ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು: ರಾಷ್ಟ್ರಪತಿ ಆದೇಶ ಅಸಾಂವಿಧಾನಿಕ- ಸುಪ್ರೀಂ ಮೆಟ್ಟಿಲೇರಿದ ಎನ್‌ಸಿ

ಹೊಸದಿಲ್ಲಿ, ಆ.10: ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಅಧ್ಯಕ್ಷೀಯ ಆದೇಶವನ್ನು ಪ್ರಶ್ನಿಸಿ ನ್ಯಾಷನಲ್ ಕಾನ್ಫರೆನ್ಸ್(ಎನ್‌ಸಿ) ಶನಿವಾರ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದೆ. ರಾಜ್ಯದ ಸಾಂವಿಧಾನಿಕ ಸ್ಥಾನಮಾನದಲ್ಲಿ ಮಾಡಿರುವ ಈ ಬದಲಾವಣೆಗಳು ಜಮ್ಮು-ಕಾಶ್ಮೀರದ ಪ್ರಜೆಗಳ ಅನುಮತಿಯಿಲ್ಲದೆ ಅವರ ಹಕ್ಕುಗಳನ್ನು ಕಿತ್ತುಕೊಂಡಿವೆ ಎಂದು ಅದು ವಾದಿಸಿದೆ.

ಎನ್‌ಸಿ ಸಂಸದರಾದ ಮುಹಮ್ಮದ್ ಅಕ್ಬರ್ ಲೋನ್ ಮತ್ತು ನ್ಯಾ(ನಿ).ಹಸನೈನ್ ಮಸೂದಿ ಅವರು ಸಲ್ಲಿಸಿರುವ ಮೇಲ್ಮನವಿಯಲ್ಲಿ ಸಂಸತ್ತಿನಲ್ಲಿ ಅಂಗೀಕಾರಗೊಂಡಿರುವ ಜಮ್ಮು-ಕಾಶ್ಮೀರ ಪುನರ್‌ರಚನೆ ಕಾಯ್ದೆ,2019 ಮತ್ತು ನಂತರ ರಾಷ್ಟ್ರಪತಿಗಳು ಹೊರಡಿಸಿರುವ ಆದೇಶ ಅಸಾಂವಿಧಾನಿಕವಾಗಿವೆ ಎಂದು ವಾದಿಸಲಾಗಿದ್ದು,ಅದನ್ನು ಅನೂರ್ಜಿತಗೊಳಿಸುವಂತೆ ಕೋರಲಾಗಿದೆ.

ಲೋನ್ ಜಮ್ಮು-ಕಾಶ್ಮೀರ ವಿಧಾನಸಭೆಯ ಮಾಜಿ ಸ್ಪೀಕರ್ ಆಗಿದ್ದರೆ,ಜಮ್ಮು-ಕಾಶ್ಮೀರ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾಗಿರುವ ಮಸೂದಿ,ವಿಧಿ 370 ಸಂವಿಧಾನದ ಕಾಯಂ ಅಂಶವಾಗಿದೆ ಎಂದು 2015ರಲ್ಲಿ ತೀರ್ಪು ನೀಡಿದ್ದರು.ರಾಷ್ಟ್ರಪತಿಗಳ ಆದೇಶವು ಸಂವಿಧಾನದ ಎಲ್ಲ ನಿಯಮಗಳನ್ನು ಜಮ್ಮು-ಕಾಶ್ಮೀರಕ್ಕೆ ಅನ್ವಯಿಸುವ ಮಾರ್ಗವನ್ನು ಸುಗಮಗೊಳಿಸಿದ್ದು,ವಿಧಿ 35ಎ ಮತ್ತು 370ನ್ನು ರದ್ದುಗೊಳಿಸಿದೆ.

ಕಾಯ್ದೆ ಮತ್ತು ರಾಷ್ಟ್ರಪತಿಗಳ ಆದೇಶ ಕಾನೂನು ಬಾಹಿರವಾಗಿವೆ ಹಾಗೂ ಸಂವಿಧಾನದ 14 ಮತ್ತು 21 ವಿಧಿಗಳಡಿ ಜಮ್ಮು-ಕಾಶ್ಮೀರದ ಪ್ರಜೆಗಳಿಗೆ ಖಾತರಿ ಪಡಿಸಲಾಗಿದ್ದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿವೆ ಎಂದು ಅರ್ಜಿದಾರರು ಹೇಳಿದ್ದಾರೆ. ಮೊದಲ ಅಧ್ಯಕ್ಷೀಯ ಆದೇಶವು ಸಂವಿಧಾನದ ಇತರ ನಿಯಮಗಳನ್ನು ಜಮ್ಮು-ಕಾಶ್ಮೀರಕ್ಕೆ ಅನ್ವಯಿಸಲು ಬಳಕೆಯಾಗಬೇಕಿದ್ದ ವಿಧಿ 370(1)(ಡಿ) ಅನ್ನು ಖುದ್ದು ವಿಧಿ 370ನ್ನು ಮತ್ತು ತನ್ಮೂಲಕ ಜಮ್ಮು-ಕಾಶ್ಮೀರ ಮತ್ತು ಭಾರತದ ನಡುವಿನ ಒಕ್ಕೂಟ ಸಂಬಂಧದ ಷರತ್ತುಗಳನ್ನು ಬದಲಿಸಲು ಬಳಸಿಕೊಂಡಿದೆ ಎಂದು ಮೇಲ್ಮನವಿಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!