ಕಳೆದ 7 ದಶಕದಲ್ಲೇ ಹಿಂದೆಂದೂ ಕಂಡು ಕೇಳರಿಯದ ಆರ್ಥಿಕ ಹಿನ್ನಡೆಯಲ್ಲಿ ಭಾರತ

ನವದೆಹಲಿ(ಆ. 23): ಕೆಲವಾರು ವರ್ಷಗಳಿಂದ ಆರ್ಥಿಕ ಪ್ರಗತಿ ಕುಂಠಿತಗೊಳ್ಳುತ್ತಿದೆ ಎಂದು ಹಲವಾರು ಆರ್ಥಿಕ ತಜ್ಞರು ಎಚ್ಚರಿಸುತ್ತಲೇ ಬಂದಿದ್ಧಾರೆ. ಕೇಂದ್ರ ಸರ್ಕಾರ ಇದನ್ನು ನಿರಾಕರಿಸುತ್ತಲೇ ಬಂದರೂ ಇದೀಗ ಆರ್ಥಿಕ ಹಿನ್ನಡೆಯ ಪಡೆಂಭೂತವನ್ನು ಮುಚ್ಚಿಟ್ಟುಕೊಳ್ಳುವ ಸ್ಥಿತಿ ಇಲ್ಲ. ನೀತಿ ಆಯೋಗ್ ಉಪಾಧ್ಯಕ್ಷ ರಾಜೀವ್ ಕುಮಾರ್ ಅವರೇ ಇವತ್ತಿನ ಆರ್ಥಿಕ ದುಸ್ಥಿತಿಯ ಬಗ್ಗೆ ಮಾತನಾಡಿದ್ದಾರೆ.

ಕಳೆದ 7 ದಶಕದಲ್ಲೇ ಹಿಂದೆಂದೂ ಕಂಡು ಕೇಳರಿಯದ ಪರಿಸ್ಥಿತಿ ದೇಶದಲ್ಲಿದೆ ಎಂದು ರಾಜೀವ್ ಕುಮಾರ್ ಹೇಳಿರುವುದು ಸದ್ಯದ ಆರ್ಥಿಕ ಸ್ಥಿತಿಗೆ ಕನ್ನಡಿ ಹಿಡಿದಂತಿದೆ.“ಕಳೆದ 70 ವರ್ಷದಲ್ಲಿ ಭಾರತ ಇಂಥ ಆರ್ಥಿಕ ಪರಿಸ್ಥಿತಿ ಎದುರಿಸಿರಲಿಲ್ಲ. ಇಡೀ ಹಣಕಾಸು ವಲಯ ಸಂಕಷ್ಟಕ್ಕೆ ಸಿಲುಕಿದೆ. ಯಾರೂ ಕೂಡ ಯಾರನ್ನೂ ನಂಬುವಂತಹ ಸ್ಥಿತಿ ಇಲ್ಲ” ಎಂದು ರಾಜೀವ್ ಕುಮಾರ್ ಹೇಳಿದ್ದಾರೆಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

2014ರಲ್ಲಿ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ವಿವಿಧ ಕಾರಣಗಳಿಂದಾಗಿ ದೇಶದ ಆರ್ಥಿಕ ಅಭಿವೃದ್ಧಿ ದರ ತುಸು ಇಳಿಮುಖವಾಗುತ್ತಲೇ ಬಂದಿದೆ. ನೋಟು ಅಪಮೌಲ್ಯೀಕರಣ, ಜಿಎಸ್ಟಿ ಕ್ರಮಗಳಿಂದಲೂ ಆರ್ಥಿಕತೆಗೆ ಹಿನ್ನಡೆಯಾಗಿದೆ ಎಂಬುದು ಕಾಂಗ್ರೆಸ್ ಸೇರಿದಂತೆ ಹಲವು ವಿಪಕ್ಷಗಳು ಸತತವಾಗಿ ಆರೋಪಿಸುತ್ತಲೇ ಬಂದಿದ್ದರು. ಕೇಂದ್ರದ ಹಿಂದಿನ ಆರ್ಥಿಕ ಸಲಹೆಗಾರರು, ನೀತಿ ಆಯೋಗ್ನ ಮಾಜಿ ಮುಖ್ಯಸ್ಥರು, ಮಾಜಿ ಆರ್ಬಿಐ ಗವರ್ನರ್ಗಳು ಸೇರಿದಂತೆ ಹಲವಾರು ಮಂದಿ ನಮ್ಮ ಆರ್ಥಿಕತೆ ಅಭಿವೃದ್ಧಿ ಬಗ್ಗೆ ಆಶಾದಾಯಕ ಅಭಿಪ್ರಾಯ ವ್ಯಕ್ತಪಡಿಸಲಿಲ್ಲ. ಸುಬ್ರಮಣಿಯನ್ ಸ್ವಾಮಿ ಅವರಂತಹ ಬಿಜೆಪಿ ನಾಯಕರೂ ಕೂಡ ಆರ್ಥಿಕ ಹಿನ್ನಡೆ ಬಗ್ಗೆ ಸತತವಾಗಿ ಎಚ್ಚರಿಸುತ್ತಲೇ ಬಂದಿದ್ದಾರೆ.

