janadhvani

Kannada Online News Paper

ನವದೆಹಲಿ(ಜ. 23):ಇದೀಗ ಸಿಎಎ ವಿರೋಧಿ ಚಳವಳಿಗೆ ಧುಮುಕಿರುವ ,ದೆಹಲಿಯಲ್ಲಿ ಲೆಫ್ಟಿನೆಂಟ್ ಗವರ್ನರ್ ಆಗಿ ಸಿಎಂ ಅರವಿಂದ್ ಕೇಜ್ರಿವಾಲ್ ಜೊತೆ ಜಟಾಪಟಿಯಿಂದಾಗಿ ಹೆಚ್ಚು ಹೆಸರು ಮಾಡಿದ್ದ ನಜೀಬ್ ಜಂಗ್ ,ನಿನ್ನೆ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯ ಆವರಣದ ಹೊರಗೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಕೇಂದ್ರ ಸರ್ಕಾರದ ಸಿಎಎ, ಎನ್ಆರ್ಸಿ ಯೋಜನೆಯಿಂದ ಆಗುವ ಅನಾಹುತದ ಬಗ್ಗೆ ವಿವರಿಸಿದ್ದರು.

ಇಂದು ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆ, ಸರ್ಕಾರದ ಸಿಎಎ ಕಾಯ್ದೆ ಇತ್ಯಾದಿ ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ.ಜಾಮಿಯಾ ವಿಶ್ವವಿದ್ಯಾಲಯ ಯಾವತ್ತೂ ಜಾತ್ಯತೀತತೆಯಿಂದ ಹೊರಗೆ ಬಂದಿದ್ದಿಲ್ಲ; ಅಲ್ಲಿಯ ಪ್ರತಿಭಟನಾಕಾರರು ಲಾ ಇಲಾಹ ಇಲ್ಲಲ್ಲಾಹ್ ಘೋಷಣೆಗಳನ್ನು ಕೂಗುವುದರಲ್ಲಿ ಯಾವುದೇ ಕೋಮುವಾದ ಕಾಣಿಸುತ್ತಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ಧಾರೆ.

ಜಾಮಿಯಾ ಒಂದು ಜಾತ್ಯತೀತ ವಿಶ್ವವಿದ್ಯಾಲಯ. ಅದನ್ನು ಮುಸ್ಲಿಮ್ ವಿವಿ ಎಂದು ಪರಿಗಣಿಸುವುದು ಶುದ್ಧ ತಪ್ಪು. ಅಲ್ಲಿ ಶೇ. 40ರಷ್ಟು ಮುಸ್ಲಿಮೇತರ ವಿದ್ಯಾರ್ಥಿಗಳಿದ್ಧಾರೆ. ಅವರೆಲ್ಲಾ ಹಾಸ್ಟೆಲ್ಗಳಲ್ಲಿ ಒಟ್ಟಿಗೆ ಇರುತ್ತಾರೆ. ಒಂದೇ ಆಟಗಳನ್ನ ಆಡುತ್ತಾರೆ. ಇವರನ್ನೇ ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆದಿದೆ ಎಂಬ ವಿಚಾರ ಇವರನ್ನು ತಲ್ಲಣಗೊಳಿಸಿದೆ. ಇವರೆಲ್ಲರೂ ಭಾರತದ ಯುವ ಸಮುದಾಯವಾಗಿದ್ದು, ಅಧಿಕಾರಿಗಳು ಇವರಲ್ಲಿ ಆತ್ಮವಿಶ್ವಾಸ ನೆಲಸುವಂತೆ ಮಾಡಬೇಕು ಎಂದು ಮಾಜಿ ದೆಹಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಕರೆ ನೀಡಿದ್ಧಾರೆ.

