ಮುಂಬೈ-ಮಂಗಳೂರು ಕೊಂಕಣ ರೈಲ್ವೆ ವಿದ್ಯುದೀಕರಣ-ರೈಲ್ವೆ ಸಚಿವ ಪಿಯೂಷ್‌ ಗೋಯಲ್‌

ಪಣಜಿ, ಜುಲೈ.7 :- ಗೋವಾ ಮಾರ್ಗವಾಗಿ ಮುಂಬೈ-ಮಂಗಳೂರು ಕೊಂಕಣ ರೈಲ್ವೆ ಮಾರ್ಗವನ್ನು 11,000 ಕೋಟಿ ರೂ ವೆಚ್ಚದಲ್ಲಿ ವಿದ್ಯುದೀಕರಣಗೊಳಿಸಲಾಗುವುದು ಎಂದು ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ತಿಳಿಸಿದ್ದಾರೆ.

ಬಿಜೆಪಿ ಸದಸ್ಯತ್ವ ಅಭಿಯಾನ ಅಂಗವಾಗಿ ನಿನ್ನೆ ಇಲ್ಲಿ ಆಯೋಜಿಸಿದ್ದ ಸಮಾರಂಭದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮುಂಬೈ-ಮಂಗಳೂರು ಮಾರ್ಗವನ್ನು ಈ ಯೋಜನೆಯಡಿ ಸಂಪೂರ್ಣ ವಿದ್ಯುದೀಕರಣಗೊಳಿಸಲಾಗುವುದು, ಇದರಿಂದ ರಮ್ಯ ಪ್ರಕೃತಿ ಸೊಬಗು ಇರುವ ಕೊಂಕಣ ರೈಲ್ವೆ ಮಾರ್ಗ ಮಾಲಿನ್ಯ ಮುಕ್ತಗೊಂಡು ವೇಗವೂ ಹೆಚ್ಚಾಗಲಿದೆ ಎಂದು ಅವರು ಹೇಳಿದ್ದಾರೆ.

ವಿಶ್ವದಲ್ಲೇ ಅತ್ಯುತ್ತಮ ಸೇವೆ ಮತ್ತು ದರ್ಜೆಯನ್ನಾಗಿಸಲು ರೈಲ್ವೆ ವಲಯದಲ್ಲಿ 2030ರ ವೇಳೆಗೆ 50 ಲಕ್ಷ ಕೋಟಿ ರೂ. ಹೂಡಿಕೆ ಮಾಡಲು ಸರ್ಕಾರ ಉದ್ದೇಶಿಸಿದೆ. ಮುಂದಿನ ಐದು ವರ್ಷಗಳಲ್ಲಿ 20 ಲಕ್ಷ ಕೋಟಿ ರೂ. ಮೊತ್ತದ ಯೋಜನೆಗಳನ್ನು ಕೈಗೊಳ್ಳಲು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಪ್ರವಾಸೋದ್ಯಮ ತಾಣವಾದ ಗೋವಾದಲ್ಲಿ ರೈಲು ಸಂಪರ್ಕ ವೃದ್ದಿಸಲು ಒತ್ತು ನೀಡಲಾಗಿದೆ. ಸಾಂಪ್ರದಾಯಿಕ ಹಳೆ ಬೋಗಿಗಳನ್ನು ಅತ್ಯಾಧುನಿಕ ಬೋಗಿಗಳೊಂದಿಗೆ ಬದಲಾಯಿಸುವ ಕಾರ್ಯ ವೇಗದಿಂದ ಸಾಗಿದೆ. ಮೇಕ್‌ ಇನ್‌ ಇಂಡಿಯಾ ಕಾರ್ಯಕ್ರಮದಡಿ ದೇಶೀಯವಾಗಿಯೇ ವಿಶ್ವದರ್ಜೆಯ ಬೋಗಿಗಳ ಉತ್ಪಾದನೆಯಾಗುತ್ತಿದೆ ಎಂದು ಪಿಯೂಷ್‌ ಗೋಯಲ್‌ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!