ಕಾಂಗ್ರೆಸ್ ಅಧ್ಯಕ್ಷ ಹುದ್ದೆ ಮತ್ತೆ ಸೋನಿಯಾ ಗಾಂಧಿ ಹೆಗಲಿಗೆ

ನವದೆಹಲಿ(ಆಗಸ್ಟ್.08): ರಾಹುಲ್ ಗಾಂಧಿ ರಾಜೀನಾಮೆಯಿಂದ ತೆರವಾಗಿದ್ದ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಮತ್ತೊಮ್ಮೆ ಸೋನಿಯಾ ಗಾಂಧಿಯವರನ್ನೇ ನೇಮಕಾತಿ ಮಾಡಲಾಗಿದೆ. ಈ ಮೂಲಕ ಸುಮಾರು ದಿನಗಳಿಂದ ಬಾಕಿ ಉಳಿದಿದ್ದ ಅಧ್ಯಕ್ಷರ ಆಯ್ಕೆ ಗೊಂದಲಕ್ಕೆ ಇದೀಗ ತೆರೆ ಎಳೆಯಲಾಗಿದೆ.

ಇತ್ತೀಚೆಗೆ ಜುಲೈ ತಿಂಗಳಿನಲ್ಲಿ ರಾಹುಲ್ ಗಾಂಧಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಈ ಹುದ್ದೆಗೆ ಹೊಸ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಸಾಲು ಸಾಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಸಲಾಗಿತ್ತು. ಸದ್ಯವೀಗ ಇಂದು ನಡೆದ ಕಾರ್ಯಾಕಾರಿ ಸಮಿತಿ ಸಭೆಯಲ್ಲಿ ಕೊನೆಗೂ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷರಾಗಿ ಮುಂದುವರೆಯಲು ರಾಹುಲ್ ಗಾಂಧಿ ಒಪ್ಪದ ಕಾರಣ, ಮತ್ತೊಮ್ಮೆ ಸೋನಿಯಾ ಗಾಂಧಿ ಹೆಗಲಿಗೆ ಎಐಸಿಸಿ ಅಧ್ಯಕ್ಷೆ ಹುದ್ದೆ ವಹಿಸಲಾಗಿದೆ.

ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿ ಎರಡು ತಿಂಗಳೇ ಕಳೆದಿದ್ದವು. ಆದರೂ, ಈವರೆಗೆ ಈ ಸ್ಥಾನಕ್ಕೆ ಮತ್ತೊಬ್ಬ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುವುದು ಸಾಧ್ಯವಾಗಿರಲಿಲ್ಲ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕರು ಮತ್ತೆ ರಾಹುಲ್ ಗಾಂಧಿಯವರೇ ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷರಾಗಲಿ ಎಂದು ಒತ್ತಾಯಿಸುತ್ತಿದ್ದರು.ಆದರೆ, ಕಾಂಗ್ರೆಸ್ ನಾಯಕರ ಸಲಹೆಯನ್ನು ರಾಹುಲ್ ಗಾಂಧಿ ಸ್ವೀಕರಿಸಲಿಲ್ಲ.

ಬದಲಿಗೆ ಗಾಂಧಿ ಕುಟುಂಬದ ನಾಯಕರನ್ನು ಈ ಹುದ್ದೆಗೆ ನೇಮಿಸುವಂತೆ ರಾಹುಲ್ ಹಿರಿಯರಿಗೆ ಸೂಚನೆ ನೀಡಿದ್ದರು. ಇಂದಿನ ಸಭೆಯಲ್ಲೂ ಅವರ ಹೆಸರೇ ಪ್ರಸ್ತಾಪವಾದ ಕಾರಣ ಈ ಮಜುಗರದಿಂದ ತಪ್ಪಿಸಿಕೊಳ್ಳಲು, ಸಭೆಯ ನಡುವೆಯೇ ಹೊರನಡೆದಿದ್ದಾರೆ ಎಂದು ಹೇಳಲಾಗಿತ್ತು.ಇದನ್ನೂ ಓದಿ: ಕಾಂಗ್ರೆಸ್ನಲ್ಲಿ ಗಾಂಧಿ ಕುಟುಂಬದ ಯುಗಾಂತ್ಯ; ಕಾರ್ಯಕಾರಿ ಸಮಿತಿ ಸಭೆಯ ಮಧ್ಯದಲ್ಲೇ ನಿರ್ಗಮಿಸಿದ ರಾಹುಲ್, ಸೋನಿಯಾ!ಈ ಮೂಲಕ ಕೊನೆಯ ಕ್ಷಣದಲ್ಲಿ ಮತ್ತೆ ರಾಹುಲ್ ಗಾಂಧಿಯವರೇ ಅಧ್ಯಕ್ಷ ಗಾದಿಗೆ ಏರಲಿದ್ದಾರೆ ಎಂಬ ಊಹಾಪೋಹಗಳಿಗೆ ತೆರೆಬಿದ್ದಿತ್ತು.

20 ವರ್ಷಗಳ ನಂತರ ಗಾಂಧಿ ಕುಟುಂಬಕ್ಕೆ ಸೇರದ ಹೊರಗಿನ ವ್ಯಕ್ತಿಯ ಕೈಗೆ ಭಾರತದ ಐತಿಹಾಸಿಕ ಪಕ್ಷದ ಚುಕ್ಕಾಣಿ ಸಿಗುವುದು ಎನ್ನಲಾಗಿತ್ತು. ಇದೀಗ ಮತ್ತೆ ಅಧ್ಯಕ್ಷಗಿರಿ ಹುದ್ದೆಯನ್ನು ಸೋನಿಯಾ ಗಾಂಧಿ ಹೆಗಲಿಗೆ ವಹಿಸಲಾಗಿದೆ. ಈ ಮೂಲಕ ಕಾಂಗ್ರೆಸ್ ಪಕ್ಷದಲ್ಲಿ ಗಾಂಧಿ ಕುಟುಂಬದ ಯುಗಾಂತ್ಯವಾಗಿದೆ ಎಂಬ ಊಹೆಗೆ ತೆರೆ ಎಳೆಯಲಾಗಿದೆ.ಕಾಂಗ್ರೆಸ್ ಪಕ್ಷದ ಮುಂದಿನ ಅಧ್ಯಕ್ಷರ ಆಯ್ಕೆ ಕಾರ್ಯಕಾರಿ ಸಮಿತಿಯ ಜವಾಬ್ದಾರಿಯಾಗಿತ್ತು. ಹೀಗಾಗಿಯೇ ಇಂದು ಶನಿವಾರ ತಡರಾತ್ರಿಯಾದರೂ ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಗಿಸಬೇಕಾಯ್ತು.

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಮುಕುಲ್ ವಾಸ್ನಿಕ್ ಹಾಗೂ ಮಲ್ಲಿಕಾರ್ಜುನ ಖರ್ಗೆ, ಸಚಿನ್ ಪೈಲಟ್, ಜ್ಯೋತಿರಾದಿತ್ಯ ಸಿಂದ್ಯ, ಹಾಗೂ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಹೆಸರುಗಳು ಅಧ್ಯಕ್ಷ ಹುದ್ದೆಗೆ ಕೇಳಿಬರುತ್ತಿತ್ತು. ಆದರೆ, ಹಿರಿಯ ನಾಯಕರ ಒತ್ತಡಕ್ಕೆ ಮಣಿದು ಸೋನಿಯಾ ಗಾಂಧಿಯವರೇ ಮತ್ತೊಮ್ಮೆ ಪಕ್ಷದ ಅಧ್ಯಕ್ಷರಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!