janadhvani

Kannada Online News Paper

ವಾಹನಗಳ ಬೇಡಿಕೆ ಕುಸಿತ: ಅಶೋಕ್​ ಲೇಲ್ಯಾಂಡ್,ಮಾರುತಿ ಸುಜುಕಿ ಉತ್ಪಾದನೆ ಸ್ಥಗಿತ

ನವದೆಹಲಿ: ವಾಣಿಜ್ಯ ವಾಹನ ಮಾರುಕಟ್ಟೆಯಲ್ಲಿ ವಾಹನಗಳ ಬೇಡಿಕೆ ಕುಸಿದಿರುವ ಹಿನ್ನೆಲೆಯಲ್ಲಿ ಚೆನ್ನೈನಲ್ಲಿರುವ ಅಶೋಕ್​ ಲೇಲ್ಯಾಂಡ್ ವಾಹನ ತಯಾರಕ ಕಂಪನಿಯ ಪ್ರಧಾನ ಕಚೇರಿ ಶುಕ್ರವಾರದಿಂದ ಐದು ದಿನಗಳ ಕಾಲ ತನ್ನ ಉತ್ಪಾದನೆಯನ್ನು ಸ್ಥಗಿತಗೊಳಿಸುತ್ತಿರುವುದಾಗಿ ಘೋಷಣೆ ಮಾಡಿದೆ.​

ದೇಶದ ಮೂರನೇ ಅತಿದೊಡ್ಡ ವಾಣಿಜ್ಯ ವಾಹನ ತಯಾರಿಕ ಕಂಪನಿಯಾಗಿರುವ ಲೇಲ್ಯಾಂಡ್​, ಗುರುವಾರ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ನಿರಂತರವಾಗಿ ವಾಣಿಜ್ಯ ವಾಹನಗಳ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿಯುತ್ತಿದ್ದು, ಕಂಪನಿಯ ರಕ್ಷಣಾ ದೃಷ್ಟಿಯಿಂದ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಹೀಗಾಗಿ ಸಾಮಾನ್ಯ ರಜಾ ದಿನವಾದ ಭಾನುವಾರ ಸೇರಿದಂತೆ 06 ರಿಂದ 11ನೇ ದಿನಾಂಕದವರೆಗೂ ಉತ್ಪಾದನಾ ಘಟಕವನ್ನು ಸ್ಥಗಿತಗೊಳಿಸಲಾಗುವುದು ಎಂದು ಹೇಳಿದೆ.

ದೇಶದಲ್ಲಿರುವ 8,296 ಲೇಲ್ಯಾಂಡ್​ ಘಟಕಗಳಲ್ಲಿ ಆಗಸ್ಟ್​ ತಿಂಗಳಲ್ಲಿ ವಾಹನ ಮಾರಾಟವೂ ಶೇ.50 ರಷ್ಟು ಕುಸಿದಿದೆ ಎಂದು ಅಶೋಕ್​ ಲೇಲ್ಯಾಂಡ್​ ವರದಿ ನೀಡಿದೆ.

ಇದಕ್ಕೂ ಮುನ್ನ ಮಾರುತಿ ಸುಜುಕಿ ಎರಡು ದಿನಗಳಗಳ ಉತ್ಪಾದನೆಯನ್ನು ಸ್ಥಗಿತಗೊಳಿಸುವುದಾಗಿ ತಿಳಿಸಿತ್ತು, ಗುರುಗ್ರಾಮ ಮತ್ತು ಮಿನೇಸಾರ್​ನಲ್ಲಿರುವ ಉತ್ಪಾದನ ಘಟಕಗಳಲ್ಲಿ ಸೆ.7 ರಿಂದ 9ರವರೆಗೆ ಸ್ಥಗಿತಗೊಳಿಸುವುದಾಗಿ ಮೊದಲೇ ಹೇಳಿದೆ.

