ಬೆಂಗಳೂರು: ಮಹಾಮಾರಿ ಕೊರೋನಾ ವೈರಸ್ ಮನುಷ್ಯರನ್ನು ಧರ್ಮಬೇಧವಿಲ್ಲದೆ ತೀವ್ರವಾಗಿ ಕಾಡುತ್ತಿರುವ ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ಒಗ್ಗಟ್ಟಾಗಿ ತೀವ್ರ ಪ್ರತಿರೋಧ ಒಡ್ಡಬೇಕಾಗಿದೆ ಎಂದು ಕರ್ನಾಟಕ ಮುಸ್ಲಿಂ ಜಮಾತ್ ರಾಜ್ಯ ಸಮಿತಿ ಆಗ್ರಹಿಸಿದೆ.
ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ರಾಜ್ಯ ಕಾರ್ಯಕಾರಿ ಸಮಿತಿಯು ಈ ಕೆಳಗಿನ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
- ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ರೋಗಾಣು ನಿಯಂತ್ರಣ ಸಂಬಂಧವಾಗಿ ನೀಡುತ್ತಿರುವ ಎಲ್ಲ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಪ್ರತಿಯೊಬ್ಬರೂ ಬದ್ಧರಾಗಿರಬೇಕು.
- ಮಸೀದಿ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಆಸಕ್ತಿ ತೋರುವ ಮುಸ್ಲಿಂ ಸಮುದಾಯವು ಇಂದಿನ ಪ್ರತಿಕೂಲ ಪರಿಸ್ಥಿತಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಎಲ್ಲ ಧಾರ್ಮಿಕ ಚಟುವಟಿಕೆಗಳನ್ನು ತಮ್ಮ ತಮ್ಮ ಮನೆಗಳಿಗೆ ಸೀಮಿತಗೊಳಿಸಬೇಕು.
- ವಿಶೇಷತಃ ಮುಸ್ಲಿಮರಿಗೆ ಬಹಳ ಪವಿತ್ರವಾಗಿರುವ ಶಬೇ ಬರಾಅತ್ ರಾತ್ರಿಯ ಪ್ರಾರ್ಥನೆಗಳಿಗೆ ಕೂಡ ಮಸೀದಿಯನ್ನು ಅವಲಂಬಿಸಬಾರದು.
- ಪ್ರಾರ್ಥನೆಗೆ ವಿಶೇಷ ಫಲವಿರುವ ಪ್ರಸ್ತುತ ರಾತ್ರಿ ಪ್ರತಿಯೊಬ್ಬರೂ ಮನೆಗಳಲ್ಲಿ ಕುಟುಂಬ ಸಮೇತ ಪಠಣ, ಪ್ರಾರ್ಥನೆಗಳನ್ನು ನಡೆಸುವ ಮೂಲಕ ಮನೆಗಳಲ್ಲಿ ಮಸೀದಿಯ ವಾತಾವರಣ ಸೃಷ್ಟಿಸಬೇಕು.
- ಕಳೆದ ಎರಡು ವಾರಗಳಂತೆ ಮುಂದಿನ ಶುಕ್ರವಾರವೂ ಯಾವುದೇ ಕಾರಣಕ್ಕೂ ಜುಮಾ ಪ್ರಾರ್ಥನೆ ನಡೆಸಲು ಮುಂದಾಗಬಾರದು.
ಮಾರಕ ವ್ಯಾಧಿ ಹರಡುವಾಗ ಅದು ಯಾವುದೇ ಜಾತಿ ಮತಗಳ ನಡುವೆ ತಾರತಮ್ಯ ಮಾಡುವುದಿಲ್ಲ. ಹೀಗಿರುವಾಗ ನಾವು ಕೂಡ ನಮ್ಮೊಳಗೆ ತಾರತಮ್ಯ ಮಾಡದೆ ಇಡೀ ಮಾನವಕುಲ ಒಂದಾಗಿ ಹೋರಾಡಬೇಕು. ಈ ನಡುವೆ ಕೆಲವು ಕಡೆಗಳಲ್ಲಿ ಕಂಡು ಬಂದಿರುವ ಕೋಮುವಾದಿ ನಡೆನುಡಿಗಳು ದುರಾದೃಷ್ಟಕರ.
ತಬ್ಲೀಗ್ ಜಮಾಅತಿನ ಸಮ್ಮೇಳನದ ನೆಪದಲ್ಲಿ ಇಡೀ ಒಂದು ಸಮುದಾಯವನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವುದು ಅಕ್ಷಮ್ಯ. ತಬ್ಲೀಗಿ ಸಮ್ಮೇಳನಕ್ಕೆ ತೆರಳಿದವರು ಸರ್ಕಾರದ ಆದೇಶದಂತೆ ಸೂಕ್ತ ತಪಾಸಣೆ ಮತ್ತು ಚಿಕಿತ್ಸೆಗಳಿಗೆ ಒಳಗಾಗದೆ ಸಮಾಜದಲ್ಲಿ ಆತಂಕ, ಅಪನಂಬಿಕೆಗಳನ್ನು ಹುಟ್ಟುಹಾಕುತ್ತಿರುವುದು ಖಂಡನೀಯ.
ಇಸ್ಲಾಂ ಎಂಬುದರ ಒಂದು ಅರ್ಥವೇ ಅನುಸರಣೆ ಎಂದಾಗಿದ್ದು, ಸರ್ಕಾರದ ಆದೇಶ ಹಾಗೂ ಉಲಮಾಗಳ ನಿರ್ದೇಶನಗಳನ್ನು ಅನುಸರಿಸಬೇಕು. ಶಂಕಾಸ್ಪದ ವ್ಯಕ್ತಿಗಳು ಸ್ವಯಂ ಪ್ರೇರಣೆಯಿಂದ ತಪಾಸಣೆ, ಚಿಕಿತ್ಸೆ ಹಾಗೂ ಸ್ವಯಂ ಗೃಹಬಂಧನಕ್ಕೆ ಒಳಗಾಗಬೇಕು. ತಮ್ಮಿಂದಾಗಿ ಇತರರು ಸೋಂಕಿತರಾಗಬಾರದೆಂಬ ಸಾಮಾಜಿಕ ಪ್ರಜ್ಞೆ ಹೊಂದಿರಬೇಕು.
ಯಾವುದಾದರೂ ಕ್ಷುಲ್ಲಕ ವ್ಯಕ್ತಿಗಳು ಕೊರೋನದ ಹಿನ್ನೆಲೆಯಲ್ಲಿ ಮುಸ್ಲಿಮರ ವಿರುದ್ಧ ಟೀಕೆ ಮಾಡಿರುವುದಕ್ಕೆ ಸಮುದಾಯ ತಲೆಕೆಡಿಸಬೇಕಿಲ್ಲ. ಆ ಕಾರಣಕ್ಕಾಗಿ ಹಿಂದೂಗಳನ್ನು ಟೀಕಿಸುವುದಕ್ಕೂ ಅವರ ಪೈಕಿ ಯಾರಾದರೂ ಮಾಡುವ ತಪ್ಪುಗಳನ್ನು ವೈಭವೀಕರಿಸುವುದಕ್ಕೂ ಹೋಗುವುದರಿಂದ ಸಾಮುದಾಯಿಕ ಅಂತರ ಮತ್ತಷ್ಟು ಹೆಚ್ಚುತ್ತದೆ.
ಟೀಕೆಗಳಿಗೆ ಉತ್ತರಿಸುವ ಬದಲು ಎಲ್ಲರ ಸಮಾನ ವೈರಿಯಾಗಿರುವ ವೈರಸ್ ವಿರುದ್ಧ ಹೋರಾಡುವುದಕ್ಕಷ್ಟೇ ಗಮನಹರಿಸಬೇಕಾಗಿದೆ. ಮುಸ್ಲಿಮರನ್ನು ಆರೋಪಿ ಸ್ಥಾನದಲ್ಲಿ ಬಿಂಬಿಸುವ ಕೋಮು ಕ್ರಿಮಿಗಳ ಬಗ್ಗೆ ಬಹುಸಂಖ್ಯೆಯ ಹಿಂದೂಗಳೇ ವಿರೋಧ ಹೊಂದಿರುವುದನ್ನು ಮರೆಯಬಾರದು.
