ಕಾಶ್ಮೀರದಲ್ಲಿ ಮುಂದುವರಿದ ಪ್ರಕ್ಷುಬ್ಧತೆ: ನಿಖರ ವರದಿಗಾರಿಕೆಯನ್ನು ತಡೆಯಲು ಸಂವಹನ ಜಾಲ ಸ್ಥಗಿತ

ಹೊಸದಿಲ್ಲಿ, ಆ.10: 370ನೇ ಪರಿಚ್ಛೇದವನ್ನು ರದ್ದುಗೊಳಿಸಿದ ಬಳಿಕ ಕೇಂದ್ರ ಸರಕಾರವು ಜಮ್ಮು-ಕಾಶ್ಮೀರದಲ್ಲಿ ಸಂವಹನ ಜಾಲವನ್ನು ಸ್ಥಗಿತಗೊಳಿಸಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ‘ದಿ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ’, ಇದು ಅತ್ಯಂತ ಒರಟು ಕ್ರಮ ಎಂದು ಬಣ್ಣಿಸಿದೆ.

ಕಾಶ್ಮೀರ ಕಣಿವೆಯೊಂದಿಗಿನ ಸಂವಹನ ಸಂಪರ್ಕಗಳ ನಿರಂತರ ಕಡಿತ ಮತ್ತು ಇದರಿಂದಾಗಿ ಮಾಧ್ಯಮಗಳ ಸ್ವಾತಂತ್ರ್ಯವನ್ನು ಹಾಗೂ ಪ್ರಚಲಿತ ವಿದ್ಯಮಾನಗಳ ಕುರಿತು ನ್ಯಾಯಯುತ ಮತ್ತು ನಿಖರ ವರದಿಗಾರಿಕೆಯ ಅವುಗಳ ಸಾಮರ್ಥ್ಯವನ್ನು ಮೊಟಕುಗೊಳಿಸಿರುವುದು ತೀವ್ರ ಕಳವಳವನ್ನುಂಟು ಮಾಡಿದೆ ಎಂದು ಶನಿವಾರ ಹೇಳಿಕೆಯಲ್ಲಿ ತಿಳಿಸಿರುವ ಗಿಲ್ಡ್,ಕಾಶ್ಮೀರಕ್ಕೆ ಭೇಟಿ ನೀಡುವ ಹೊರಗಿನ ಪತ್ರಕರ್ತರು ಕಣಿವೆಯಿಂದ ಹೊರಬಿದ್ದ ನಂತರ ತನ್ನ ವರದಿಗಳನ್ನು ರವಾನಿಸಬಹುದಾಗಿದೆ.

ಆದರೆ ವಾಸ್ತವ ಸ್ಥಿತಿಗೆ ಮೊದಲ ಕಣ್ಣು ಮತ್ತು ಕಿವಿಗಳಾಗಿರುವ ಸ್ಥಳೀಯ ಮಾಧ್ಯಮಗಳ ಪಾಲಿಗೆ ಸಂವಹನ ಜಾಲ ಕಡಿತವು ಕರಾಳ ಕ್ರಮವಾಗಿದೆ. ಅಂತರ್ಜಾಲವಿಲ್ಲದೆ ಸುದ್ದಿಗಳ ಸಂಸ್ಕರಣೆ ಮತ್ತು ಪ್ರಕಟಣೆ ಅಸಾಧ್ಯ ಎನ್ನುವುದು ಸರಕಾರಕ್ಕೆ ಚೆನ್ನಾಗಿ ಗೊತ್ತಿದೆ. ಜಮ್ಮು-ಕಾಶ್ಮೀರ ಸೇರಿದಂತೆ ಎಲ್ಲೆಡೆ ಪ್ರಜಾಪ್ರಭುತ್ವದ ಪ್ರಮುಖ ಅಂಗವಾಗಿರುವ ಪತ್ರಿಕೋದ್ಯಮ ಮುಕ್ತವಾಗಿ ಕಾರ್ಯ ನಿರ್ವಹಿಸಲು ಅವಕಾಶ ಒದಗಿಸುವುದು ಸರಕಾರದ ಕರ್ತವ್ಯವಾಗಿದೆ ಎಂದು ಹೇಳಿದೆ.

ಜಮ್ಮು-ಕಾಶ್ಮೀರದಲ್ಲಿಯ ಹಾಲಿ ಸ್ಥಿತಿಯಲ್ಲಿ ಸುದ್ದಿಗಳನ್ನು ತಲುಪಿಸುವಲ್ಲಿ ಮತ್ತು ಸರಕಾರಿ ಮತ್ತು ಭದ್ರತಾ ಸಂಸ್ಥೆಗಳ ಮೇಲೆ ನಿಗಾಯಿರಿಸುವ ಪ್ರಜಾಸತ್ತಾತ್ಮಕ ಕರ್ತವ್ಯದಲ್ಲಿ ಮುಕ್ತ ಮಾಧ್ಯಮಗಳ ಪಾತ್ರ ಬಹಳ ಮುಖ್ಯವಾಗಿದೆ ಎಂದಿರುವ ಗಿಲ್ಡ್,ಮಾಧ್ಯಮಗಳ ಸಂವಹನ ಸಂಪರ್ಕಗಳನ್ನು ಪುನರಾರಂಭಿಸಲು ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಸರಕಾರವನ್ನು ಆಗ್ರಹಿಸಿದೆ.

Leave a Reply

Your email address will not be published. Required fields are marked *

error: Content is protected !!