janadhvani

Kannada Online News Paper

ವಾಟ್ಸಪ್ ಸೋರಿಕೆ:ಇಸ್ರೇಲ್ ನಿರ್ಮಿತ ‘ಪೆಗಾಸಸ್‌’ ಭಾರೀ ಅಪಾಯಕಾರಿ

ಜಗತ್ತಿನ ಅತೀ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ ವಾಟ್ಸಪ್‌ ಬಹು ಉಪಯುಕ್ತ ಆಪ್ ಆಗಿದೆ. ಆದರೆ ವಾಟ್ಸಪ್‌ ಮೂಲಕ ಮಾಹಿತಿ ದೋಚುವ ಕೆಲಸಗಳು ನಡೆಯುತ್ತಿವೆ ಎಂದರೆ ನೀವು ನಂಬಲೇ ಬೇಕು. ದೇಶದ ಪ್ರಮುಖ ಪತ್ರಕರ್ತರ ಮತ್ತು ಸಾಮಾಜಿಕ ಹೋರಾಟಗಾರರ ವಾಟ್ಸಪ್‌ ಮೂಲಕ ಸೈಬರ್ ಭದ್ರತೆಯ ಮೇಲೆ ನಿಗಾ ಇಡುವ ಇಸ್ರೇಲ್‌ನ ಎನ್‌ಎಸ್‌ಒ ಗ್ರೂಪ್‌ನ ಸಾಫ್ಟ್‌ವೇರ್ನಿಂದ ಗೂಢಚರ್ಯೆ ನಡೆಸಿರುವ ಸುದ್ದಿ ಇದೀಗ ಬೆಳಕಿಗೆ ಬಂದಿದೆ.

ಹೌದು, ಇಸ್ರೇಲ್‌ನ ಎನ್‌ಎಸ್‌ಒ ಗ್ರೂಪ್‌ ( NSO Group) ಅಭಿವೃದ್ಧಿಪಡಿಸಿರುವ ‘ಪೆಗಾಸಸ್‌'(Pegasus) ಹೆಸರಿನ ತಂತ್ರಾಂಶದ(ಸಾಫ್ಟ್‌ವೇರ್) ಮೂಲಕ ಜಗತ್ತಿನಾದ್ಯಂತ 1400 ವಾಟ್ಸಪ್‌ ಬಳಕೆದಾರರ ಮಾಹಿತಿ ಕಳವು ಮಾಡಲಾಗಿದೆ ಎನ್ನುವ ಸಂಗತಿಯನ್ನು ವಾಟ್ಸಪ್‌ ತಿಳಿಸಿದೆ. ಮುಖ್ಯವಾಗಿ ಭಾರತ ದೇಶದ ಪ್ರಮುಖ ಜರ್ನಲಿಸ್ಟ್‌ ಮತ್ತು ಸಾಮಾಜಿಕ ಹೋರಾಟಗಾರರ ವಾಟ್ಸಪ್‌ ಖಾತೆಗಳ ಮೂಲಕ ಅವರ ಕರೆಗಳ ಮಾಹಿತಿಗೆ ಕನ್ನ ಹಾಕಲಾಗಿದೆ.

ಏನಿದು ಪೆಗಾಸಸ್?
ಪೆಗಾಸಸ್ ಎನ್ನುವುದು ಒಂದು ನಿಗೂಢ ತಂತ್ರಾಂಶವಾಗಿದ್ದು, ಈ ತಂತ್ರಾಂಶವನ್ನು ಇಸ್ರೇಲ್‌ನ ಎನ್‌ಎಸ್‌ಒ ಗ್ರೂಪ್‌ ( NSO Group) ಅಭಿವೃದ್ಧಿ ಪಡೆಸಿದೆ. ಜಗತ್ತಿನ ಪ್ರಮುಖ ಬಳಕೆದಾರರ ಮಾಹಿತಿ ದೋಚಲು ತಯಾರಿಸಲಾಗಿದ್ದು, ಬಳಕೆದಾರರಿಗೆ ತಿಳಿಯಂದೆ ಅವರ ಸ್ಮಾರ್ಟ್‌ಫೋನ್ ಸೇರಿಕೊಳ್ಳುತ್ತದೆ. ಹಾಗೆಯೇ ಅವರ ಫೋನಿನ ಎಲ್ಲ ಮಾಹಿತಿಗಳನ್ನು ತನ್ನ ತಂಡಕ್ಕೆ ರವಾನಿಸುತ್ತದೆ.

