janadhvani

Kannada Online News Paper

ಯೋಗಿ ಸರ್ಕಾರಕ್ಕೆ ಸುಪ್ರೀಂ ಛೀಮಾರಿ: ಜಂಗಲ್ ರಾಜ್ಯವಾಗಿ ಪರಿವರ್ತನೆಗೊಂಡಿದೆ-ಪ್ರಿಯಾಂಕ ಗಾಂಧಿ

ನವದೆಹಲಿ, ಆ.2- ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು, ಜಂಗಲ್ ರಾಜ್ಯವಾಗಿ ಪರಿವರ್ತನೆಗೊಂಡಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಉನ್ನಾವೊದಲ್ಲಿ ಅಪ್ರಾಪ್ತೆಯ ಮೇಲಿನ ಅತ್ಯಾಚಾರ ಮತ್ತು ಕೊಲೆಯತ್ನದ ಪ್ರಕರಣದಲ್ಲಿ ಸಂತ್ರಸ್ಥೆಗೆ ಕಾನೂನಿನ ರಕ್ಷಣೆ ನೀಡುವ ಬದಲು ಆರೋಪಿಯನ್ನು ರಕ್ಷಣೆ ಮಾಡುವ ಕೆಲಸ ಮಾಡುತ್ತಿದೆ. ಈ ಸಂಬಂಧ ಅಲ್ಲಿನ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಛೀಮಾರಿ ಹಾಕಿರುವುದೇ ಇದಕ್ಕೊಂದು ನಿದರ್ಶನ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ಎಲ್ಲ ರಂಗಗಳಲ್ಲಿ ವಿಫಲವಾಗಿದೆ. ಆರೋಪಿಗಳಿಗೆ ರಕ್ಷಣೆ ನೀಡುವ ಕೆಲಸ ಮಾಡಲಾಗುತ್ತಿದೆ. ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಶಾಸಕನೇ ಭಾಗಿಯಾಗಿರುವುದು ದುರಂತವೇ ಸರಿ ಎಂದು ಹೇಳಿದ್ದಾರೆ.

ಅತ್ಯಾಚಾರದ ಆರೋಪ ಹೊತ್ತಿರುವ ಶಾಸಕ ಕುಲದೀಪ್ ಸಿಂಗ್‌ರವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದರೆ ಸಾಲದು, ಅವರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಟ್ವೀಟ್‌ನಲ್ಲಿ ಆಗ್ರಹಿಸಿದ್ದಾರೆ.

25 ಲಕ್ಷ ರೂ. ಪರಿಹಾರ:
ಅತ್ಯಾಚಾರ ಸಂತ್ರಸ್ಥೆ ಬಾಲಕಿಯ ಕುಟುಂಬಕ್ಕೆ 25 ಲಕ್ಷ ರೂ. ಮಧ್ಯಂತರ ಪರಿಹಾರ ನೀಡುವಂತೆ ಸುಪ್ರೀಂಕೋರ್ಟ್ ಆದೇಶಿಸದ ಬೆನ್ನಲ್ಲೇ ಇಂದು ಬೆಳಿಗ್ಗೆ ಸುಪ್ರೀಂಕೋರ್ಟ್‌ನಲ್ಲಿ ಪ್ರಮಾಣಪತ್ರ ಸಲ್ಲಿಸಿರುವ ಉತ್ತರ ಪ್ರದೇಶ ಸರ್ಕಾರದ ವಕೀಲರು ನ್ಯಾಯಲಯದ ಆದೇಶದ ಅನ್ವಯ ಬೆಳಿಗ್ಗೆಯೇ ಪರಿಹಾರ ನೀಡಲಾಗಿದೆ ಎಂದು ತಿಳಿಸಿದ್ದಾರೆ.
2017 ರಲ್ಲಿ ಉನ್ನಾವೊದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಶಾಸಕ ಕುಲದೀಪ್ ಸಿಂಗ್ ಸೇರಿದಂತೆ ಹಲವರು ಸಾಮೂಹಿಕ ಅತ್ಯಾಚಾರ ನಡೆಸಿದ್ದರು.
ಈ ಸಂಬಂಧ ಸಂತ್ರಸ್ಥೆ ನೀಡಿದ್ದ ದೂರಿನ ಅನ್ವಯ ಶಾಸಕ ಹಾಗೂ ಆತನ ಸಹಚರರನ್ನು ಬಂಧಿಸಲಾಗಿತ್ತು.

ಇತ್ತೀಚೆಗಷ್ಟೇ ಅತ್ಯಾಚಾರ ಸಂತ್ರಸ್ಥೆ ಸಂಚರಿಸುತ್ತಿದ್ದ ಕಾರಿನ ಮೇಲೆ ಲಾರಿ ಹತ್ತಿಸಲಾಗಿತ್ತು. ಸಂತ್ರಸ್ಥೆ ತೀವ್ರ ಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆಕೆಯ ಜತೆಗಿದ್ದ ಇಬ್ಬರು ಸಾವನ್ನಪ್ಪಿದ್ದರು.
ನಿನ್ನೆಯಷ್ಟೇ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ನ್ಯಾಯಪೀಠ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ಸಂತ್ರಸ್ಥೆಗೆ ತಕ್ಷಣ 25 ಲಕ್ಷ ರೂ. ಮಧ್ಯಂತರ ಪರಿಹಾರ ನೀಡುವ ಜತೆಗೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ 5 ಪ್ರಕರಣಗಳನ್ನು ಉತ್ತರಪ್ರದೇಶದಿಂದ ದೆಹಲಿ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಸೂಚಿಸಿತು.
ಮಕ್ಕಳನ್ನು ರಕ್ಷಿಸಿ:
ಈ ನಡುವೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪಕ್ಷ ಬಿಜೆಪಿ ಶಾಸಕರು ಹಾಗೂ ನಾಯಕರಿಂದ ಹೆಣ್ಣುಮಕ್ಕಳನ್ನು ರಕ್ಷಿಸಿ ಎಂದು ಆಗ್ರಹಿಸಿ ದೆಹಲಿ ಸೇರಿದಂತೆ ವಿವಿಧೆಡೆ ಪ್ರತಿಭಟನೆ ನಡೆಸಿದರು.

error: Content is protected !! Not allowed copy content from janadhvani.com