janadhvani

Kannada Online News Paper

ಡಿ.ಕೆ.ಶಿ ಬಂಧನ:ವ್ಯಾಪಕ ಆಕ್ರೋಶ- ನಾಳೆ ರಾಜ್ಯಾದ್ಯಂತ ಕಾಂಗ್ರೆಸ್ನಿಂದ ಪ್ರತಿಭಟನೆ

ಬೆಂಗಳೂರು.ಸೆ,03: ಪ್ರಭಾವಿ ರಾಜಕಾರಣಿ, ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಬಂಧನಕ್ಕೆ ಬೆಂಬಲಿಗರು ಮತ್ತು ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನಕಪುರದಲ್ಲಿ ಡಿಕೆಶಿ ಬೆಂಬಲಿಗರು ರಸ್ತೆಮಧ್ಯೆ ಟೈರ್ಗೆ ಬೆಂಕಿ ಹಾಕಿ ಪ್ರತಿಭಟನೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಬೆಂಗಳೂರಿನಿಂದ ಕನಕಪುರ ಮಾರ್ಗವಾಗಿ ಸಂಚರಿಸುವ ಕೆಲವು ಬಸ್ಗಳ ಮೇಲೆ ಕಿಡಿಗೇಡಿಗಳ ಕಲ್ಲುತೂರಾಟ ನಡೆಸಿದ್ದಾರೆ.

ಬಂಧನ ಖಂಡಿಸಿ ನಾಳೆ ರಾಜ್ಯಾದ್ಯಂತ ಕಾಂಗ್ರೆಸ್ನಿಂದ ಪ್ರತಿಭಟನೆ ಮಾಡುವುದಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಕನಕಪುರದಾದ್ಯಂತ ಪ್ರತಿಭಟನೆ ಕಾವು ಹೆಚ್ಚಾಗಿದೆ. ದೊಡ್ಡಆಲಹಳ್ಳಿ, ಕೋಡಿಹಳ್ಳಿ, ಕನಕಪುರ ಟೌನ್ನಲ್ಲಿ ಟೈರ್ಗೆ ಬೆಂಕಿ ಹಚ್ಚಿ, ಬೆಂಬಲಿಗರು ಪ್ರತಿಭಟನೆ ಮಾಡುತ್ತಿದ್ದಾರೆ. ನಾಳೆ ಕನಕಪುರ ಬಂದ್ಗೆ ಕರೆ ನೀಡಲಾಗಿದ್ದು, ಪ್ರತಿಭಟನೆ ಮತ್ತಷ್ಟು ತೀವ್ರವಾಗುವ ಲಕ್ಷಣಗಳು ಕಂಡು ಬಂದಿದೆ.

ಬೆಂಗಳೂರಿನ ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣದ ಮೇಲ್ಭಾಗ ಇರುವ ಇಡಿ ಕಚೇರಿ ಹಾಗೂ ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ಬಿಎಸ್ವೈ ನಿವಾಸದ ಮುಂದೆ ಡಿಕೆಶಿ ಬೆಂಬಲಿಗರು ಪ್ರತಿಭಟನೆ ನಡೆಸುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ಪೊಲೀಸ್ ಇಲಾಖೆ ಹೈಅಲರ್ಟ್

ಡಿಕೆಶಿ ಬಂಧನದಿಂದ ನಾಳೆ ರಾಜ್ಯದೆಲ್ಲೆಡೆ ಭಾರೀ ಪ್ರತಿಭಟನೆಗಳು ನಡೆಯುವ ಸಾಧ್ಯತೆ ಇರುವುದಿರಂಧ ಪೊಲೀಸ್ ಇಲಾಖೆ ಹೈ ಅಲರ್ಟ್ ಆಗಿದೆ. ರಾಜ್ಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತಿಗೆ ಗೃಹಸಚಿವ ಬಸವರಾಜ ಬೊಮ್ಮಾಯಿ ಅವರು ಡಿಜಿಪಿ ನೀಲಮಣಿ ರಾಜು, ಪೊಲೀಸ್ ಕಮಿಷನರ್ ಬಾಸ್ಕರ್ ರಾವ್ ಗೆ ಸೂಚನೆ ನೀಡಿದ್ದಾರೆ. ರಾಜ್ಯದಲ್ಲಿ ಎಲ್ಲೂ ಅಹಿತಕರ ಘಟನೆ ನಡೆಯಬಾರದು. ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟ ಉಂಟಾಗದಂತೆ ನೋಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಕನಕಪುರ, ರಾಮನಗರ, ಬಳ್ಳಾರಿ, ಬೆಂಗಳೂರಿನಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ, ಕೆಲ ಸೂಕ್ಷ್ಮ ಪ್ರದೇಶಗಳಲ್ಲೂ ಕಟ್ಟೆಚ್ಚರಕ್ಕೆ ಸೂಚನೆ ನೀಡಲಾಗಿದೆ.

error: Content is protected !! Not allowed copy content from janadhvani.com