ಸಮಾಜ, ದೇಶ ಹಾಗೂ ಒಟ್ಟು ಮನುಕುಲದ ಹಿತದೃಷ್ಟಿಯಿಂದ ಎಲ್ಲರೂ ಒಂದಾಗಬೇಕು ಎಂಬ ಪಾಠವನ್ನು ಕೊರೋನಾದಿಂದ ಕಲಿತುಕೊಳ್ಳಬೇಕಾಗಿದೆ ಎಂದು ಮುಸ್ಲಿಂ ಜಮಾತ್ ನಾಯಕರು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆಯಲ್ಲಿ ಈ ವಿಚಾರವಾಗಿ ರಾಜ್ಯದ ಮುಸಲ್ಮಾನರ ವಿರುದ್ಧ ಹೇಳಿಕೆ ಹಾಗೂ ಅಪಪ್ರಚಾರ ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುದಾಗಿ ಮುಖ್ಯ ಮಂತ್ರಿಗಳ ಹೇಳಿಕೆ ಪ್ರಶಂಸನೀಯ ಹಾಗೂ ಉಲ್ಲೇಖಾರ್ಹವಾಗಿದೆ .
ಸಂಘಟನೆಯ ರಾಜ್ಯಾಧ್ಯಕ್ಷ ಮೌಲಾನಾ ಮುಫ್ತಿ ಅನ್ವರ್ ಅಲಿ ಖಾದಿರಿ ರಾಮನಗರ,
ಪ್ರಧಾನ ಕಾರ್ಯದರ್ಶಿ ಎನ್ ಕೆ ಎಂ ಶಾಫಿ ಸಅದಿ ಬೆಂಗಳೂರು, ಕೋಶಾಧಿಕಾರಿ ಯೇನಪೋಯ ಅಬ್ದುಲ್ಲಾ ಕುಂಞಿ ಹಾಜಿ ಮಂಗಳೂರು, ನಾಯಕರಾದ ಮಹ್ಮೂದ್ ಮುಸ್ಲಿಯಾರ್ ಕೊಡಗು, ಡಾ. ಮುಹಮ್ಮದ್ ಫಾಝಿಲ್ ರಝ್ವಿ ಚನ್ನರಾಯಪಟ್ಟಣ, ಮೌಲಾನಾ ಅಬೂ ಸುಫಿಯಾನ್ ಮದನಿ, ಮೌಲಾನಾ ಶಬೀರ್ ಅಲೀ ಬೆಂಗಳೂರು, ಮೌಲಾನಾ ನಫೀಸ್ ಹಬೀಬೀ ತುಮಕೂರು, ಸಯ್ಯಿದ್ ಮುಖ್ತಾರ್ ಅಹ್ಮದ್ ರಝ್ವಿ ದಾವಣಗೆರೆ, ಉಮರ್ ಹಾಜಿ ಬೆಂಗಳೂರು, ಇಕ್ಬಾಲ್ ಸೇಟ್ ಶಿವಮೊಗ್ಗ, ಕೆ ಎಂ ಅಬೂಬಕರ್ ಸಿದ್ದೀಖ್ ಚಿಕ್ಕಮಗಳೂರು, ಮುಮ್ತಾಝ್ ಅಲೀ ಮಂಗಳೂರು, ಎಸ್ ಎಮ್ ರಶೀದ್ ಹಾಜಿ, ಮುಹಮ್ಮದ್ ಹಾಜಿ ಸಾಗರ, ಯಾಕೂಬ್ ಯೂಸುಫ್ ಹೊಸನಗರ, ಗೌಸ್ ವರದ ಬಳ್ಳಾರಿ, ಹಮೀದ್ ಬಜ್ಪೆ, ಎಂಬಿಎಂ ಸಾದಿಕ್ , ಅಬ್ದುಲ್ ಲತೀಫ್ ಸುಂಠಿಕೊಪ್ಪ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು.