ರಾಜೀನಾಮೆ ಸ್ವೀಕರಿಸದ ಸ್ಪೀಕರ್: ಸುಪ್ರೀಮ್ ಮೆಟ್ಟಲೇರಿದ ಅತೃಪ್ತರು

ನವದೆಹಲಿ, ಜುಲೈ .10: ತಮ್ಮ ರಾಜೀನಾಮೆಗಳನ್ನು ವಿಧಾನಸಭಾದ್ಯಕ್ಷರು ಉದ್ದೇಶಪೂರ್ವಕವಾಗಿ ಸ್ವೀಕರಿಸುತ್ತಿಲ್ಲ ಎಂದು ಆರೋಪಿಸಿ ಕರ್ನಾಟಕದ 10 ಮಂದಿ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.

‘ವಿಧಾನಸಭಾಧ್ಯಕ್ಷ ರಮೇಶ್‌ ಕುಮಾರ್‌ ಅವರು ರಾಜೀನಾಮೆ ಸ್ವೀಕರಿಸದೆ ಸಾಂವಿಧಾನಿಕ ಕರ್ತವ್ಯಕ್ಕೆ ಸ್ಪೀಕರ್ ಚ್ಯುತಿ ತಂದಿದ್ದಾರೆ’ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಅತೃಪ್ತ ಶಾಸಕರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ‌ ಸಲ್ಲಿಸಿದ್ದಾರೆ.

ಬಂಡಾಯ ಶಾಸಕರ ಪರವಾಗಿ ಹಿರಿಯ ವಕೀಲ ಮುಕುಲ್ ರೊಹಟಗಿ ಮಂಡಿಸಿದ ವಾದವನ್ನು ಗಮನಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠ, ನಿಮ್ಮ ಆರ್ಜಿಯನ್ನು ನಾಳೆ ತುರ್ತಾಗಿ ವಿಚಾರಣೆ ನಡೆಸಲು ಪಟ್ಟಿಯಲ್ಲಿ ಸೇರಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು.

ಮುಂಬೈನಲ್ಲಿ ಬೀಡುಬಿಟ್ಟಿರುವ ಶಾಸಕ‌ರಾದ ಎಚ್.ವಿಶ್ವನಾಥ, ಪ್ರತಾಪಗೌಡ‌ ಪಾಟೀಲ ಸೇರಿದಂತೆ 10 ಜನ ಬಂಡಾಯ ಶಾಸಕರು ಹಿರಿಯ ವಕೀಲ ಮುಕುಲ್ ರೋಹಟ್ಗಿ ಅವರ‌ ಮೂಲಕ ಸುಪ್ರೀಂ ಕೋರ್ಟ್ ನಲ್ಲಿ ಬುಧವಾರ ಈ ಅರ್ಜಿ‌ ಸಲ್ಲಿಸಿದ್ದಾರೆ.

ನಿಯಮದ ಪ್ರಕಾರ ರಾಜೀನಾಮೆ ಸಲ್ಲಿಸಿಲ್ಲ ಎಂದು ಎಂಟು ಶಾಸಕರ ರಾಜೀನಾಮೆಯನ್ನು ಸ್ಪೀಕರ್‌ ರಮೇಶ್‌ ಕುಮಾರ್‌ ಅಂಗೀಕರಿಸದ ನಂತರ ಶಾಸಕರು ಈ ನಿರ್ಧಾರ ಕೈಗೊಂಡಿದ್ದಾರೆ. ರಾಜೀನಾಮೆ ನೀಡಿರುವ ಶಾಸಕರು ಖುದ್ದಾಗಿ ಬಂದು ಭೇಟಿ ಮಾಡಿದ ನಂತರ ರಾಜೀನಾಮೆ ಅಂಗೀಕರಿಸುವುದಾಗಿ ಸ್ಪೀಕರ್‌ ಸ್ಪಷ್ಟಪಡಿಸಿದ್ದರು.

Leave a Reply

Your email address will not be published. Required fields are marked *

error: Content is protected !!