ದರು: “ಮಮ್ತಾಝ್ ಅಲಿಯವರು ಒಂದು ವಿಷಯಕ್ಕೆ ಕೈ ಹಾಕಿದರೆ ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸದೆ ಅವರಿಗೆ ನಿದ್ದೆ ಬಾರದು. ಎಷ್ಟೇ ಬ್ಯುಸಿ ಇರಲಿ ನಿರಂತರ ಪೋನ್ ಕಾಲ್ ಮಾಡಿ ಅವರು ವಿಚಾರಿಸುತ್ತಾರೆ.ತನ್ನ ಮಾತು ಮಾತ್ರ ಕೇಳಬೇಕೆಂಬ ಹಠತನ ಅವರಿಗಿಲ್ಲ. ಇನ್ನೊಬ್ಬರ ಮಾತನ್ನು ಆಲಿಸುತ್ತಾರೆ.ಅದು ಸರಿಯೆನಿಸಿದರೆ ಅದನ್ನು ಒಪ್ಪುವ ಹೃದಯವಂತರು.” ಇದೇ ರೀತಿಯ ಮಾತನ್ನು ಅಡ್ವಕೇಟ್ ಜಿಶಾನ್ ರವರು ಹೇಳಿದ್ದರು.” ಮಂಗಳೂರು ಗೋಲಿಬಾರ್ ಬಳಿಕ ಬಂಧನ ವಾದವರ ಬಗ್ಗೆ ಅತೀ ಹೆಚ್ಚು ಮುತುವರ್ಜಿ ವಹಿಸಿ ದುಡಿದವರು ಮಮ್ತಾಝ್ ಅಲಿಯವರು. ನನಗೆ ಪ್ರತೀ ದಿನಾ ಕರೆಗಳನ್ನು ಮಾಡಿ ವಿಚಾರಿಸುತ್ತಾರೆ.ಅವರ ಸಾಮಾಜಿಕ ಬದ್ಧತೆ ಮೆಚ್ಚಲೇ ಬೇಕು.”

ನೋಡಿ! ಇದು ಹಾಜಾರ್ ರವರ ಸಮುದಾಯ ಕಾಳಾಜಿ ಯ ಬಗ್ಗೆ ಇರುವ ಉದಾಹರಣೆಗಳು ಮಾತ್ರ.ತನಗೆ ವಹಿಸಿದ ಜವಾಬ್ದಾರಿ ಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸುವ ಉಮರಾ ನಾಯಕರಿದ್ದರೆ ಅದು ಹಾಜಿ ಮಮ್ತಾಝ್ ಅಲಿ ಎಂದು ಧೈರ್ಯ ದಿಂದ ಹೇಳಬಹುದು.

ತನ್ನ ಕಿರಿಯ ಪ್ರಾಯದಲ್ಲಿಯೇ ಕೃಷ್ಣಾಪುರ ಎಂಬ ಪ್ರತಿಷ್ಠಿತ ಮೊಹಲ್ಲಾದ ಅಧ್ಯಕ್ಷ ಹುದ್ದೆಗೇರುವ ಭಾಗ್ಯ ಲಭಿಸಿದ ಹಾಜಿ ಮಮ್ತಾಝ್ ಅಲಿಯವರು ಬಳಿಕ 2000 ದಿಂದ 2020 ರ ತನಕ ಸರಿಸುಮಾರು ನಿರಂತರ ಹದಿನಾಲ್ಕು ವರ್ಷಕ್ಕಿಂತಲೂ ಅಧಿಕ ವಾಗಿ ಅಧ್ಯಕ್ಷರಾಗಿ ದುಡಿಯುವ ಭಾಗ್ಯ ಅವರಿಗೆ ಸಿಕ್ಕಿತು. ಇದೀಗ ಮತ್ತೆ ಕಳೆದ ಎರಡು ವರ್ಷಗಳಿಂದ ಕೃಷ್ಣಾಪುರ ಜಮಾ ಅತ್ ಇದರ ಅಧ್ಯಕ್ಷ ಪದವಿಯಲ್ಲಿದ್ದಾರೆ.

ಕೃಷ್ಣಾಪುರ ಜಮಾ ಅತ್ ಅಧೀನದಲ್ಲಿರುವ ಬದ್ರಿಯಾ ಶಿಕ್ಷಣ ಸಂಸ್ಥೆ ಇದರ ಅಧ್ಯಕ್ಷರಾಗಿ ಹಲವಾರು ವರ್ಷ ಸೇವೆ ಮಾಡಿ ಈಗ ಅದರ ಗೌರವಾಧ್ಯಕ್ಷರಾಗಿದ್ದಾರೆ. ಪಂಪುವೆಲ್ ಮಸ್ಜಿದುತ್ತಖ್ವಾ ನಿರ್ಮಾಣದ ರುವಾರಿಗಳಲೊಬ್ಬರಾದ ಹಾಜಾರ್ ರವರು ಕಳೆದ ಹದಿನೈದು ವರ್ಷಗಳಿಂದ ಅದರ ಪ್ರಧಾನ ಕಾರ್ಯದರ್ಶಿ ಯಾಗಿದ್ದಾರೆ ಅದರ ಜೊತೆ ಮಿಸ್ಬಾಹ್ ವುಮೆನ್ಸ್ ಕಾಲೇಜ್ ಕಾಟಿಪಳ್ಳ ಇದರ ಸಾರಥಿಯೂ ಹೌದು.

