ಏರ್ ಇಂಡಿಯಾ ಗೆ ಆರ್ಥಿಕ ಮುಗ್ಗಟ್ಟು: ಇಂಧನ ಪೂರೈಕೆ ಸ್ಥಗಿತ

ನವದೆಹಲಿ,ಆ.23: ದೇಶದ ಆರ್ಥಿಕತೆ ತೀರಾ ಹದಗೆಟ್ಟಿದ್ದು, ಪ್ರಮುಖ ಕಂಪೆನಿಗಳು ಮುಚ್ಚುವ ಭೀತಿಯಲ್ಲಿದೆ. ಇದೀಗ ಪ್ರಸಿದ್ಧ ವಿಮಾನಯಾನ ಸಂಸ್ಥೆಯಾದ ಏರ್ ಇಂಡಿಯಾ ಮೂರು ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳಿಗೆ ಇಲ್ಲಿಯವರೆಗೆ ಪೂರೈಸಿರುವ ಇಂಧನದ ಬಿಲ್‌ಗಳನ್ನು ಬಾಕಿ ಉಳಿಸಿಕೊಂಡಿದೆ. ಸರಿಸುಮಾರು 7 ತಿಂಗಳುಗಳಿಂದ ಬಿಲ್ ಗಳು ಪಾವತಿಯಾಗದೆ ಉಳಿದಿರುವ ಕಾರಣ ಸಂಸ್ಥೆಗಳು ಇಂಧನ ಪೂರೈಕೆಯನ್ನು ನಿಲ್ಲಿಸಿವೆ ಎಂದು ತಿಳಿದು ಬಂದಿದೆ.

ಸರ್ಕಾರಿ ಸ್ವಾಮ್ಯದ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್‌ಪಿಸಿಎಲ್)ನ ಬಿಲ್ ಗಳು ಬಾಕಿ ಇರುವುದರಿಂದ ಇಂದು ಮಧ್ಯಾಹ್ನದಿಂದ ಕೊಚ್ಚಿ, ಪುಣೆ, ಪಾಟ್ನಾ, ರಾಂಚಿ, ವೈಜಾಗ್ ಮತ್ತು ಮೊಹಾಲಿ ವಿಮಾನ ನಿಲ್ದಾಣಗಳಲ್ಲಿ ಏರ್ ಇಂಡಿಯಾ ವಿಮಾನಗಳಿಗೆ ಇಂಧನ ಪೂರೈಕೆಯನ್ನು ನಿಲ್ಲಿಸಿದೆ ಎಂದು ಪೆಟ್ರೋಲಿಯಮ್ ಕಂಪನಿಗಳು ತಿಳಿಸಿವೆ.

ಸದ್ಯ ಏರ್ ಇಂಡಿಯಾ ಸಂಸ್ಥೆಗೆ 3 ತಿಂಗಳ ಗಡುವು ನೀಡಿರುವ ಸಂಸ್ಥೆಗಳು ಬಾಕಿ ಬಿಲ್ ಗಳನ್ನು ಪಾವತಿಸುವವರೆಗೆ ಇಂಧನವನ್ನು ಪೂರೈಸುವುದಿಲ್ಲ ಎಂದು ತಿಳಿಸಿವೆಯಲ್ಲದೆ ನವೆಂಬರ್ 21ರೊಳಗೆ ಎಲ್ಲಾ ಬಿಲ್ ಗಳನ್ನು ಕ್ಲಿಯರ್ ಮಾಡುವಂತೆಯೂ, ವಿಫಲವಾದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕಂಪನಿಗಳು ತಿಳಿಸಿವೆ .ಇನ್ನೂ ಏರ್ ಇಂಡಿಯಾ ಮೂರು ಇಂಧನ ಕಂಪನಿಗಳಿಗೆ ಪಾವತಿಸಬೇಕಾದ ಒಟ್ಟು ಬಾಕಿ ಸುಮಾರು ರೂ. 4,500 ಕೋಟಿ ರೂಗಳಾಗಿದೆ.

