ಜಿದ್ದಾ: ಮಕ್ಕಾ ಮತ್ತು ಜಿದ್ದಾದಿಂದ ವಿವಿಧ ದೇಶಗಳ ವಲಸಿಗರನ್ನು ಬಂಧಿಸಿ ಗಡೀಪಾರು ಕೇಂದ್ರಗಳಿಗೆ ರವಾನಿಸಲಾಗುತ್ತಿದೆ ಎಂಬುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರ ತೀವ್ರಗೊಂಡಿದೆ. ಅರಬಿ ಭಾಷೆಯಲ್ಲಿ ಧ್ವನಿ ತುಣುಕುಗಳು, ವೀಡಿಯೊಗಳು ಮತ್ತು ಫೋಟೋಗಳೊಂದಿಗೆ ಈ ಪ್ರಚಾರ ನಡೆಯುತ್ತಿದೆ. ಮನೆ ಚಾಲಕರನ್ನು ಹಿಡಿಯಲಾಗುತ್ತಿವೆ ಎನ್ನುವ ಪ್ರಚಾರ ಕೂಡ ನಡೆಯುತ್ತಿದ್ದು, ಸಕ್ರಮವಾಗಿ ನೆಲೆಸಿರುವವರನ್ನೂ ಬಂಧಿಸಲಾಗುತ್ತಿದೆ ಎನ್ನುವ ಸುಳ್ಳು ಪ್ರಚಾರ ನಡೆಯುತ್ತಿದೆ.
ಕಾನೂನು ಉಲ್ಲಂಘನೆ ಮಾಡುವವರಿಲ್ಲದ ದೇಶ ಎನ್ನುವ ಅಭಿಯಾನ ಪ್ರಾರಂಭವಾದಾಗಿನಿಂದ ಅಕ್ರಮ ನಿವಾಸಿಗಳನ್ನು ಬಂಧಿಸುವ ಪ್ರಯತ್ನವನ್ನು ಸೌದಿ ಅರೇಬಿಯಾ ಮುಂದುವರಿಸಿದೆ. ಮನೆಕೆಲಸ ವೀಸಾಗಳಲ್ಲಿ ಬಂದು ಇತರ ಕೆಲಸಗಳಲ್ಲಿ ತೊಡಗಿಸಿ ಕೊಂಡವರ ಬಂಧನದಿಂದಾಗಿ ತಪ್ಪು ಮಾಹಿತಿ ಹರಡಲಾಗಿದೆ ಎನ್ನಲಾಗಿದೆ. ಇಖಾಮಾ ಇಲ್ಲದ 400 ಪಾಕಿಸ್ತಾನಿ ಪ್ರಜೆಗಳನ್ನು ಸೆರೆಹಿಡಿದು ಮಕ್ಕಾದ ಶುಮೈಲಿ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಜಿದ್ದಾದಲ್ಲಿರುವ ಪಾಕಿಸ್ತಾನದ ದೂತಾವಾಸ ಕೇಂದ್ರವು ಮಾಹಿತಿ ನೀಡಿದ್ದವು.
ಏತನ್ಮಧ್ಯೆ, ಮಕ್ಕಾ ಪ್ರಾಂತ್ಯದಲ್ಲಿ ಪಾಕಿಸ್ತಾನಿ ಕಾರ್ಮಿಕರನ್ನು ವ್ಯಾಪಕವಾಗಿ ಬಂಧಿಸಲಾಗುತ್ತಿದೆ ಎನ್ನುವ ಸುದ್ದಿ ನಕಲಿಯಾಗಿದ್ದು, ಅಕ್ರಮವಾಗಿ ನೆಲೆಸಿರುವ ಕಾರ್ಮಿಕರನ್ನು ಬಂಧಿಸಲಾಗುತ್ತಿದೆ ಎಂದು ಸೌದಿ ಅರೇಬಿಯಾದ ಪಾಕಿಸ್ತಾನದ ರಾಯಭಾರ ಕಚೇರಿ ತಿಳಿಸಿದೆ.
ಸೌದಿ ಭದ್ರತಾ ಪಡೆಗಳು ಬಂಧಿಸಿ ಗಡೀಪಾರು ಮಾಡುವ ಮೊದಲು, ಅವರಿಗೆ ತಮ್ಮ ದಾಖಲೆ ಸರಿಪಡಿಸಲು ಮತ್ತು ಯಾವುದೇ ದಂಡವಿಲ್ಲದೆ ಊರಿಗೆ ಮರಳಲು ಸಮಯವನ್ನು ನೀಡಿದೆ. ಲಕ್ಷಾಂತರ ಕಾನೂನು ಉಲ್ಲಂಘಕರನ್ನು ಪತ್ತೆ ಹಚ್ಚಿ ಗಡೀಪಾರು ಮಾಡಲಾಗಿದೆ. ಆದ್ದರಿಂದ ಅಭಿಯಾನ ದೊಡ್ಡ ಯಶಸ್ಸು ಎಂದು ಪರಿಗಣಿಸಲಾಗಿದೆ. ಆದರೆ ಇತ್ತೀಚಿನ ದಾಳಿಗಳಿಂದ ದೇಶದಲ್ಲಿ ಇನ್ನೂ ಕಾನೂನು ದುರುಪಯೋಗ ಮಾಡುವವರು ಉಳಿದಿದ್ದಾರೆ ಎಂಬುದನ್ನು ತೋರಿಸುತ್ತದೆ ಎನ್ನಲಾಗಿದೆ.