ಮಹಾರಾಷ್ಟ್ರ ವಿಧಾನಸಭಾ ಚುನಾವಣೆ: ಬಿಜೆಪಿ-ಶಿವಸೇನೆ ಮೈತ್ರಿಗೆ ಬಿರುಕು

ಮುಂಬೈ .ಸೆಪ್ಟೆಂಬರ್.20:ಮಹಾರಾಷ್ಟ್ರದಲ್ಲಿ ಬಿಜೆಪಿ ಶಿವಸೇನೆಯ ಜೊತೆಗೆ ಮೈತ್ರಿ ಮಾಡಿಕೊಂಡು ಅಧಿಕಾರ ನಡೆಸುತ್ತಿದೆ. ವಿಧಾನಸಭಾ ಚುನಾವಣೆ ಪ್ರಯುಕ್ತ ಅಲ್ಲಿನ ಬಿಜೆಪಿ ಸರ್ಕಾರ “ಮಹಾ ಜನಾದೇಶ್ ಯಾತ್ರಾ” ಎಂಬ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಕಾರ್ಯಕ್ರಮದ ಭಾಗವಾಗಿ ಆಯೋಜಿಸಲಾಗಿದ್ದ ಸಾರ್ವಜನಿಕ ಭಾಷಣದಲ್ಲಿ ಅನೇಕ ವಿಚಾರಗಳ ಕುರಿತು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ತಮ್ಮ ಪಕ್ಷದ ಹಳೆಯ ಮಿತ್ರಪಕ್ಷವಾದ ಶಿವಸೇನೆಯ ಕುರಿತು ಒಂದೇ ಒಂದು ಅಕ್ಷರ ಮಾತನಾಡದಿದ್ದದ್ದು ಇದೀಗ ಹತ್ತಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ನರೇಂದ್ರ ಮೋದಿ ತಮ್ಮ 50 ನಿಮಿಷಗಳ ಭಾಷಣದಲ್ಲಿ ಒಂದೇ ಒಂದು ಬಾರಿ ಸಹ ‘ಮೈತ್ರಿ ಪಾಲುದಾರ’, ‘ಮೈತ್ರಿ ಸರ್ಕಾರ’, ‘ಶಿವಸೇನೆ’ ಅಥವಾ ‘ಉದ್ಧವ್ ಠಾಕ್ರೆ’ ಎಂಬ ಪದಗಳನ್ನು ಉಲ್ಲೇಖಿಸಿಲ್ಲ. ಅವರ ಭಾಷಣ ಕೇವಲ ಅಲ್ಲಿನ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ಕೇಂದ್ರ ಸರ್ಕಾರದ ಸಾಧನೆಗಷ್ಟೇ ಸೀಮಿತವಾಗಿತ್ತು.
ಅಲ್ಲದೆ, ಇಂದಿನ ಪ್ರಧಾನಿ ಮೋದಿ ಭಾಷಣ ಸೇರಿದಂತೆ ಕಳೆದ ಕೆಲ ದಿನಗಳಿಂದ ಮಹಾರಾಷ್ಟ್ರ ರಾಜಕಾರಣದಲ್ಲಿ ನಡೆಯುತ್ತಿರುವ ಪ್ರಹಸನಗಳನ್ನು ಗಮನಿಸಿದರೆ ಈ ಭಾರಿಯ ಚುನಾವಣೆಯಲ್ಲಿ ಬಿಜೆಪಿ ಹಾಗೂ ಶಿವಸೇನೆ ಮೈತ್ರಿಯನ್ನು ಕೈಬಿಟ್ಟು ಸ್ವತಂತ್ರ್ಯವಾಗಿ ಸ್ಪರ್ಧಿಸುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ.

ಒಟ್ಟು 288 ವಿಧಾನ ಸಭಾ ಕ್ಷೇತ್ರಗಳನ್ನು ಹೊಂದಿರುವ ಮಹಾರಾಷ್ಟ್ರದಲ್ಲಿ ಶಿವಸೇನೆ ಬಿಜೆಪಿ ಎದುರು 50-50 ಸೀಟು ಹಂಚಿಕೆಯ ಸೂತ್ರವನ್ನು ಮುಂದಿಟ್ಟಿತ್ತು. ಆದರೆ, ಕಾಂಗ್ರೆಸ್ ಹಾಗೂ ಎನ್ಸಿಎ ಪಕ್ಷದಿಂದ 30ಕ್ಕೂ ಹೆಚ್ಚು ಗೆಲ್ಲುವ ನಾಯಕರು ಬಿಜೆಪಿ ಪಕ್ಷಾಂತರ ಮಾಡುವ ಸಾಧ್ಯತೆ ಇದ್ದು, ಇವರಿಗೆ ಸ್ಥಾನ ಹಂಚಿಕೆ ಮಾಡುವ ಸಲುವಾಗಿ ಅಲ್ಲಿನ ಬಿಜೆಪಿ ನಾಯಕರು 50-50 ಸೀಟು ಹಂಚಿಕೆ ಸಾಧ್ಯವಿಲ್ಲ ಎಂದು ಶಿವಸೇನೆ ಪಕ್ಷದ ನಾಯಕ ಉದ್ಧವ್ ಠಾಕ್ರೆಗೆ ಖಡಕ್ ಆಗಿಯೇ ತಿಳಿಸಿದ್ದಾರೆ.

ಇದು ಸಾಮಾನ್ಯವಾಗಿ ಉದ್ಧವ್ ಠಾಕ್ರೆಯ ಅಸಮಾಧಾನಕ್ಕೆ ಕಾರಣವಾಗಿದ್ದು, ಈಗಾಗಲೇ ಅವರು ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಅಲ್ಲದೆ, ತಾವು ಕೇಳಿದಷ್ಟು ಸ್ಥಾನ ಸಿಗದೆ ಇದ್ದಲ್ಲಿ ಬಿಜೆಪಿ ಮೈತ್ರಿಯಿಂದ ಹೊರ ಬರುವ ಮಾತುಗಳನ್ನು ಆಡಿದ್ದಾರೆ.

ಈ ಹಿನ್ನೆಲೆಯಲ್ಲಿ ಇಂದಿನ ಮೋದಿ ಭಾಷಣ ಸಾಕಷ್ಟು ಮಹತ್ವ ಪಡೆದುಕೊಂಡಿತ್ತು. ಆದರೆ, ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಎಲ್ಲೂ ಶಿವಸೇನೆಯ ಕುರಿತು ಉಲ್ಲೇಖ ಮಾಡದೆ ಇರುವುದು ಇದೀಗ ಹತ್ತಾರು ಅನುಮಾನಗಳಿಗೆ ಕಾರಣವಾಗಿದೆ. ಅಲ್ಲದೆ, ಬಿಜೆಪಿ ಹಾಗೂ ಶಿವಸೇನೆ ದಶಕಗಳ ಮೈತ್ರಿಯನ್ನು ಕಡಿದುಕೊಂಡು ವಿಧಾನಸಭಾ ಚುನಾವಣೆಯನ್ನು ಏಕಾಂಗಿಯಾಗಿ ಎದುರಿಸುವುದು ಬಹುತೇಕ ಖಚಿತವಾಗಿದೆ.

Leave a Reply

Your email address will not be published. Required fields are marked *

error: Content is protected !!