ಕುವೈತ್ ಸಿಟಿ: ಖಾಸಗಿ ವಲಯದ ಸಿಬ್ಬಂದಿ ಏಳು ದಿನಗಳು ನಿರಂತರವಾಗಿ ಕೆಲಸಕ್ಕೆ ಗೈರು ಹಾಜರಾದರೆ ಅವರು ರಾಜಿನಾಮೆ ನೀಡಿರುವುದಾಗಿ ಪರಿಗಣಿಸುವಂತೆ ಕುವೈತ್ ಸಂಸತ್ತು ನಿರ್ದೇಶನ ನೀಡಿದೆ.
ಕಾರ್ಮಿಕರ ವಿರುದ್ಧ ನೀಡಲಾಗುವ ದೂರಿನಲ್ಲಿ ಸಾಕ್ಷ್ಯಗಳ ಬೆಂಬಲವಿದ್ದರೆ ವಾಸ ಪರವಾನಗಿ ರದ್ದು ಪಡಿಸುವಂತೆ ಕಾನೂನಿನಲ್ಲಿ ಬದಲಾವಣೆ ತರಬೇಕೆಂದು ಸಂಸದರು ಬೇಡಿಕೆ ಇಟ್ಟಿದ್ದಾರೆ. ಮುಹಮ್ಮದ್ ಅಲ್ ದಲಾಲ್, ಅಹ್ಮದ್ ಅಲ್ ಫಾದಿಲ್, ಸಫ ಅಲ್ ಹಾಶಿಂ, ಖಾಲಿದ್ ಅಲ್ ಶತ್ತಿ, ಸಲಾಹ್ ಅಲ್ ಖುರ್ಷಿದ್ ಮುಂತಾದ ಸಂಸದರು ಈ ಬೇಡಿಕೆ ಮುಂದಿಟ್ಟಿದ್ದಾರೆ.
ಕಾರಣ ಇಲ್ಲದೆ ಖಾಸಗಿ ವಲಯದ ಕಾರ್ಮಿಕರು ಒಂದು ವಾರದ ವರೆಗೆ ನಿರಂತರವಾಗಿ ಅಥವಾ ವರ್ಷದಲ್ಲಿ 20 ದಿನಗಳಿಗಿಂತ ಅಧಿಕ ರಜೆ ಪಡೆದರೆ ಅಂಥವರು ಕೆಲಸಕ್ಕೆ ರಾಜಿನಾಮೆ ನೀಡಿರುವುದಾಗಿ ಪರಿಗಣಿಸಬೇಕೆಂದು ನಿರ್ದೇಶನ ನೀಡಲಾಗಿದೆ. ಇಂತಹ ಸನ್ನಿವೇಶದಲ್ಲಿ ಸಂಸ್ಥೆಯ ಕಡತದಿಂದ ಕಾರ್ಮಿಕನ ಹೆಸರನ್ನು ಕಿತ್ತು ಹಾಕಲು ಉದ್ಯೋಗದಾತನಿಗೆ ಅವಕಾಶ ನೀಡಬೇಕೆಂದು ನಿರ್ದೇಶನ ನೀಡಲಾಗಿದೆ.
ವಾರ್ಷಿಕ ರಜಾದಲ್ಲಿ ತೆರಳಿ ಆರು ತಿಂಗಳ ವರೆಗೆ ಊರಲ್ಲಿ ಉಳಿದು ಕೊಳ್ಳುವ ಕಾರ್ಮಿಕರಿದ್ದು, ಕಾರ್ಮಿಕ ಗೈರಾದ ಕಾರಣ ಇದರ ವಿರುದ್ದ ದೂರು ನೀಡಲು ಉದ್ಯೋಗದಾತನಿಗೆ ಸಾಧ್ಯವಾಗದ ಪರಿಸ್ಥಿತಿ ಇದೆ. ಕಾರ್ಮಿಕ ಹಕ್ಕಿನಂತೆ ಉದ್ಯೋಗದಾತರ ಹಕ್ಕು ಕೂಡ ಸಂರಕ್ಷಣೆ ಮಾಡಬೇಕಾಗಿದೆ ಎಂದು ಸಂಸದರು ಬೆಟ್ಟು ಮಾಡಿದ್ದಾರೆ.
ಮನ್ಪವರ್ ಅಥಾರಿಟಿಯಲ್ಲಿ ಸಮರ್ಪಿಸುವ ದೂರುಗಳಿಗೆ ಸಾಕ್ಷ್ಯದ ಹಿನ್ನೆಲೆ ಇದ್ದರೆ ಕಾರ್ಮಿಕರ ವಾಸ ಪರವಾನಗಿ ರದ್ದು ಮಾಡುವ ರೀತಿಯಲ್ಲಿ ಕಾನೂನಿಗೆ ತಿದ್ದುಪಡಿ ತರಬೇಕು ಎಂದು ನಿರ್ದೇಶನದಲ್ಲಿ ಎಂಪಿಗಳು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.