ಮಾಹಿತಿ ಕನ್ನ ಹೇಗೆ?
ವಾಟ್ಸಪ್‌ಗೆ ವಿಡಿಯೊ ಕರೆ ಮಾಡುವ ಮೂಲಕ ‘ಪೆಗಾಸಸ್‌’ ಎಂಬ ನಿಗೂಢ ತಂತ್ರಾಂಶ ಬಳಕೆದಾರರ ಸ್ಮಾರ್ಟ್‌ಫೋನ್‌ಗೆ ಸೇರಿಸಲಾಗುತ್ತದೆ. ಫೋನಿಗೆ ಬರುವ ವಿಡಿಯೊ ಕರೆಯನ್ನು ಬಳಕೆದಾರರು ರೀಸಿವ್‌ ಮಾಡದಿದ್ದರು ಸಹ ಪೆಗಾಸಸ್‌ ತಂತ್ರಾಂಶ ಫೋನ್‌ಗೆ ಪ್ರವೇಶ ಪಡೆಯುತ್ತದೆ. ಬಳಕೆದಾರರ ಕರೆ, ಮೆಸೆಜ್, ಸೇರಿದಂತೆ ಅಗತ್ಯ ಮಾಹಿತಿಗಳನ್ನು ಪಡೆದುಕೊಳ್ಳಲಾಗುತ್ತದೆ.

ಯಾವ ಉದ್ದೇಶಕ್ಕಾಗಿ ಈ ತಂತ್ರಾಂಶ ಬಳಕೆ ಮಾಡಲಾಗಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲ. ಹಾಗೆಯೇ ದೇಶದ ಎಷ್ಟು ಬಳಕೆದಾರರ ಮಾಹಿತಿ ಕದಿಯಲಾಗಿದೆ ಎನ್ನುವ ಬಗ್ಗೆಯು ಮಾಹಿತಿ ಅಲಭ್ಯ. ಆದರೆ ಕಳೆದ ಮೇ ತಿಂಗಳಿನಲ್ಲಿ ಪೆಗಾಸಸ್ ಕಾರ್ಯನಿರ್ವಹಣೆ ಮಾಡುತ್ತಿಲ್ಲ ಎಂದು ವಾಟ್ಸಪ್ ತಿಳಿಸಿದೆ. ಜಗತ್ತಿನಲ್ಲಿ ಒಟ್ಟು ಸುಮಾರು 150 ಕೋಟಿ ವಾಟ್ಸಪ್‌ ಬಳಕೆದಾರರಿದ್ದಾರೆ ಮತ್ತು ಭಾರತದಲ್ಲಿ ಸುಮಾರು 40 ಕೋಟಿಯಷ್ಟು ಜನ ವಾಟ್ಸಪ್ ಬಳಕೆ ಮಾಡುತ್ತಾರೆ. ವಾಟ್ಸಪ್ ಬಳಕೆದಾರರ ಖಾಸಗಿತನ ಕಾಪಾಡಲು ವಾಟ್ಸಪ್‌ ಸಂಸ್ಥೆಯು ಸದಾ ಕಾರ್ಯನಿರ್ವಹಿಸುತ್ತದೆ ಎಂದು ಕ್ಯಾಥ್‌ಕಾರ್ಟ್‌ ಹೇಳಿದ್ದಾರೆ.

error: Content is protected !! Not allowed copy content from janadhvani.com