ದಾಖಲೆ ಪ್ರಮಾಣದಲ್ಲಿ ಬೇಡಿಕೆ ಕುಸಿದ ಹಿನ್ನೆಲೆಯಲ್ಲಿ ಮಾರುತಿ ಸುಜುಕಿ ಈ ನಿರ್ಧಾರ ತೆಗೆದುಕೊಂಡಿದೆ. ಆಗಸ್ಟ್​ ತಿಂಗಳಲ್ಲಿ ಶೇ. 33.90 ರಷ್ಟು ಉತ್ಪಾದನೆಯನ್ನು ಕಡಿತಗೊಳಿಸಿದೆ. ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾಗಿರುವ ಮಾರುತಿ ಸುಜುಕಿ ತನ್ನ ಉತ್ಪಾದನೆಯನ್ನು ಸತತ ಏಳನೇ ತಿಂಗಳು ಕಡಿತಗೊಳಿಸಿದೆ.

ದೇಶದಲ್ಲಿ ಆಟೋ ಮೊಬೈಲ್​ ವಲಯವೂ ತುಂಬಾ ಮಂದಗತಿಯಲ್ಲಿ ಸಾಗುತ್ತಿದ್ದು, ದಿನದಿಂದ ದಿನಕ್ಕೆ ಬೇಡಿಕೆ ಕುಸಿಯುತ್ತಿದೆ. ಪರಿಸ್ಥಿತಿ ಸುಧಾರಿಸಲು ಸರ್ಕಾರದಿಂದ ಸಾಧ್ಯವಾದಷ್ಟು ಬೆಂಬಲ ನೀಡುವುದಾಗಿ ಕೇಂದ್ರ ಸಾರಿಗೆ ಸಚಿವ ನಿತಿನ್​ ಗಡ್ಕರಿ ಭರವಸೆ ನೀಡಿದ್ದಾರೆ. ಜಿಎಸ್​ಟಿ ವಿಚಾರದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಜತೆ ಚರ್ಚಿಸಿ ಬೇಡಿಕೆ ಮುಂದಿಡುವುದಾಗಿ ತಿಳಿಸಿದ್ದಾರೆ.

ವಾಣಿಜ್ಯ ವಾಹನಗಳಿಗೆ ಬೇಡಿಕೆಯನ್ನು ಹೆಚ್ಚಿಸಲು ಮುಂದಿನ ಮೂರು ತಿಂಗಳಲ್ಲಿ ಸುಮಾರು 5 ಲಕ್ಷ ಕೋಟಿ ರೂ. ಮೌಲ್ಯದ 68 ರಸ್ತೆ ಯೋಜನೆಗಳನ್ನು ಸಾರಿಗೆ ಸಚಿವಾಲಯದಿಂದ ನೀಡುವುದಾಗಿ ಗಡ್ಕರಿ ಭರವಸೆ ನೀಡಿದ್ದಾರೆ.

ಪೆಟ್ರೋಲ್​ ಮತ್ತು ಡೀಸೆಲ್​ ವಾಹನಗಳ ಮೇಲಿನ ತೆರಿಗೆ ಇಳಿಕೆ ಮಾಡಬೇಕೆಂಬುದು ನಿಮ್ಮ ಬೇಡಿಕೆಯಾಗಿದೆ. ನಿಮ್ಮ ಸಲಹೆ ಉತ್ತಮವಾಗಿದೆ. ಈ ಸಂದೇಶವನ್ನು ನಾನು ನಿರ್ಮಲಾ ಸೀತಾರಾಮನ್​ ಬಳಿ ತೆಗೆದುಕೊಂಡು ಹೋಗುತ್ತೇನೆ. ಸ್ವಲ್ಪ ಸಮಯದವರೆಗೆ ಜಿಎಸ್​ಟಿ ಇಳಿಕೆಯಾದರೆ, ನಿಮಗೆ ಸಹಾಯವಾಗಲಿದೆ ಎಂದು ವಾರ್ಷಿಕ ಎಸ್​ಐಎಎಂ ಕನ್ವೆನ್ಸನ್​ನಲ್ಲಿ ವಾಹನ ಕಂಪನಿಗಳಿಗೆ ತಿಳಿಸಿದರು.​

error: Content is protected !! Not allowed copy content from janadhvani.com