ಆರ್ಥಿಕ ಹಿಂಜರಿತ: ಕೇಂದ್ರ, ಮನಮೋಹನ್ ಸಿಂಗ್ ರ ಸಲಹೆ ಪಡೆಯಬೇಕು- ಶಿವಸೇನೆ

ಮುಂಬೈ, ಸೆ.4: ದೇಶದ ಆರ್ಥಿಕ ಮಂದಗತಿಯ ಕುರಿತಂತೆ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ನೀಡಿರುವ ಎಚ್ಚರಿಕೆಯನ್ನು ಆಲಿಸಿ.ಈ ವಿಚಾರದ ಬಗ್ಗೆ ರಾಜಕೀಯ ಮಾಡಬೇಡಿ ಎಂದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಶಿವಸೇನೆ ಕಿವಿಮಾತು ಹೇಳಿದೆ.

ದೇಶದ ಆರ್ಥಿಕತೆಯನ್ನು ನಿಭಾಯಿಸುವ ಕುರಿತಂತೆ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಮಾಡಿರುವ ಟೀಕೆಯನ್ನು ಕೇಂದ್ರ ಸರಕಾರ ತಿರಸ್ಕರಿಸಿದ ಮರುದಿನವೇ ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಸಲಹೆ ನೀಡಿದೆ.

‘‘ಮನಮೋಹನ್ ಸಿಂಗ್ ಅವರ ಸಲಹೆ ಕೇಳುವುದರಲ್ಲಿ ರಾಷ್ಟ್ರೀಯ ಹಿತಾಸಕ್ತಿಯಿದೆ. ಆರ್ಥಿಕ ಕುಸಿತದ ಸುತ್ತ ಯಾವುದೇ ರಾಜಕೀಯ ಇರಬಾರದು. ಕಾಶ್ಮೀರ ಹಾಗೂ ಆರ್ಥಿಕ ಮಂದಗತಿ ಎರಡು ಸಂಪೂರ್ಣ ಭಿನ್ನವಾದ ವಿಚಾರಗಳಾಗಿವೆ. ಇದೀಗ ಆರ್ಥಿಕತೆ ಮಂದಗತಿಯಲ್ಲಿದೆ’’ ಎಂದು ಶಿವಸೇನೆ ತನ್ನ ಮುಖವಾಣಿ ‘ಸಾಮ್ನಾ’ ಪತ್ರಿಕೆಯ ಸಂಪಾದಕೀಯದಲ್ಲಿ ಬರೆದಿದೆ.

ರವಿವಾರ ವಿಡಿಯೋ ಸಂದೇಶ ನೀಡಿದ್ದ ಮನಮೋಹನ್ ಸಿಂಗ್, ‘‘ದೇಶದ ಆರ್ಥಿಕ ಪರಿಸ್ಥಿತಿ ಶೋಚನೀಯವಾಗಿದೆ. ಕಳೆದ ಮೂರು ತಿಂಗಳ ಜಿಡಿಪಿ ಬೆಳವಣಿಗೆ ದರ 5 ಶೇ.ರಷ್ಟಿದೆ, ನಾವು ದೀರ್ಘಕಾಲ ಆರ್ಥಿಕ ಮಂದಗತಿಯ ಮಧ್ಯದಲ್ಲಿದ್ದೇವೆ ಎಂದು ಇದು ಸೂಚಿಸುತ್ತಿದೆ’’ ಎಂದು ಅಭಿಪ್ರಾಯಪಟ್ಟಿದ್ದರು.

ಮಂಗಳವಾರ ಸಿಂಗ್ ಅವರ ಟೀಕೆಯನ್ನು ನಿರಾಕರಿಸಿದ್ದ ಕೇಂದ್ರ ಸರಕಾರ, ಭಾರತ ಈಗ ವಿಶ್ವದ ಐದನೇ ಅತ್ಯಂತ ದೊಡ್ಡ ಆರ್ಥಿಕ ವ್ಯವಸ್ಥೆ ಹೊಂದಿರುವ ದೇಶವಾಗಿದೆ. ಸಿಂಗ್ ಅವರ ಅಧಿಕಾರದ ಅವಧಿಯಲ್ಲಿ 11ನೇ ಸ್ಥಾನದಲ್ಲಿದ್ದ ಭಾರತ ಈಗ ಮೂರನೇ ಸ್ಥಾನಕ್ಕೆ ತಲುಪುವ ಹಾದಿಯಲ್ಲಿದೆ’ ಎಂದು ಮಾಹಿತಿ ಹಾಗೂ ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದರು.

Leave a Reply

Your email address will not be published. Required fields are marked *

error: Content is protected !!