NIA ಗೆ ಸಿಗದ ಮಾಹಿತಿ ಮಾಧ್ಯಮಗಳಿಗೆ ಹೇಗೆ ಸಿಕ್ಕಿತು?- ಶಾಫಿ ಸಅದಿ

ಚಿಕ್ಕಮಗಳೂರು : ಅಮಾಯಕ ರವೂಫ್ ರವರ ಹಿನ್ನಲೆ ತಿಳಿಯದೆ ಮಾಧ್ಯಮಗಳು ಪೂರ್ವಾಗ್ರಹ ಪೀಡಿತರಾಗಿ ವರದಿ ಬಿತ್ತರಿಸಿರುವುದು ಖಂಡನೀಯವಾಗಿದೆ. NIA ಸಂಸ್ಥೆಯು ಯಾವುದೇ ತನಿಖೆ ನಡೆಸದೆ ಮಾಧ್ಯಮಗಳು ಅವರನ್ನು ಅದ್ಹೇಗೆ ಭಯೋತ್ಪಾದಕ ಅಂತ ಚಿತ್ರೀಕರಿಸಿತು. ಮಾಧ್ಯಮಗಳಿಗೆ ಮಾಹಿತಿ ನೀಡಿದವರು ಯಾರು ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಮೌಲಾನ ಶಾಫಿ ಸ ಅದಿಯವರು ಪ್ರಶ್ನಿಸಿದರು.

ಚಿಕ್ಕಮಗಳೂರು ಜಿಲ್ಲೆಯ ಮಾಗುಂಡಿಯ ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ಬಂದಿದ್ದ ಅವರು ಮಾಧ್ಯಮಗಳು ಸಮಾಜದ ಬೆಳಕಾಗಿ ಗುರುತಿಸಿಕೊಳ್ಳಬೇಕಾದಂತದ್ದು, ಮಾಧ್ಯಮ ಧರ್ಮಕ್ಕೆ ದ್ರೋಹ ಬಗೆಯುವ ಇಂತಹ ಘಟನೆಗಳು ಮತ್ತೆ ಮತ್ತೆ ಮರುಕಳಿಸುತ್ತಿರುವಾಗ ಮಾಧ್ಯಮ ಭಯೋತ್ಪಾದನೆ ಎಂದು ಕರೆದರೆ ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ ಅವರು ” ಲವ್ ಜಿಹಾದ್” ಎನ್ನುವುದು ಕೂಡ ಮಾಧ್ಯಮಗಳ ಸೃಷ್ಟಿಯಾಗಿತ್ತು.

ಲವ್ ಹಾಗೂ ಜಿಹಾದ್ ಇವೆರಡೂ ಬೇರೆ ಬೇರೆಯಾಗಿದೆ, ಇಸ್ಲಾಂ ಪ್ರೀತಿಯನ್ನು ಕಲಿಸಿಕೊಡುತ್ತದೆ ಆದರೆ ಮಾಧ್ಯಮಗಳು ಬಿತ್ತರಿಸುತ್ತಿರುವಂತಹ ಲವ್ ಜಿಹಾದ್ ಬೇರೆಯಾಗಿದೆ. ಇಸ್ಲಾಂ ಕೂಡ ಅದನ್ನು ಅನುಮತಿಸುವುದಿಲ್ಲ. ಲವ್ ಅನ್ನುವ ಪದಕ್ಕೆ ಶ್ರೇಷ್ಠವಾದ ಜಿಹಾದ್ ಅನ್ನುವುದನ್ನು ಸೇರಿಸಿ ಸಮಾಜದ ಸ್ವಾಸ್ಥ್ಯವನ್ನು ಕೆಡಿಸಲು ಪರಿಶ್ರಮಿಸಿದ ಮಾಧ್ಯಮಗಳ ಷಡ್ಯಂತ್ರಗಳಾಗಿವೆ ಇವೆಲ್ಲವೂ.

ರವೂಫ್ ರವರ ಹಿನ್ನಲೆಗಳನ್ನು ಹತ್ತಿರದಿಂದ ಬಲ್ಲವರಾಗಿರುವ ಕಾರಣಗಳಿಂದ ಇದು ಗೊತ್ತಾಯಿತು. ದೇಶದಲ್ಲಿ ನಿರಂತರವಾಗಿ ಭಯೋತ್ಪಾದನೆಯ ಹೆಸರಿನಲ್ಲಿ ಬಂಧಿಸಲ್ಪಟ್ಟ ಯುವಕರೂ ಇದೇ ರೀತಿಯ ಷಡ್ಯಂತ್ರಗಳಿಗೆ ಬಲಿಪಶು ಆಗಿರಬಹುದೆನ್ನುವ ಸಂಶಯ ಕಾಡುತ್ತಿದೆ ಎಂದು ಹೇಳಿದರು.

ರವೂಫ್ ರವರ ಕುರಿತು ಆಧಾರ ರಹಿತ ಆರೋಪಗಳನ್ನು ಹೊರಿಸಿ ವರದಿ ಬಿತ್ತರಿಸಿದ ಮಾಧ್ಯಮಗಳು ಕರ್ನಾಟಕ ಜನತೆಯ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ ಶಾಫಿ ಸಅದಿ ಯವರು, ಅಮಾಯಕರ ವಿರುದ್ಧ ನಡೆಯುವ ಷಡ್ಯಂತ್ರಗಳು ಕೊನೆಯಾಗಬೇಕೆಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!