janadhvani

Kannada Online News Paper

ಸರಳ ಈದ್ ಆಚರಣೆಗೆ ಸರ್ವ ಮುಸ್ಲಿಂ ಸಂಘಟನೆಗಳ ಒಕ್ಕೂಟ ಕರೆ

ಗುರುಪುರ ಕೈಕಂಬ: ದೇಶಕ್ಕೆ ದೇಶವೇ ಕೋರೋಣ ಎಂಬ ಮಹಾಮಾರಿಯಿಂದಾಗಿ ಲಾಕ್ ಡೌನ್,ಸೀಲ್ ಡೌನ್ ಗೊಳಗಾಗಿ ಜನರೆಲ್ಲಾ ಗೃಹಬಂಧನಕ್ಕೊಳಗಾಗಿದ್ದಾರೆ.ಈ ಸಂದರ್ಭದಲ್ಲಿ ಸರಕಾರದ ಆದೇಶಕ್ಕೆ ತಲೆಬಾಗಿ ಜುಮಾ ನಮಾಝ್,ತರಾವೀಹ್ ,ಇಫ್ತಾರ್ ನಂತಹ ಪುಣ್ಯಕಾರ್ಯಗಳನ್ನೇ ಮಸೀದಿಗಳಲ್ಲಿ ಸಾಮೂಹಿಕವಾಗಿ ಮಾಡುವುದನ್ನು ತ್ಯಜಿಸಿ, ಪುಣ್ಯ ಆರಾಧನೆಗಳನ್ನೆಲ್ಲಾ ಮನೆಗೆ ಸೀಮಿತಗೊಳಿಸಲಾಗಿದೆ.

ಇಂತಹ ಸಮಯದಲ್ಲಿ ಕೆಲವು ಜನ ಈದ್ ಹಬ್ಬದ ಹೊಸ ವಸ್ತ್ರಗಳಿಗಾಗಿ ಜವುಳಿ ಮಳಿಗೆಗಳನ್ನು ತೆರೆಯಬೇಕೆಂಬ ತೀರ್ಮಾನಕ್ಕೆ ಬಂದಿರುವ ಮಾಹಿತಿ ಲಭ್ಯವಾಗಿದೆ. ಈಗ ಲಾಕ್ ಡೌನ್ ,ಸೀಲ್ ಡೌನ್ ಗಳನ್ನು ಬಟ್ಟೆ ಬರೆಗಳ ಖರೀದಿಗಾಗಿ ಸಡಿಲಿಕೆ ಮಾಡಿ ಜನರೆಲ್ಲ ಬೀದಿಗಿಳಿಯುವಂತೆ ಮಾಡಿದರೆ,ನಮ್ಮ ಇದುವರೆಗಿನ ತ್ಯಾಗಗಳೆಲ್ಲವೂ ನಿಷ್ಫಲವಾಗಲಿದೆ.

ಮತ್ತೆ ನಮ್ಮ ದೇಶದಲ್ಲಿ ಬಟ್ಟೆ ಉದ್ಯಮದ ತವರೂರಾದ ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳು ಕೋರೋನಾ ಮಹಾಮಾರಿಯಿಂದಾಗಿ ಅತ್ಯಂತ ಹೆಚ್ಚು ಹಾನಿಗೊಳಗಾದಂತಹ ಪ್ರದೇಶಗಳಾಗಿರುತದೆ. ಅಲ್ಲಿನ ಬಟ್ಟೆಬರೆಯಿಂದಾಗಿ ನಿಸ್ಸಂಶಯವಾಗಿಯೂ ಪುನಃ ಕೋರೋನಾ ಹರಡುವುದರಲ್ಲಿ ಯಾವುದೇ ಸಂಶಯವಿಲ್ಲ.

ನಾವೇ ಕೈಯಾರೆ ಸೋಂಕು ಹರಡಲು ಕಾರಣಕರ್ತರಾದಂತೆ ಆಗಬಹುದು.ಕೆಲವೊಮ್ಮೆ ಇದೇ ಕಾರಣ ಹಲವರ ಕೆಂಗಣ್ಣಿಗೆ ಗುರಿಯಾಗಿ ಜಾತಿವೈರಸ್ ಆಪಾದನೆಯ ಪರಿಧಿ ಮುಂದುವರೆಯಲೂ ಸಾಧ್ಯವಿದೆ. ಅದೂ ಅಲ್ಲದೇ, ಜಗತ್ತೇ ಕೋರೋನಾ ದಿಂದಾಗಿ ಶೋಕದಿಂದಿರುವಾಗ ನಾವು ಹೊಸ ಬಟ್ಟೆಬರೆಗಳನ್ನು ಧರಿಸುವುದರಲ್ಲಿ ಯಾವ ಅರ್ಥವೂ ಇಲ್ಲ.

ಆದ್ದರಿಂದ ಈ ಬಾರಿ ನಾವು ಈದ್ ಗೆ ಹೊಸ ಬಟ್ಟೆಬರೆಗಳನ್ನು ಖರೀದಿಸಲು ಮೀಸಲಿಟ್ಟ ಆ ಹಣವನ್ನು ಬಡವರ ಹೊಟ್ಟೆ ತುಂಬಿಸುವ ಕಾರ್ಯಕ್ಕೆ ಉಪಯೋಗಿಸಿದರೆ ಪುಣ್ಯ ಗಳಿಸುವುದರ ಜೊತೆಗೆ ಸೋಂಕು ಹರಡುವುದನ್ನು ತಡೆ ಗಟ್ಟುವಲ್ಲಿ ಉತ್ತಮ ನಿರ್ಧಾರವೂ ಆಗಲಿದೆ.

ಆದುದರಿಂದ ನಮ್ಮ ಸಮಿತಿಯ ವ್ಯಾಪ್ತಿಗೆ ಬರುವ ಸರಿ ಸುಮಾರು 47 ಮೊಹಲ್ಲಾಗಳು ಈ ತೀರ್ಮಾನಗಳಿಗೆ ಬಧ್ದರಾಗಬೇಕೆಂದು ಈ ಮೂಲಕ ವಿನಂತಿಸುತ್ತಿದ್ದೇವೆ.

ಪ್ರಕಟಣೆ:

ಸರ್ವ ಮುಸ್ಲಿಂ ಸಂಘಟನೆಗಳ ಒಕ್ಕೂಟ ಗುರುಪುರ ಕೈಕಂಬ

error: Content is protected !! Not allowed copy content from janadhvani.com