ಸಿಎಂ ಅಬ್ದುಲ್ಲಾಹ್ ಮುಸ್ಲಿಯಾರ್ ನಿಗೂಢ ಮರಣ- ಮತ್ತೆ ಸಿಬಿಐ ತನಿಖೆ

ನವದೆಹಲಿ: ಕಾಸರ್‌ಗೋಡ್, ಚೆಂಬರಿಕಾ ಖಾಝಿ ಸಿಎಂ ಅಬ್ದುಲ್ಲಾ ಮುಸ್ಲಿಯಾರ್ ಅವರ ಮರಣದ ಬಗ್ಗೆ ಮತ್ತೆ ಸಿಬಿಐ ತನಿಖೆ ನಡೆಯಲಿದೆ. ಕೇರಳದ 19 ಸಂಸದರ ಸಹಿಯೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರೊಂದಿಗೆ ಸಿಬಿಐ ಮರು ತನಿಖೆ ನಡೆಸುವ ಬಗ್ಗೆ ನೀಡಿದ ಪ್ರಸ್ತಾವಕ್ಕೆ ಅವರು ಭರವಸೆ ನೀಡಿದ್ದಾರೆ ಎಂದು ಕಾಸರ್‌ಗೋಡ್ ಸಂಸದ ರಾಜಮೋಹನ್ ಉನ್ನಿತ್ತಾನ್ ಹೇಳಿದ್ದಾರೆ.

ಚೆಂಬರಿಕಾ ಖಾಝಿಯವರ ಮರಣದ ಮರು-ವಿಚಾರಣೆಯು ಕಾಸರ್‌ಗೋಡ್ ಸಂಸತ್ ಕ್ಷೇತ್ರದಲ್ಲಿ ಸ್ಪರ್ಧಿಸಲು ನಾನು ಬಂದಾಗ ಹೆಚ್ಚಿನ ಜನರ ಬೇಡಿಕೆಯಾಗಿತ್ತು. ನಾನು ಸಂಸದನಾಗಿ ಆಯ್ಕೆಯಾದರೆ, ಮರುತನಿಕೆ ವಿಚಾರದಲ್ಲಿ ಭಾಗಿಯಾಗುತ್ತೇನೆ ಎಂದು ಭರವಸೆ ನೀಡಿದ್ದು, ಸಂಸದನಾಗಿ ಆಯ್ಕೆಯಾದ ನಂತರ ಕ್ರಿಯಾ ಸಮಿತಿಯ ಹಲವಾರು ಸಭೆಗಳಲ್ಲಿ ಮಾತನಾಡಿದ್ದೇನೆ.

ನಂತರ ಕೇರಳದ 19 ಸಂಸದರ ಸಹಿಯನ್ನು ಸಂಗ್ರಹಿಸಿ ಅಮಿತ್ ಶಾಗೆ ಸಲ್ಲಿಸಲಾಯಿತು. ಕಾಂಗ್ರೆಸ್ ಮುಖ್ಯ ವಿಪ್ ಕೊಡಿಕುನಿಲ್ ಸುರೇಶ್‌ರೊಂದಿಗೆ ಶಾ ಭೇಟಿಯಾಗಿದ್ದು, ಅಮಿತ್ ಶಾ ಮರು ತನಿಖೆಯನ್ನು ಪ್ರಕಟಿಸುವುದಾಗಿ ಘೋಷಿಸಿದ್ದಾರೆ ಎಂದು ರಾಜಮೋಹನ್ ಉನ್ನಿತ್ತಾನ್ ಹೇಳಿದ್ದಾರೆ.

2010 ಫೆಬ್ರವರಿ 15ರಂದು ಸಿಎಂ ಅಬ್ದುಲ್ಲಾ ಮುಸ್ಲಿಯಾರ್ ಚೆಂಬರಿಕಾ ಕಡಲ ತೀರದಲ್ಲಿ ನಿಗೂಢ ರೀತಿಯಲ್ಲಿ ಮೃತರಾಗಿ ಪತ್ತೆಯಾಗಿದ್ದರು. ಚೆಂಬರಿಕಾ ತೀರದಿಂದ 40 ಮೀಟರ್ ದೂರದಲ್ಲಿ ಸಮುದ್ರದಲ್ಲಿ ತೇಲುತ್ತಿರುವ ರೀತಿಯಲ್ಲಿ ಮೃತ ಶರೀರ ಪತ್ತೆಯಾಗಿದ್ದು, ಪ್ರಕರಣದ ತನಿಖೆ ನಡೆಸಿದ ಪೊಲೀಸರು ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಹೇಳಿದ್ದರು.

ನಂತರ ಪ್ರಕರಣದ ತನಿಖೆ ನಡೆಸಿದ ಕ್ರೈಂ ಬ್ರಾಂಜ್, ಮತ್ತು ಸಿಬಿಐ ಇದೇ ಅಭಿಪ್ರಾಯವನ್ನು ತಿಳಿಸಿವೆ. ಆದರೆ,ಮರಣದಲ್ಲಿ ನಿಗೂಢತೆ ಇದೆ ಎಂದು ಕುಟುಂಬ ಮತ್ತು ಸ್ಥಳೀಯರು ನಂಬಿಕೊಂಡಿದ್ದು, ಸಾವಿನ ಬಗ್ಗೆ ಹಲವಾರು ಆರೋಪಗಳನ್ನು ಎತ್ತಲಾಯಿತು. ಅಂತಿಮವಾಗಿ ಸ್ಥಳೀಯರು ಸತ್ಯವನ್ನು ಬಹಿರಂಗಪಡಿಸಬೇಕೆಂದು ಒತ್ತಾಯಿಸಿ ಸಾರ್ವಜನಿಕ ಪ್ರತಿಭಟನೆಗಳನ್ನು ಕೂಡ ನಡೆಸಿದ್ದರು.

ಚೆಂಬರಿಕಾ ಖಾಝಿ ಕೀಯೂರ್ ಪೂರ್ವ ತೀರದಲ್ಲಿ ಬಂಡೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಿಬಿಐ ಮೊದಲು ಹೇಳಿಕೊಂಡಿತ್ತು. ಸಾಂದರ್ಭಿಕ ಸಾಕ್ಷ್ಯಗಳ ಆಧಾರದ ಮೇಲೆ ಆತ್ಮಹತ್ಯೆ ಎಂದು ತಿಳಿಸಿರುವುದಾಗಿ ಸಿಬಿಐ ನಂತರ ನ್ಯಾಯಾಲಯಕ್ಕೆ ತಿಳಿಸಿತ್ತು. ಆದಾಗ್ಯೂ, ಮಹಾನ್ ಧಾರ್ಮಿಕ ವಿದ್ವಾಂಸರಾದ ಖಾಝಿ ಎಂದಿಗೂ ಆತ್ಮಹತ್ಯೆ ಮಾಡಿಕೊಳ್ಳುವವರಲ್ಲ ಮತ್ತು ಅವರ ಮರಣದಲ್ಲಿ ನಿಗೂಢತೆ ಇದೆ ಎಂದು ಸ್ಥಳೀಯರು ಪ್ರತಿಭಟನೆ ಮುಂದುವರೆಸಿದ್ದರು.

Leave a Reply

Your email address will not be published. Required fields are marked *

error: Content is protected !!