ಮುಸ್ಲಿಂ ಸೆಂಟ್ರಲ್ ಕಮಿಟಿ ದಕ್ಷಿಣ ಕನ್ನಡ, ಉಡುಪಿ ಇದರ ಉಪಾಧ್ಯಕ್ಷರಾಗಿ ಕಳೆದ ಹನ್ನೆರಡು ವರ್ಷಗಳಿಂದ ಸೇವೆ ಮಾಡುವ ಇವರು,ಬ್ಯಾರೀಸ್ ಕಲ್ಚರಲ್ ಪಾರಮ್ ದುಬೈ , ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಯಾಂಡ್ ಇಂಡಸ್ಟ್ರಿ ಇದರ ಅಂಗವಾಗಿದ್ದಾರೆ ಮತ್ತು ಮುಸ್ಲಿಂ ಜಮಾ ಅತ್ ರಾಜ್ಯ ಘಟಕದ ಉಪಾಧ್ಯಕ್ಷ ಮತ್ತು ಮುಸ್ಲಿಂ ಜಮಾ ಅತ್ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕುಂಬೋಳ್ ತಂಙಳ್ ಸಾರಥ್ಯದ ಮುಳೂರ್ ಸುನ್ನೀ ಸೆಂಟರ್ ಇದರ ಇಪ್ಪತ್ತನೇಯ ವಾರ್ಷಿಕ ಸಮಾರಂಭದ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಯಶಸ್ಸಿ ಮುನ್ನಡೆಸಿದ ಹಾಜಾರ್ ರವರು ಇದೀಗ ಅದರ ಬೆಳ್ಳಿ ಹಬ್ಬ ಸಮಾರಂಭದ ಸ್ವಾಗತ ಸಮಿತಿಯ ಉಪಾಧ್ಯಕ್ಷರಾಗಿದ್ದಾರೆ. ಕಳೆದ ಬಾರಿ ನಡೆದ ಅಲ್ ಮದೀನಾ ಮಂಜನಾಡಿ ಇದರ ಬೆಳ್ಳಿ ಹಬ್ಬ ಸಮಾರಂಭದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

ಹೀಗೆ ಒಂದಲ್ಲ…ಎರಡಲ್ಲ… ಹತ್ತಾರು ಜವಾಬ್ದಾರಿ ಗಳನ್ನು ಹೆಗಲ ಮೇಲೆ ಹೊತ್ತು ಸ್ವತಃ ಕಾರ್ಯಾಚರಣೆಗಿಳಿದ ಅಪರೂಪದ ಉಮರಾ ನಾಯಕರು ಹಾಜಿ ಮಮ್ತಾಝ್ ಅಲಿ ಕೃಷ್ಣಾಪುರ ರವರು.ತನ್ನ ವ್ಯವಹಾರ ಗಳನ್ನು ಬದಿಗಿಟ್ಟು ಸುನ್ನತ್ ಜಮಾ ಅತ್ ಮತ್ತು ಸಮುದಾಯ ಸೇವೆಗೆ ಟೊಂಕ ಕಟ್ಟಿನಿಂತ ಹಾಜಾರ್ ರವರ ಸೇವೆ ನಿಜಕ್ಕೂ ಮೆಚ್ಚಲೇ ಬೇಕಾದದ್ದು. ಯಾವುದೇ ರಾಜಕೀಯ ಪಕ್ಷಗಳಲ್ಲಿ ಗುರುತಿಸದೆ,ರಾಜಕೀಯ ಲಾಭಕ್ಕಾಗಿ ಸೇವೆಯನ್ನು ಮಾಡದೆ,ಎಲ್ಲಾ ರಾಜಕೀಯ ಪಕ್ಷಗಳಿಂದಲೂ ಸಮಾನ ಅಂತರ ಕಾಪಾಡಿಕೊಂಡಿರುವ ಹಾಜಿ ಮಮ್ತಾಝ್ ಅಲಿಯವರಿಗೆ ಅಲ್ಲಾಹನು ದೀರ್ಘಾಯುಷ್ಯ, ಆಫಿಯತ್ ಆರೋಗ್ಯ ಕರುಣಿಸಲಿ.

✍️ ಹಸನ್ ಝುಹ್’ರಿ, ಮಂಗಳಪೇಟೆ

error: Content is protected !! Not allowed copy content from janadhvani.com