ಮುಸ್ಲಿಮರಲ್ಲಿ ಭಯ ಹೆಚ್ಚಾಗುತ್ತಿದೆ: “ಕಳೆದ ಆರು ವರ್ಷದಲ್ಲಿ ಮುಸ್ಲಿಮರು ಮತ್ತು ಕ್ರೈಸ್ತರಲ್ಲಿ ಭಯದ ವಾತಾವರಣ ಹೆಚ್ಚಾಗುತ್ತಿದೆ. ಸರ್ಕಾರಗಳು ಏನಾದರೂ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕಿತ್ತು. ಇಂಥ ಭಯ ಮೂಡಿಸುವ ಕೆಲಸ ಮಾಡುತ್ತಿರುವುದು ಕ್ಷುದ್ರ ಶಕ್ತಿಗಳೆಂದು ಪ್ರಧಾನಿ ಹೇಳುತ್ತಿದ್ದಾರಾದರೂ ವಾಸ್ತವವಾಗಿ ಕಠಿಣ ಕ್ರಮ ತೆಗೆದುಕೊಳ್ಳುತ್ತಿಲ್ಲ. ಅಲ್ಪಸಂಖ್ಯಾತರಲ್ಲಿರುವ ಭಯಕ್ಕೆ ಒಂದಲ್ಲ, ನಾನಾ ಸಂಗತಿಗಳು ಕಾರಣವಾಗಿವೆ. ಉದಾಹರಣೆಗೆ, ಕಾಶ್ಮೀರ ಮುಸ್ಲಿಮ್ ಪ್ರಾಬಲ್ಯದ ರಾಜ್ಯವಾಗಿದೆ. 370ನೇ ವಿಧಿ ತೆಗೆದದ್ದು ತಪ್ಪು ಅಥವಾ ಸರಿ ಎಂಬ ಪ್ರಶ್ನೆ ಅಲ್ಲ. ತ್ರಿವಳಿ ತಲಾಖ್ ನಿಷೇಧ ಕೂಡ ಒಳ್ಳೆಯದು ಅಥವಾ ಕೆಟ್ಟದ್ದು ಎಂಬುದಲ್ಲ. ಇದನ್ನು ತಮ್ಮ ಮೇಲಿನ ಹಸ್ತಕ್ಷೇಪ ಎಂದೇ ಮುಸ್ಲಿಮರು ಭಾವಿಸಿದ್ಧಾರೆ. ಈಗ ಸಿಎಎ-ಎನ್ಆರ್ಸಿ ಬಂದಿದೆ. ಮುಸ್ಲಿಮರನ್ನೇ ಗುರಿಯಾಗಿಸಿ ಮಾಡಲಾಗಿದೆ ಎಂಬ ಭಾವನೆ ಮೂಡಿದೆ. ಭಾರತದ ಬೀದಿಗಳಲ್ಲಿ ನೀವು ಈ ಭಯವನ್ನು ಕಾಣಬಹುದಾಗಿದೆ. ಕಳೆದ 5 ವರ್ಷದಲ್ಲಿ ಕ್ರೋಢೀಕರಣಗೊಂಡ ಭಯ ಈಗ ಹೊರ ಬರುತ್ತಿದೆ. ಶಾಹೀನ್ ಬಾಘ್ನಲ್ಲೂ ಇದನ್ನೇ ನೀವು ಕಾಣಬಹುದಾಗಿದೆ” ಎಂದು ನಜೀಬ್ ಜಂಗ್ ಅಭಿಪ್ರಾಯಪಟ್ಟಿದ್ಧಾರೆ.

ಈ ಶತಮಾನ ಕಂಡ ಅತಿ ದೊಡ್ಡ ಚಳವಳಿ:ಸಿಎಎ-ಎನ್ಆರ್ಸಿ ವಿರುದ್ಧ ಭಾರತದಾದ್ಯಂತ ನಡೆಯುತ್ತಿರುವ ಹೋರಾಟವನ್ನು ನಜೀಬ್ ಜಂಗ್ ಅಸಾಧಾರಣ ಎಂದು ಬಣ್ಣಿಸಿದ್ಧಾರೆ. ಹಾಂಕಾಂಗ್ನಲ್ಲಿ ನಡೆದಿದ್ದ ವಿದ್ಯಾರ್ಥಿಗಳ ಪ್ರತಿಭಟನೆಯನ್ನೂ ಮೀರಿದ್ದು ಇದು ಎಂದು ಅಭಿಪ್ರಾಯಪಟ್ಟಿದ್ದಾರೆ. ಹಾಗೆಯೇ, ಮುಸ್ಲಿಮ್ ಸಮುದಾಯಕ್ಕೆ ಹೊಸ ಮಾದರಿಯ ನಾಯಕತ್ವದ ಅಗತ್ಯವಿರುವುದನ್ನೂ ಅವರು ಒತ್ತಿ ಹೇಳಿದ್ಧಾರೆ.

