ಕಾಶ್ಮೀರ ಶಾಂತವಾಗಿಲ್ಲ: ಬಿಬಿಸಿ ವರದಿ ಬಳಿಕ ನಿಜಸ್ಥಿತಿಯನ್ನು ಬಹಿರಂಗ ಪಡಿಸಿದ ಗೃಹ ಇಲಾಖೆ

ನವದೆಹಲಿ: ವಿಧಿ 370 ರದ್ದತಿ ಬಳಿಕ ಕಾಶ್ಮೀರದಲ್ಲಿ ಎಲ್ಲವೂ ಸಾಮಾನ್ಯವಾಗಿಲ್ಲ. ಕಾಶ್ಮೀರ ಶಾಂತವಾಗಿಲ್ಲ ಎಂದು ಹೇಳುವ ಮೂಲಕ ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಇಲಾಖೆ ಕೊನೆಗೂ ತನ್ನ ಸತ್ಯ ಸಂಗತಿಯನ್ನು ಹೊರ ಹಾಕಿದೆ.

ಈ ಹಿಂದೆ ಗೃಹ ಇಲಾಖೆಯ ಅಧಿಕಾರಿಗಳು ಕಾಶ್ಮೀರದಲ್ಲಿ ಯಾವುದೇ ರೀತಿಯ ಸಮಸ್ಯೆ ಇಲ್ಲ. ಎಲ್ಲವೂ ಶಾಂತವಾಗಿದೆ ಎಂದು ಹೇಳಿದ್ದರು. ಆದರೆ ಸೌರಾದಲ್ಲಿ ನಡೆದಿದ್ದ ಪ್ರತಿಭಟನೆ ಮತ್ತು ಕಲ್ಲು ತೂರಾಟ ಪ್ರಕರಣವನ್ನು ಬಿಬಿಸಿ ಪತ್ರಿಕೆ ವರದಿ ಮಾಡಿದ ಬೆನ್ನಲ್ಲೇ ಕೇಂದ್ರ ಗೃಹ ಇಲಾಖೆ ಈ ಕುರಿತಂತೆ ಸ್ಪಷ್ಟನೆ ನೀಡಿದೆ. ಆಗಸ್ಟ್ 8ರಂದು ಸೌರಾದಲ್ಲಿ ನಡೆದಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ, ಕಲ್ಲು ತೂರಾಟವಾಗಿತ್ತು ಎಂದು ಕೇಂದ್ರ ಗೃಹ ಇಲಾಖೆ ಒಪ್ಪಿಕೊಂಡಿದೆ.

ಅಲ್ಲದೆ ಈ ಘಟನೆ ಬಳಿಕ ಕಾಶ್ಮೀರದಲ್ಲಿ ಪ್ರತಿಭಟನೆಗಳ ಸಂಖ್ಯೆ ಹೆಚ್ಚಾಗಿದ್ದು, ಬಕ್ರೀದ್ ಹಬ್ಬದ ನಿಮಿತ್ತ ಪ್ರಾರ್ಥನೆಗಾಗಿ ಬಂದಿದ್ದ ನೂರಾರು ಮಂದಿ ಸಮಯ ಸಿಕ್ಕಾಗಲೆಲ್ಲ ಪ್ರತಿಭಟನೆ ನಡೆಸಿದ್ದಾರೆ. ಈ ಪೈಕಿ ಕಲ್ಲು ತೂರಾಟದ ಪ್ರಕರಣಗಳೂ ಕೂಡ ಅಲ್ಲಲ್ಲಿ ಕೇಳಿ ಬಂದಿದೆ. ಅಂತೆಯೇ ಸೇನಾಪಡೆಗಳ ಮೇಲೂ ಅಪ್ರಚೋದಿತ ಕಲ್ಲು ತೂರಾಟದಾಳಿಯಾಗಿದೆ ಎಂದು ಗೃಹ ಇಲಾಖೆ ಹೇಳಿದೆ.

ಈ ಕುರಿತಂತೆ ಗೃಹ ಇಲಾಖೆ ಟ್ವೀಟ್ ಮಾಡಿದ್ದು, ಕಾಶ್ಮೀರದ ಎಲ್ಲ ಪರಿಸ್ಥಿತಿಯನ್ನೂ ನಿಭಾಯಿಸಲು ಭದ್ರತಾ ಪಡೆಗಳು ಸರ್ವಸನ್ನದ್ಧವಾಗಿದೆ. ಈ ಕುರಿತಂತೆ ಕೇಂದ್ರ ಸರ್ಕಾರ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದೆ.

