janadhvani

Kannada Online News Paper

CAA ವಿರುದ್ಧ ಹೋರಾಟದಲ್ಲಿ ಇಸ್ಲಾಮಿಕ್ ಘೋಷಣೆಗಳನ್ನು ಕೂಗುವುದು ಸರಿಯಲ್ಲ- ಎ.ಪಿ.ಉಸ್ತಾದ್

ಕೊಝಿಕ್ಕೋಡ್: ಪೌರತ್ವ ವಿರೋಧಿ ಹೋರಾಟದಲ್ಲಿ ಇಸ್ಲಾಮಿಕ್ ಘೋಷಣೆಗಳನ್ನು ಕೂಗುವುದು ಸರಿಯಲ್ಲ ಎಂದು ಅಖಿಲ ಭಾರತ ಸುನ್ನಿ ಜಮಿಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಹೇಳಿದ್ದಾರೆ. ಪ್ರಸ್ತುತ ಚಳುವಳಿಯು ಭಾರತದ ಜಾತ್ಯತೀತತೆ ಮತ್ತು ಅದರ ಸಂವಿಧಾನವನ್ನು ರಕ್ಷಿಸುವ ಹೋರಾಟವಾಗಿದೆ. ಅಲ್ಲಿ ಇಸ್ಲಾಮಿಕ್ ಘೋಷಣೆಗಳಿಗೆ ಯಾವುದೇ ಪ್ರಸಕ್ತಿಯಿಲ್ಲ. ಹಾಗೆ ಮಾಡುವುದರಿಂದ ವಿಭಜನೆ ಉಂಟಾಗುತ್ತದೆ. ಧಾರ್ಮಿಕ ವಿಷಯವನ್ನು ಕೂಡ ಈ ಹೋರಾಟದಲ್ಲಿ ತರಬಾರದು ಎಂದು ಕಾಂತಪುರಂ ಹೇಳಿದರು.

ನಾಗರಿಕ ಹೋರಾಟಕ್ಕೆ ಸಂಬಂಧಿಸಿದಂತೆ ಜಾತ್ಯತೀತ ಪಕ್ಷಗಳು ಆಯೋಜಿಸಿದ್ದ ಸರಣಿ ಆಂದೋಲನಗಳಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಹೇಳಿದ ಕಾಂತಪುರಂ, ಇಂತಹ ಕಾರ್ಯಕ್ರಮಗಳ ಮೂಲಕ “ಭಾರತ ಒಂದು, ಭಾರತ ನಮ್ಮದು, ಇಲ್ಲಿ ಸೌಹಾರ್ದ, ಶಾಂತಿ ನೆಲಸಬೇಕು” ಮುಂತಾದ ಘೋಷಣೆಗಳು ಮೊಳಗಬೇಕು ಎಂದು ಕೋಝಿಕೋಡ್‌ನಲ್ಲಿ ಮಾಧ್ಯಮಗಳಿಗೆ ತಿಳಿಸಿದರು.

ಜನಸಾಮಾನ್ಯರಲ್ಲಿ ದ್ವೇಷ ಮತ್ತು ವೈರತ್ವವನ್ನು ಹರಡುವ ಮೂಲಕ ಮುಸ್ಲಿಂ ಸಮುದಾಯವನ್ನು ದೇಶದ್ರೋಹಿಗಳಾಗಿ ಪ್ರತ್ಯೇಕಿಸುವ ಫ್ಯಾಸಿಸ್ಟ್ ಪ್ರಯತ್ನಗಳು ವ್ಯಾಪಕವಾಗಿ ನಡೆಯುತ್ತಿವೆ. ಇದು ದೇಶದ ಜಾತ್ಯತೀತ ಮುಖವನ್ನು ವಿರೂಪಗೊಳಿಸುತ್ತದೆ. ದೆಹಲಿಯಲ್ಲಿ ಸರಕಾರ ಮತ್ತು ಪೊಲೀಸರು ಮುಗ್ಧ ಜನರನ್ನು ಕ್ರೂರವಾಗಿ ಬೇಟೆಯಾಡಿದಾಗ, ಗಲಭೆಗೆ ಕಾರಣರಾದವರ ಮೇಲೆ ಕಾನೂನು ಕ್ರಮ ಜರುಗಿಸದಿರುವುದು ಆಘಾತಕಾರಿಯಾಗಿದೆ ಎಂದು ಕಾಂತಪುರಂ ಹೇಳಿದರು.

ದೆಹಲಿ ಗಲಭೆಗೆ ಒಳಗಾದವರಿಗೆ ಕೇರಳ ಮುಸ್ಲಿಂ ಜಮಾಅತ್ ವತಿಯಿಂದ ಎಲ್ಲಾ ರೀತಿಯ ಸಹಾಯವನ್ನು ನೀಡಲಾಗುತ್ತಿದೆ ಎಂದು ಕಾಂತಪುರಂ ಹೇಳಿದರು.

error: Content is protected !! Not allowed copy content from janadhvani.com