ಪೌರತ್ವ ಕಾಯ್ದೆಯು ತಮಗೆ ಅನ್ಯಾಯ ಮಾಡುತ್ತದೆ ಎಂಬ ಭಾವನೆಯಿಂದ ಈ ಪರಿ ಪ್ರತಿಭಟನೆ ನಡೆಯುತ್ತಿದೆ. ಇತರ ಸಮುದಾಯದವರೂ ಕೈ ಜೋಡಿಸುತ್ತಿದ್ಧಾರೆ. ಇಲ್ಲಿ ಒಬ್ಬರೇ ನಾಯಕರಿಲ್ಲ, ಸಾಯುದಾಯಿಕ ನಾಯಕತ್ವವಿದೆ. ವಿವಿಧ ಗುಂಪುಗಳು ಒಟ್ಟಿಗೆ ಸೇರಿ ಆಂದೋಲನ ಮುನ್ನಡೆಸುತ್ತಿದ್ಧಾರೆ. ಈ ಆಂದೋಲನ ಸಾಧಾರಣವಲ್ಲ. 21ನೇ ಶತಮಾನದಲ್ಲಿ ವಿಶ್ವದಲ್ಲಿ ಬೇರೆಲ್ಲೂ ಇಂಥ ಆಂದೋಲನ ನಡೆದದ್ದು ನನ್ನ ಕಣ್ಣಿಗೆ ಬಿದ್ದಿಲ್ಲ. ಹಾಂಕಾಂಗ್ ಪ್ರತಿಭಟನೆಯನ್ನಷ್ಟೇ ಇದಕ್ಕೆ ಹೋಲಿಸಬಹುದು. ಆದರೆ, ಹಾಂಕಾಂಗ್ನಲ್ಲಿ ನಡೆದದ್ದು ಹಿಂಸಾತ್ಮಕ ಪ್ರತಿಭಟನೆ. ಭಾರತದ ನಡೆಯುತ್ತಿರುವುದು ಶಾಂತಿಯುತವಾದುದು. ಹಾಂಕಾಂಗ್ ಒಂದು ನಗರವಷ್ಟೇ ಆಗಿದೆ. ಭಾರತದಲ್ಲಿ ಉತ್ತರದಿಂದ ದಕ್ಷಿಣ, ಪೂರ್ವದಿಂದ ಪಶ್ಚಿಮ ಹೀಗೆ ಇಡೀ ದೇಶವನ್ನೇ ಈ ಆಂದೋಲನ ಆವರಿಸಿದೆ.

ಫೇಜ್ ಅವರ ಹಮ್ ದೇಖೇಂಗೆ ಈಗ ಈ ಆಂದೋಲನದ ಶಕ್ತಿಯಾಗಿದೆ. ಈಗ ನಡೆಯುತ್ತಿರುವುದು ಕೇವಲ ಪ್ರತಿಭಟನೆಯಲ್ಲ, ಭಾರತದ ಜನರ ಒಂದು ಆಂದೋಲನ. ಎಲ್ಲಾ ಧರ್ಮಗಳ ಎಲ್ಲಾ ವರ್ಗಳ ಜನರು ಪಾಲ್ಗೊಳ್ಳುತ್ತಿದ್ಧಾರೆ“ ಎಂದು ಮಾಜಿ ಡೆಲ್ಲಿ ಲೆಫ್ಟಿನೆಂಟ್ ಗವರ್ನರ್ ಹೇಳಿದ್ಧಾರೆ.

ಲಾ ಇಲಾಹ ಇಲ್ಲಲ್ಲಾಹ್ ಘೋಷಣೆ ಕಮ್ಯೂನಲ್ ಅಲ್ಲ:

ಸಿಎಎ ವಿರೋಧಿ ಪ್ರತಿಭಟನೆಯ ವೇಳೆ ಲಾ ಇಲ್ಲಾಹ್ ಇಲ್ಲಲ್ಲಾಹ್ ಘೋಷಣೆಗಳು ಕೇಳಿಬರುತ್ತಿರುವುದಕ್ಕೆ ಬಲಪಂಥೀಯ ಸಂಘಟನೆಗಳು ಪ್ರಬಲ ಆಕ್ಷೇಪಗಳನ್ನು ವ್ಯಕ್ತಪಡಿಸುತ್ತಿವೆ. ಇದು ಇಸ್ಲಾಮ್ ಮೂಲಭೂತವಾದ ಬೆಳವಣಿಗೆಯ ಸಂಕೇತ ಎಂದು ಆತಂಕಪಡುತ್ತಿವೆ. ಆದರೆ, ನಜೀಬ್ ಜಂಗ್ ಅವರು ಈ ಅಭಿಪ್ರಾಯಗಳನ್ನು ಅಲ್ಲಗಳೆದಿದ್ಧಾರೆ. “ನನಗೆ ಅದರಲ್ಲಿ ಕೋಮುಬಣ್ಣ ಕಾಣುತ್ತಿಲ್ಲ. ಅದು ಭಾವನಾತ್ಮಕ ಧ್ವನಿ ಎನಿಸುತ್ತದೆ. ಪ್ರತಿಭಟನಾಕಾರರು ಸಂವಿಧಾನದ ಪೀಠಿಕೆ ಓದುತ್ತಿದ್ದಾರೆ. ವಂದೇ ಮಾತರಮ್ ಪಠಿಸುತ್ತಿದ್ಧಾರೆ. ಸ್ವಾಗತಾರ್ಹ ಬೆಳವಣಿಗೆ ಎಂದರೆ ಸಿಎಎ ವಿರೋಧಿ ಹೋರಾಟದಿಂದಾಗಿ ಮುಸ್ಲಿಮರಲ್ಲಿ ವಂದೇ ಮಾತರಂ ಹಾಡುವುದರಲ್ಲಿ ಯಾವುದೇ ತಪ್ಪಿದೆ ಎಂಬ ಭಾವನೆ ನೀಗಿದೆ. ನಿಮ್ಮ ತಾಯಿಗೆ ತಲೆ ಬಾಗಿಸುವುದರಲ್ಲಿ ಹೆಮ್ಮೆ ಇರುತ್ತದೆ. ಈ ದೇಶ ನಮಗೆ ತಾಯಿಯಾಗಿದೆ. ಹಾಗೆಯೇ, ಭಾರತದಲ್ಲಿ ಶೇ. 85ರಷ್ಟು ಹಿಂದೂಗಳು ಇರುವುದರಿಂದಾಗಿಯೇ ಇದು ಜಾತ್ಯತೀತ ದೇಶವಾಗಿರಲು ಸಾಧ್ಯವಾಗಿದೆ ಎಂಬುದನ್ನು ಮರೆಯಬಾರದು” ಎಂದವರು ನುಡಿದಿದ್ಧಾರೆ.

ಭಾರತದ ಗೌರವಕ್ಕೆ ಧಕ್ಕೆಯಾಗಿರುವುದು ನಿಜ:

ಹಲವು ವರ್ಷಗಳ ಬಳಿಕ ಭಾರತ ಮತ್ತು ಪಾಕಿಸ್ತಾನವನ್ನು ಒಂದೇ ತಕ್ಕಡಿಯಲ್ಲಿಟ್ಟು ನೋಡಲಾಗುತ್ತಿದೆ. ಭಾರತವು ಪಾಕಿಸ್ತಾನದಂತಾಗುತ್ತಿದೆ ಎಂದು ಜನರು ಹೇಳಿಕೊಳ್ಳುತ್ತಿದ್ದಾರೆ. 10 ವರ್ಷದ ಹಿಂದೆ ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದ ಹೋಲಿಕೆಯಾಗುತ್ತಿತ್ತು. ಈಗ ಯಾವತ್ತೂ ಪ್ರಜಾತಂತ್ರ ದೇಶವಾಗಿರದ ಪಾಕಿಸ್ತಾನಕ್ಕೆ ಭಾರತವನ್ನು ಹೋಲಿಸುವ ಸ್ಥಿತಿ ಬಂದಿದೆ. ಭಾರತದ ಪ್ರಧಾನಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆಯನ್ನು ಹೆಚ್ಚಿಸಲು ಅತೀವ ಶ್ರಮ ವಹಿಸುತ್ತಿದ್ಧಾರೆ. ಈಗ ಅವರ ಎಲ್ಲಾ ಶ್ರಮವೂ ವ್ಯರ್ಥವೆನಿಸುತ್ತಿದೆ. ಮೋದಿ ಸರ್ಕಾರವು ದೇಶದ ಅಲ್ಪಸಂಖ್ಯಾತರ ಬಗ್ಗೆ ಅನುಕಂಪ ಹೊಂದಿಲ್ಲ ಎಂಬ ಭಾವನೆ ವಿಶ್ವಕ್ಕೆ ಮೂಡಿದೆ. ವೇದಾಂತದ ಮಿದುಳು ಮತ್ತು ಇಸ್ಲಾಮೀ ದೇಹ ಇರುವುದು ಭಾರತದ ಭವಿಷ್ಯವಾಗಿದೆ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು. ಆದರೆ, ಒಂದಂತೂ ನಿಜ. ಸಿಎಎ, ಎನ್ಆರ್ಸಿಯು ಭಾರತೀಯರಿಗೆ ಸಂವಿಧಾನದ ಬಗ್ಗೆ ಅರಿವು ಮೂಡಿಸಿವೆ. ಪ್ರತಿಯೊಬ್ಬರೂ ಸಂವಿಧಾನದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ನಜೀಬ್ ಜಂಗ್ ಹೇಳಿದ್ಧಾರೆ.

error: Content is protected !!
%d bloggers like this: