janadhvani

Kannada Online News Paper

ಈದ್ ದಿನ ಕರ್ಫ್ಯೂ ಸಡಿಲಿಕೆಗೆ ಮುಸ್ಲಿಂ ಜಮಾಅತ್ ಮನವಿ

ಮಂಗಳೂರು: ರಂಝಾನ್ ಉಪವಾಸ ಮುಗಿದು, ಇದೀಗ ಮುಸ್ಲಿಮರು ಈದ್ ಆಚರಣೆಯ ಸಂಭ್ರಮದಲ್ಲಿದ್ದು, ಕೋವಿಡ್ ಹರಡುವ ಹಿನ್ನೆಲೆಯಲ್ಲಿ ಸರಳ ರೀತಿಯಲ್ಲಿ ಆಚರಿಸಲು ನಿರ್ಧಾರ ಕೈಗೊಂಡಿದ್ದಾರೆ.

ಏತನ್ಮಧ್ಯೆ ಈದ್ ದಿನ ಆದಿತ್ಯವಾರ ಆದಲ್ಲಿ ಅಂದು ಕರ್ಫ್ಯೂ ಸಡಿಲಿಕೆ ಮಾಡುವಂತೆ ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಜಿಲ್ಲಾಡಳಿತವನ್ನು ಮನವಿ ಮಾಡಿದೆ.

“ಕೋವಿಡ್ ಸಂಕಷ್ಟದ ಸಮಯದಲ್ಲಿ ಜಿಲ್ಲಾಡಳಿತದ ಎಲ್ಲಾ ಸೂಚನೆಗಳನ್ನು ಜಿಲ್ಲೆಯ ಮುಸ್ಲಿಮರು ಪಾಲಿಸುವ ಮೂಲಕ ಕೋವಿಡ್ ವಿರುದ್ಧದ ಹೋರಾಟದಲ್ಲಿ ಕೈ ಜೋಡಿಸಿರುತ್ತಾರೆ.”

“ಪವಿತ್ರ ರಂಝಾನ್ ಉಪವಾಸದ ತಿಂಗಳಿನಲ್ಲಿಯೂ, ಶುಕ್ರವಾರವೂ ಮಸೀದಿಗಳಿಂದ ದೂರ ಉಳಿದಿದ್ದು ಅಲ್ಲದೇ, ಈ ಬಾರಿ ಸರಳ ಈದ್ ಆಚರಣೆಗೆ ಸಿದ್ಧರಾಗಿದ್ದಾರೆ‌. ಹೊಸ ಬಟ್ಟೆ ಖರೀದಿಗೂ ನಗರಗಳಲ್ಲಿ ಗುಂಪುಗೂಡದೆ ಸಾಮಾಜಿಕ ಅಂತರ ಕಾಪಾಡಿರುತ್ತಾರೆ‌. ಜನಜಂಗುಳಿಯನ್ನು ತಡೆಯುವ ಸಲುವಾಗಿ ಬಟ್ಟೆ ವ್ಯಾಪಾರಸ್ಥರು ಅಂಗಡಿಗಳನ್ನು ತೆರೆಯದಿರಲು ಸ್ವಯಂಪ್ರೇರಣೆಯಿಂದ ನಿರ್ಧಾರ ಕೈಗೊಂಡಿದ್ದಾರೆ‌.”

“ಇದೀಗ ಮುಸ್ಲಿಮರು ಈದುಲ್ ಫಿತ್ರ್ ಹಬ್ಬವನ್ನು ಶನಿವಾರ ಅಥವಾ ಆದಿತ್ಯವಾರ ಆಚರಿಸಲಿದ್ದು, ಶುಕ್ರವಾರ ಸಾಯಂಕಾಲ ಚಂದ್ರದರ್ಶನ ಆಗದೇ ಇದ್ದರೆ ಆದಿತ್ಯವಾರ ಈದ್ ಆಚರಣೆ ಆಗಿರಲಿದೆ.”

ಈದ್ ಆಚರಣೆಯ ದಿನದಂದು ಯಾವುದೇ ಮಸೀದಿ ಅಥವಾ ಈದ್ಗಾಗಳಲ್ಲಿ ಸಾಮೂಹಿಕ ಪ್ರಾರ್ಥನೆಗಳು ಇರುವುದಿಲ್ಲ.‌ ಆದರೆ ಆದಿತ್ಯವಾರದ ಕರ್ಫ್ಯೂನಿಂದಾಗಿ ಹಬ್ಬದ ದಿನದಲ್ಲಿ ಕೆಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಆದುದರಿಂದ ಈ ಬಾರಿಯ ಆದಿತ್ಯವಾರ ಒಂದು ದಿನದ ಕರ್ಫ್ಯೂವನ್ನು ಷರತ್ತುಬದ್ಧ ಸಡಿಲಿಕೆ ನೀಡುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯರೊಂದಿಗೆ ಮನವಿ ಮಾಡಿರುವುದಾಗಿ ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ ಜಿಲ್ಲಾ ಸಮಿತಿ ಅಧ್ಯಕ್ಷರಾದ,ವೈ ಅಬ್ದುಲ್ಲ ಕುಂಞ ಯೆನೆಪೋಯ, ಕಾರ್ಯಾಧ್ಯಕ್ಷರು :ಎಸ್ ಎಮ್ ರಷೀದ್ ಹಾಜಿ, ಪ್ರ,ಕಾರ್ಯದರ್ಶಿ: ಬಿ ಎಂ ಮಮ್ತಾಜ್ ಅಲಿ, ಕೋಶಾಧಿಕಾರಿ: ಕೆ ಮಹಮ್ಮದ್ ಅರಬಿ ಮುಂತಾದವರು ಜಂಟಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com