janadhvani

Kannada Online News Paper

ಡಿಕೆಶಿ ಸೆಪ್ಟೆಂಬರ್ 13 ರವರೆಗೂ ಇ.ಡಿ.ವಶಕ್ಕೆ- ನ್ಯಾಯಾಲಯ ಆದೇಶ

ನವದೆಹಲಿ: ನೋಟ್ ರದ್ದತಿ ವೇಳೆ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಸೆಪ್ಟೆಂಬರ್ 13ರವರೆಗೂ ಜಾರಿ ನಿರ್ದೇಶನಾಲಯ ವಶಕ್ಕೆ ನೀಡಲು ನ್ಯಾಯಾಲಯ ಇಂದು ಆದೇಶ ಪ್ರಕಟಿಸಿದೆನಿನ್ನೆ ಬಂಧನಕ್ಕೊಳಗಾದ ಡಿಕೆ ಶಿವಕುಮಾರ್ ಅವರನ್ನು ಇಂದು ಮಧ್ಯಾಹ್ನ ರೋಸ್ ಅವೆನ್ಯೂ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರುಪಡಿಸಲಾಯಿತು. ವಾದ ವಿವಾದ ಆಲಿಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅಜಯ್ ಕುಮಾರ್ ಕುಹರ್ ಸೆಪ್ಟೆಂಬರ್ 13ರವರೆಗೂ ಡಿಕೆ ಶಿವಕುಮಾರ್ ಅವರನ್ನು ಇಡಿ ವಶಕ್ಕೆ ಒಪ್ಪಿಸಿ ಆದೇಶ ಪ್ರಕಟಿಸಿದರು.

ಡಿ.ಕೆ. ಶಿವಕುಮಾರ್ ಪರವಾಗಿ ವಾದಿಸಿದ ಅಭಿಷೇಕ್ ಮನುಸಿಂಘ್ವಿ ಅವರು, ಆರೋಪಿಯಾಗಿದ್ದರೂ ಅವರ ಸ್ವತಂತ್ರ ಹರಣವಾಗಬಾರದು. ಜಾಮೀನು ತೆಗೆದುಕೊಳ್ಳುವುದು ಕೂಡ ಕಾನೂನು. ಸಂವಿಧಾನದ 22 ನೇ ವಿಧಿಯಲ್ಲಿ ಎಲ್ಲರಿಗೂ ಕಾನೂನಿನ‌ ರಕ್ಷಣೆ ಇದೆ. ನಮಗೆ ಜಾಮೀನು ನೀಡಬೇಕು. ಎಲ್ಲೆಡೆ ಸಂಚರಿಸಲು ಸ್ವತಂತ್ರವಿರಬೇಕು. ಒಂದು‌ ಕ್ಷಣವೂ ಇಡಿ‌ ಕಸ್ಟಡಿಗೆ ಕೊಡಬೇಡಿ ಎಂದು ನ್ಯಾಯಾಧೀಶರಿಗೆ ಮನವಿ ಮಾಡಿದರು.

ಇ.ಡಿ ಪರ ವಾದ ಮಂಡಿಸಿದ ವಕೀಲರು, ಇದು ಪಿಎಂಎಲ್ ಕಾಯ್ದೆ ಅಡಿ ಬರುವ ಪ್ರಕರಣವಾಗಿದೆ. ದೆಹಲಿಯಲ್ಲಿ ಸಿಕ್ಕ ಹಣದ ಮೂಲದ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಬೇಕಾಗಿದೆ. ಈವರೆಗೂ ಶಿವಕುಮಾರ್ ಸರಿಯಾಗಿ ವಿಚಾರಣೆಗೆ ಸಹಕರಿಸಿಲ್ಲ. ಹೀಗಾಗಿ ಅವರನ್ನು ಹೆಚ್ಚಿನ ವಿಚಾರಣೆ ನಡೆಸಬೇಕಾಗಿದ್ದು, 14 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ವಾದಿಸಿದರು.

error: Content is protected !! Not allowed copy content from janadhvani.com