janadhvani

Kannada Online News Paper

ಭಾರತ ದೇಶದ ಸೌಹಾರ್ದತೆಯನ್ನು ಮರಳಿ ಪಡೆಯೋಣ

✍ಜಹಫರ್ ಸಾಧಿಕ್ ಕಟ್ಟದಪಡ್ಪು

_ಭಾರತೀಯ ಪ್ರಜೆಗಳಿಗೆ ಸ್ವಾತಂತ್ರ್ಯ ದಿನಾಚರಣೆಯ ದಿನ ಎಲ್ಲಿಲ್ಲದ ಆನಂದ. ಕಾರಣ ಅಂದು ಭಾರತ ದೇಶ ಸ್ವತಂತ್ರ ರಾಷ್ಟ್ರವಾಗಿ ರೂಪುಗೊಂಡ ದಿನ. ದೇಶದ ಪ್ರತೀ ಶಾಲಾ ಕಾಲೇಜು, ಸರ್ಕಾರಿ ಕಛೇರಿಗಳಲ್ಲಿ ಹಾಗೂ ಇನ್ನಿತರ ಕಡೆಗಳಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಭಾನೆತ್ತರಕ್ಕೆ ಹಾರಿಸಿ ವಿಜೃಂಭಣೆಯಿಂದ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಾರೆ. ದೇಶದ ಪರವಾಗಿ ಘೋಷಣೆಗಳನ್ನು ಕೂಗಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿ ದೇಶ ಪ್ರೇಮವನ್ನು ವ್ಯಕ್ತ ಪಡಿಸುತ್ತಾರೆ._

_150 ವರ್ಷಗಳ ಕಾಲ ಭಾರತವನ್ನು ಕಬಳಿಸಿ ಆಳ್ವಿಕೆ ನಡೆಸಿದ ಆಂಗ್ಲರ ವಿರುದ್ಧ ಭಾರತೀಯ ಧೀರರು ಹೋರಾಟ ನಡೆಸಿ ನಮಗೆ ಸ್ವಾತಂತ್ರ್ಯವನ್ನು ಒದಗಿಸಿಕೊಟ್ಟರು. ಅದರ ಸವಿ ನೆನಪಿಗಾಗಿ ವರ್ಷಂಪ್ರತಿ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನವಾಗಿ ಆಚರಿಸಿಕೊಂಡು ಬರುತ್ತಿದ್ದೇವೆ. ಭಾರತಕ್ಕೆ ಸ್ವತಂತ್ರ ದೊರೆಯುವ ಮೊದಲು ಮೊಗಲರು, ಪೋರ್ಚುಗೀಸರು, ಆದಿಲ್ ಶಾಹ್, ಕುತುಬ್ ಶಾಹ್ ಮತ್ತು ಆಂಗ್ಲರಂತಹ ಅನೇಕರು ಭಾರತವನ್ನು ಆಳ್ವಿಕೆ ನಡೆಸಿದ್ದರು._

_ಭಾರತ ದೇಶಕ್ಕಾಗಿ ಹೋರಾಡಿದ ಗಾಂಧೀಜಿ, ಭಗತ್ ಸಿಂಗ್, ಟಿಪ್ಪು ಸುಲ್ತಾನ್, ಲಾಲ್ ಬಹದ್ದೂರ್ ಶಾಸ್ತ್ರಿ, ಸಾವರ್ಕರ್, ಬಾಲ ಗಂಗಾಧರ ತಿಲಕ್ ಮುಂತಾದ ನಾಯಕರುಗಳ ದೇಶ ಪ್ರೇಮವನ್ನು ನಾವು ಇಂದು ಸ್ಮರಿಸಬೇಕಾಗಿದೆ. ಇವರೆಲ್ಲರ ನಿಸ್ವಾರ್ಥ ದೇಶಸೇವೆ ಹಾಗೂ ದೇಶಪ್ರೇಮದಿಂದ ಭಾರತ ಇಂದು ಸ್ವತಂತ್ರ ರಾಷ್ಟ್ರವಾಗಿದೆ. ಅದೇ ರೀತಿ 1947 ರಿಂದ ಇಂದಿನವರೆಗೆ ದೇಶವನ್ನು ಭದ್ರವಾಗಿ ಕಾಪಾಡುತ್ತಿರುವ ಭಾರತೀಯ ಸೈನಿಕರ ಸೇವೆ ಶ್ಲಾಘನೀಯ. ನುಸುಳುಕೋರರು ಭಾರತದ ವಿರುದ್ಧ ದಂಡೆತ್ತಿ ಬಂದಾಗ ಧೀರತೆಯಿಂದ ಹೋರಾಡಿ ದೇಶದ ರಕ್ಷಣೆ ಗೆಯ್ಯುತ್ತಿರುವ ಭಾರತೀಯ ಸೈನಿಕರ ದೇಶಪ್ರೇಮ ಅಪಾರ._

_ಭಾರತ ಸ್ವತಂತ್ರ ದೇಶ ಎಂಬ ಹೆಗ್ಗಳಿಕೆ ಹೊಂದಿದ್ದರೂ ಭಾರತದಲ್ಲಿ ಸಾಮಾನ್ಯ ಪ್ರಜೆಗಳಿಗೆ ಸಾಕಷ್ಟು ಮಟ್ಟದಲ್ಲಿ ಸ್ವಾತಂತ್ರ್ಯ ಇಲ್ಲ. ಭಾರತದಲ್ಲಿ ಇಂದು ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹಲವು ತ್ಯಾಗ, ಸಂಕಷ್ಟಗಳನ್ನು ಅನುಭವಿಸಿದ ದೇಶ ಪ್ರೇಮಿಗಳನ್ನು ದೇಶ ದ್ರೋಹಿಯನ್ನಾಗಿಸುವ ಹುನ್ನಾರ ನಡೆಯುತ್ತಿದೆ. ಮಹಾತ್ಮ ಗಾಂಧೀಜಿಯವರ ಕನಸುಗಳನ್ನು ಹೊಸಕಿ ಹಾಕಿ, ನಿರಪರಾಧಿಗಳಿಗೆ ಶಿಕ್ಷೆ ನೀಡಿ ಅಪರಾಧಿಗಳು ಅಟ್ಟಹಾಸದಿಂದ ಮೆರೆಯುತ್ತಿದ್ದಾರೆ. ರಾಜಕೀಯ ಪಕ್ಷಗಳು ಸಾಮಾಜಿಕ ನ್ಯಾಯ, ಸಮಾನತೆಯನ್ನು ಕಡೆಗಣಿಸಿ ದೇಶದ ಘನತೆಯನ್ನು ಹಾಳುಗೆಡವುತ್ತಿದ್ದಾರೆ. ದೇಶದಲ್ಲಿ ಸೌಹಾರ್ದತೆಯು ನಾಶವಾಗಿ ಕೋಮುವಾದಗಳು ಬೆಳೆಯುತ್ತಿದೆ. ಭಾರತದ ಸ್ವಾತಂತ್ರ್ಯಕ್ಕಾಗಿ ಜಾತಿ ಬೇಧ ಮರೆತು ಹೋರಾಡಿದ ಪ್ರತಿ ಹೋರಾಟಗಾರರ ಸೌಹಾರ್ದತೆಯನ್ನು ಇಂದು ನಾವು ನೆಲೆಸಬೇಕಾಗಿದೆ._

_ರಾಷ್ಟ್ರೀಯ ಹಬ್ಬಗಳು ಬಂದಾಗ ಉದ್ದುದ್ದ ಭಾಷಣ ಬೀರಿ ದೇಶಪ್ರೇಮ ತೋರ್ಪಡಿಸುವ ನಮ್ಮನ್ನಾಳುವ ನಾಯಕರು ಆತ್ಮವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯತೆಯಿದೆ. ಜನ ಸಾಮಾನ್ಯರ ಬಡವರ ಸೇವೆ ಮಾಡುತ್ತೇವೆಂದು ರಾಜಕೀಯ ರಂಗ ಪ್ರವೇಶ ಮಾಡಿ, ಜನರ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದೆ ತಮ್ಮ ಸ್ವಂತ ಕಾರ್ಯಗಳ ಬಗ್ಗೆ ಚಿಂತಿಸುವ ಮೂಲಕ ರಾಜಕೀಯ ವಲಯವನ್ನು ಭ್ರಷ್ಟಾಚಾರಿಗಳ ತಾಣವನ್ನಾಗಿ ಪರಿವರ್ತಿಸಿ ರಾಜಕೀಯ ರಂಗದ ಬಗ್ಗೆ ಜನಸಾಮಾನ್ಯರು ಅಸಹ್ಯ ಪಡುವಂತಹ ವಾತಾವರಣವನ್ನು ರಾಜಕಾರಣಿಗಳು ನಿರ್ಮಿಸಿದ್ದಾರೆ._

_ಭಾರತ ಸಂಪೂರ್ಣವಾಗಿ ಸ್ವತಂತ್ರವಾಗಬೇಕಾಗಿದೆ. ಭಾರತೀಯ ಪ್ರಜೆಗಳು ಜಾತಿ ಧರ್ಮ ಮರೆತು ಒಂದೇ ತಾಯಿಯ ಮಕ್ಕಳೆಂದು ಭಾವಿಸಿ ಸೌಹಾರ್ದತೆಯಿಂದ ಜೀವಿಸಬೇಕಾಗಿದೆ. ತಮ್ಮಲ್ಲಿರುವ ಕೋಮು ದ್ವೇಷ ಭಾವನೆಯನ್ನು ಮನಸ್ಸಿನಿಂದ ತೊಲಗಿಸಿ, ತಮ್ಮ ತಮ್ಮಲ್ಲೇ ಗಲಭೆ ಸೃಷ್ಟಿಸದೆ ಭಾರತದ ಶತ್ರುಗಳ ವಿರುದ್ಧ ಹೋರಾಡಬೇಕಾಗಿದೆ. ಪ್ರತಿಯೊಬ್ಬರು ಸ್ವತಂತ್ರವಾಗಿ ಜೀವಿಸಿ, ಇತರರನ್ನು ಅವರ ಇಚ್ಛೆಯಂತೆ ಸ್ವತಂತ್ರವಾಗಿ ಬದುಕಲು ಬಿಟ್ಟಾಗ ಭಾರತವು ಸಂಪೂರ್ಣವಾಗಿ ಸ್ವತಂತ್ರವಾಗುತ್ತದೆ. ಭಾರತವನ್ನು ಸಂಪೂರ್ಣವಾಗಿ ಸ್ವತಂತ್ರ ಗೊಳಿಸುತ್ತೇವೆಂದು ಭಾರತೀಯ ಪ್ರಜೆಗಳು ಇಂದಿನಿಂದಲೇ ದೃಢ ಸಂಕಲ್ಪ ಮಾಡಬೇಕಾಗಿದೆ._

ನನ್ನ ಎಲ್ಲಾ ಪ್ರೀತಿಯ ಭಾರತೀಯ ಸಹೋದರ- ಸಹೋದರಿಯರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

✍ಜಹಫರ್ ಸಾಧಿಕ್ ಕಟ್ಟದಪಡ್ಪು

error: Content is protected !! Not allowed copy content from janadhvani.com