ಬಿಬಿಸಿ ವರದಿ: ಆಗಸ್ಟ್ 10 ರಂದು, ಜಮ್ಮು ಮತ್ತು ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿದ ಕೇಂದ್ರ ಸರ್ಕಾರದ ವಿರುದ್ಧ ಸಾವಿರಾರು ಪ್ರತಿಭಟನಾಕಾರರು ಶ್ರೀನಗರದ ಸೌರಾದಲ್ಲಿ ಬೀದಿಗಿಳಿದಿದ್ದಾರೆ ಎಂದು ಬಿಬಿಸಿ ನ್ಯೂಸ್ ವರದಿ ಮಾಡಿತ್ತು. “ಪೊಲೀಸರು ಗುಂಡು ಹಾರಿಸುವುದು ಮತ್ತು ಅಶ್ರುವಾಯು ಬಳಸಿ ಗುಂಪನ್ನು ಚದುರಿಸುತ್ತಿರುವುದನ್ನು ತೋರಿಸಿತ್ತು, ಆದರೆ ಪ್ರತಿಭಟನೆ ಎಂದಿಗೂ ನಡೆದಿಲ್ಲ ಎಂದು ಭಾರತ ಸರ್ಕಾರ ತಳ್ಳಿ ಹಾಕಿತ್ತು ”

ಅಲ್ ಜಝೇರ ವರದಿ: ಕೇಂದ್ರ ಸರಕಾರ ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿದ ವಿರುದ್ಧ ಭಾರಿ ಆಂದೋಲನ ನಡೆಯುತ್ತಿದೆ ಎಂದು ಅಲ್ ಜಝೇರ ವರದಿ ಮಾಡಿತ್ತು. ಪ್ರತಿಭಟನಾಕಾರರ ವಿರುದ್ಧ ಭಾರತೀಯ ಸೇನೆಯು ಗುಂಡು, ಅಶ್ರುವಾಯು ಮತ್ತು ರಬ್ಬರ್ ಲೇಪಿತ ಉಕ್ಕಿನ ಗುಂಡುಗಳನ್ನು ಹಾರಿಸಲಾಗಿದೆ ಎಂದು ಅದು ಹೇಳಿತ್ತು.

ರಾಯಿಟರ್ಸ್ ಪ್ರಕಾರ, 370 ನೇ ವಿಧಿಯನ್ನು ರದ್ದು ಪಡಿಸಿದ ವಿರುದ್ಧ ಆಗಸ್ಟ್ 9 ರ ಪ್ರತಿಭಟನೆಯಲ್ಲಿ ಕನಿಷ್ಠ 10,000 ಮಂದಿ ಭಾಗವಹಿಸಿದ್ದರು. ಪೊಲೀಸ್ ಮೂಲ, ಅಧಿಕೃತ ಮೂಲ ಮತ್ತು ಪ್ರತ್ಯಕ್ಷದರ್ಶಿಗಳಿಂದ ಅದು ಉಲ್ಲೇಖ ಮಾಡಿತ್ತು.

ಈ ಎಲ್ಲಾ ಸುದ್ದಿಗಳನ್ನು “ಕಟ್ಟುಕಥೆ ಮತ್ತು ಸುಳ್ಳು ಸುದ್ದಿ” ಎಂದು ಗೃಹ ಸಚಿವಾಲಯ ಹೇಳಿಕೆ ನೀಡಿ, 20 ಕ್ಕಿಂತ ಹೆಚ್ಚು ಜನರು ಭಾಗವಹಿಸದ “ಕೆಲವೊಂದು ಸಣ್ಣ ಪ್ರತಿಭಟನೆಗಳು” ಮಾತ್ರ ನಡೆದಿವೆ ಎಂದು ಹೇಳಿತ್ತು. ಇದೀಗ ಕಾಶ್ಮೀರ ಶಾಂತವಾಗಿಲ್ಲ ಎಂದು ಹೇಳುವ ಮೂಲಕ ಸತ್ಯವನ್ನು ಬಹಿರಂಗ ಪಡಿಸಿದೆ.

Leave a Reply

Your email address will not be published. Required fields are marked *

error: Content is protected !!