ಏರ್ ಇಂಡಿಯಾ ತಾತ್ಕಾಲಿಕ ಬಿಕ್ಕಟ್ಟು ನಿವಾರಣೆಗಾಗಿ 60 ಕೋಟಿ ರೂ. ಪಾವತಿಸಲು ಮುಂದಾಗಿದ್ದು ಈ ಮೊತ್ತವು ಅವರು ಪಾವತಿಸಬೇಕಾಗಿರುವ ಸಾಗರದಷ್ಟು ಮೊತ್ತದಲ್ಲಿ ಒಂದು ಹನಿಯಷ್ಟು ಇಲ್ಲಾ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾಮಾನ್ಯವಾಗಿ ಕಂಪನಿಗಳು ತಮ್ಮ ಪ್ರಮುಖ ಗ್ರಾಹಕರಿಗೆ ಕ್ರೆಡಿಟ್ ಪೀರಿಯಡ್ (ಉಳಿಕೆ ಹಣ ಪಾವತಿಗೆ ನೀಡಿದ ಅಧಿಕ ಸಮಯ) ನೀಡುತ್ತಾರೆ ಅದು ಸುಮಾರು 200 ದಿನಗಳಾಗಿರುತ್ತದೆ ಆ ಅವಧಿಯೊಳಗೆ ಪಾವತಿಸಲು ವಿಫಲವಾದಲ್ಲಿ ನೇರ ಮಾತುಕತೆ ಆಹ್ವಾನಿಸಿ ವಸ್ತುಸ್ಥಿತಿ ವಿವರಿಸುವುದು ಕಂಪನಿಗಳಿಗೆ ಸಾಮಾನ್ಯ ಆದರೆ ಏರ್ ಇಂಡಿಯಾ ವಿಷಯದಲ್ಲಿ ಆ ಅವಧಿ ಮುಗಿದು ವಾರಗಳೇ ಕಳೆದರೂ ಯಾವುದೇ ಉತ್ತರ ಬಂದಿಲ್ಲದ ಕಾರಣ ತೈಲ ಕಂಪನಿಗಳು ಒಂದು ವಾರದ ಅಧಿಕ ಗಡುವು ನೀಡಿದರು ಏರ್ ಇಂಡಿಯಾ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದಿದ್ದಾರೆ.

ಆದರೆ ಎಚ್ಚರಿಕೆಗಳನ್ನೆಲ್ಲಾ ಗಾಳಿಗೆ ತೂರಿರುವ ಏರ್ ಇಂಡಿಯಾ ಬಾಕಿಗಳನ್ನು ತೀರಿಸಲು ಸ್ಪಷ್ಟವಾದ ಮಾರ್ಗಸೂಚಿ ಒದಗಿಸುವಲ್ಲಿ ವಿಫಲವಾಗಿರುವುದರಿಂದ ನಾವು ಇಂಧನ ಸರಬರಾಜನ್ನು ಸ್ಥಗಿತಗೊಳಿಸಿದ್ದೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಮತ್ತೊಬ್ಬ ಅಧಿಕಾರಿ ಹೇಳುವ ಪ್ರಕಾರ ಏರ್ ಇಂಡಿಯಾ ತನಗೆ ಸರ್ಕಾರದಿಂದ ಬರಬೇಕಾಗಿರುವ ಎಲ್ಲಾ ಆರ್ಥಿಕ ನೆರವು ಪಡೆದುಕೊಂಡಿದೆ ಆದರೆ ತೈಲ ಕಂಪನಿಗಳಿಗೆ ಮಾತ್ರ ಯಾವುದೇ ರೀತಿಯ ಬಾಕಿ ಮೊತ್ತ ನೀಡುವಲ್ಲಿ ವಿಫಲವಾಗಿದೆ ಎಂದಿದ್ದಾರೆ

Leave a Reply

Your email address will not be published. Required fields are marked *

error: Content is protected !!