ಆರ್ಥಿಕತೆಯ ಸ್ಪರ್ಧಾತ್ಮಕತೆಯನ್ನು ಉತ್ತೇಜಿಸಲು ಮತ್ತು ಹಣಕಾಸು ವಲಯವನ್ನು ಸಂಕಷ್ಟದಿಂದ ಪಾರು ಮಾಡಲು ಸೂಕ್ತ ಸಮಯದಲ್ಲಿ ಸೂಕ್ತ ಕ್ರಮಗಳನ್ನ ಸರ್ಕಾರ ಕೈಗೊಳ್ಳುತ್ತದೆ. ಐಎಲ್ ಆ್ಯಂಡ್ ಎಫ್ಎಸ್ ಸಂಸ್ಥೆಗೆ ಸೇರಿದ ಕಂಪನಿಗಳ ಸಾಲಬಾಕಿ ಪ್ರಕರಣದಿಂದಾಗಿ ಹಣಕಾಸು ವಲಯಕ್ಕೆ ಹಿನ್ನಡೆ ಉಂಟಾಗಿದೆ. ಈ ನಿಟ್ಟಿನಲ್ಲಿ ಆರ್ಬಿಐ ಮತ್ತು ಕೇಂದ್ರ ಸರ್ಕಾರ ಈಗಾಗಲೇ ಕೆಲವೊಂದಿಷ್ಟು ಕ್ರಮಗಳನ್ನು ಕೈಗೊಂಡಿವೆ ಎಂದು ರಾಜೀವ್ ಕುಮಾರ್ ಹೇಳಿದ್ದಾರೆ.

ಭಾರತೀಯ ರಿಸರ್ವ್ ಬ್ಯಾಂಕ್ ಈ ಒಂದೇ ವರ್ಷದಲ್ಲಿ ಸತತ ನಾಲ್ಕು ಬಾರಿ ರಿಪೋ ದರ ಇಳಿಕೆ ಮಾಡಿದೆ. ಈ ಇಳಿಕೆಯ ಲಾಭವನ್ನು ಗ್ರಾಹಕರಿಗೆ ವರ್ಗಾವಣೆ ಮಾಡುವಂತೆಯೂ ಬ್ಯಾಂಕ್ಗಳಿಗೆ ಸೂಚಿಸಲಾಗಿದೆ. ಬ್ಯಾಂಕೇತರ ಹಣಕಾಸು ಸಂಸ್ಥೆ (ಎನ್ಬಿಎಫ್ಸಿ) ವಲಯದ ಹಣಕಾಸು ಸ್ಥಿತಿಯನ್ನು ಉತ್ತಮಗೊಳಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಈ ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಕೆಲ ಆಸ್ತಿಗಳನ್ನು ಖರೀದಿಸಲು ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಸರ್ಕಾರ ಅನುಮತಿ ಕೊಟ್ಟಿದೆ ಎಂದು ನೀತಿ ಆಯೋಗ್ ವೈಸ್ ಛೇರ್ಮನ್ ಅವರು ಸರ್ಕಾರ ಕೈಗೊಂಡ ಕ್ರಮಗಳನ್ನು ವಿವರಿಸಿದ್ದಾರೆ.

ರಾಜೀವ್ ಕುಮಾರ್ ಉಪಾಧ್ಯಕ್ಷರಾಗಿರುವ ನೀತಿ ಆಯೋಗ್ ಸಂಸ್ಥೆಯು ಸರ್ಕಾರಕ್ಕೆ ನೀತಿ ರೂಪಿಸಲು ಸಲಹೆ ನೀಡುವ ಸಂಸ್ಥೆಯಾಗಿದೆ. ನ್ಯಾಷನಲ್ ಇನ್ಸ್ಟಿಟ್ಯೂಷನ್ ಫಾರ್ ಟ್ರಾನ್ಸ್ಫಾರ್ಮಿಂಗ್ ಇಂಡಿಯಾ, ಅಂದರೆ ಭಾರತ ಪರಿವರ್ತನೆಯ ರಾಷ್ಟ್ರೀಯ ಸಂಸ್ಥೆ ಎಂದು ಕರೆಯಲಾಗುವ ನೀತಿ ಆಯೋಗ್ ಅನ್ನು ನೆಹರೂ ಕಾಲದಿಂದ ಅಸ್ತಿತ್ವದಲ್ಲಿದ್ದ ಯೋಜನಾ ಆಯೋಗಕ್ಕೆ ಬದಲಿಯಾಗಿ ಮೋದಿ ಸರ್ಕಾರ ತಂದಿದೆ.

Leave a Reply

Your email address will not be published. Required fields are marked *

error: Content is protected !!