janadhvani

Kannada Online News Paper

“ಬಜೆಟ್ ಮತ್ತು ಬ್ರೀಫ್ಕೇಸ್” ಏನಿದರ ರಹಸ್ಯ?

ಬೆಂಗಳೂರು: ಮೋದಿ ನೇತೃತ್ವದ ಸರ್ಕಾರಗಳ 6ನೇ ಬಜೆಟ್ ಹಾಗೂ ಎನ್ಡಿಎ-2 ಸರ್ಕಾರದ ಮೊದಲ ಬಜೆಟ್ ಶುಕ್ರವಾರ ಮಂಡನೆಯಾಗಲಿದೆ. ಬಜೆಟ್ ಎಂದರೆ ಕನ್ನಡದಲ್ಲಿ ಆಯವ್ಯಯ ಪತ್ರ, ಮುಂಗಡಪತ್ರ ಎಂಬಿತ್ಯಾದಿ ಹೆಸರುಗಳಿವೆ. ಆದರೆ, ಬಜೆಟ್ ಪದದ ಮೂಲ ಹಾಗೂ ಬಜೆಟ್ ಮಂಡಿಸುವವರು ಸೂಟ್ಕೇಸ್ ಹಿಡಿದುಕೊಳ್ಳುವ ಸಂಪ್ರದಾಯದ ಹಿಂದಿರುವ ಕೆಲ ವಿಚಾರಗಳು ಕುತೂಹಲಕಾರಿಯಾಗಿವೆ.

1) ‘ಬಜೆಟ್’ ಎಂಬ ಇಂಗ್ಲೀಷ್ ಪದವು ಫ್ರೆಂಚ್ ಭಾಷೆಯ ‘Bougette’ ಪದದಿಂದ ಎರವಲು ಪಡೆದಿದೆ. ಫ್ರೆಂಚ್ನಲ್ಲಿ ಇದರ ಅರ್ಥ ಲೆದರ್ ಬ್ರೀಫ್ಕೇಸ್ ಎಂದಾಗಿದೆ.

2) ಭಾರತದಲ್ಲಿ ಬಜೆಟ್ ಮಂಡನೆಗೆ ಮುನ್ನ ಹಣಕಾಸು ಸಚಿವರು ಸೂಟ್ಕೇಸ್ ಹಿಡಿದು ಪೋಸ್ ಕೊಡುವುದನ್ನು ನೋಡುತ್ತೇವೆ. ಈ ಸಂಪ್ರದಾಯ ಬಂದಿದ್ದು ಬ್ರಿಟಿಷರಿಂದಲೇ. ಬ್ರಿಟನ್ ಸರ್ಕಾರದಲ್ಲಿ ಬಜೆಟ್ ಮಂಡನೆಗೆ ಮುನ್ನ ‘ಗ್ಲಾಡ್ಸ್ಟೋನ್ ಬಾಕ್ಸ್’ ಹೆಸರಿನ ಬ್ರೀಫ್ಕೇಸ್ ಬಳಕೆಯಾಗುತ್ತದೆ.

3) 1860ರಲ್ಲಿ ಅಂದಿನ ಬ್ರಿಟನ್ ಬಜೆಟ್ ಮುಖ್ಯಸ್ಥ ವಿಲಿಯನ್ ಇ. ಗ್ಲಾಡ್ಸ್ಟೋನ್ ಅವರು ಕೆಂಪು ಬಣ್ಣದ ಸೂಟ್ಕೇಸ್ ಬಳಸಿದ್ದರು. ಈ ಸೂಟ್ಕೇಸ್ನಲ್ಲಿ ಆಗಿನ ಮಹಾರಾಣಿಯ ಚಿನ್ನದ ಬಣ್ಣದ ಚಿತ್ರ ಅಲಂಕೃತಗೊಂಡಿತ್ತು. ಆ ಸೂಟ್ಕೇಸು ‘ಗ್ಲಾಡ್ಸ್ಟೋನ್ ಬಾಕ್ಸ್’ (Gladstone Box) ಎಂದೇ ಪ್ರಸಿದ್ಧವಾಯಿತು.

4) ಬ್ರಿಟನ್ನಲ್ಲಿ ಒಂದೇ ಬ್ರೀಫ್ಕೇಸ್ ಕಾಲಾನುಕ್ರಮದಲ್ಲಿ ವಿವಿಧ ಹಣಕಾಸು ಸಚಿವರಿಗೆ ವರ್ಗಾಣೆಯಾಗುತ್ತದೆ. ಆದರೆ, ಭಾರತದಲ್ಲಿ ವಿವಿಧ ಹಣಕಾಸು ಸಚಿವರು ವಿವಿಧ ರೀತಿಯ ಬ್ರೀಫ್ಕೇಸ್ ಬಳಸುತ್ತಾರೆ.

5) ಶತಮಾನದಷ್ಟು ಹಳೆಯದಾದ ಈ ಗ್ಲಾಡ್ಸ್ಟೋನ್ ಬಾಕ್ಸ್ ತೀರಾ ಹಾಳಾದ್ದರಿಂದ 2010ರಲ್ಲಿ ಬ್ರಿಟನ್ ಸರ್ಕಾರ ಈ ಸೂಟ್ಕೇಸನ್ನ ಬದಲಿಸಿ ಹೊಸದನ್ನು ತಂದಿತು.

6) 19ನೇ ಶತಮಾನದಲ್ಲಿದ್ದ ಗ್ಲಾಡ್ಸ್ಟೋನ್ ಅವರ ಬಜೆಟ್ ಭಾಷಣ ಬಹಳ ಸುದೀರ್ಘವಾಗಿರುತ್ತಿದ್ದವು. ಅವರ ಭಾಷಣದ ಪ್ರತಿಗಳೇ ಸಾಕಷ್ಟು ಸಂಖ್ಯೆಯಲ್ಲಿದ್ದವು. ಇವುಗಳನ್ನು ಇರಿಸಿಕೊಳ್ಳಲು ಬ್ರೀಫ್ಕೇಸ್ ಅನಿವಾರ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಬಜೆಟ್ ಮಂಡಿಸುವ ಸಚಿವರು ತಮ್ಮ ಭಾಷಣದ ಪ್ರತಿಗಳನ್ನು ಬ್ರೀಫ್ಕೇಸ್ನಲ್ಲಿಟ್ಟುಕೊಂಡು ಬರುವ ಸಂಪ್ರದಾಯ ಶುರುವಾಯಿತು.

7) ಸ್ವತಂತ್ರ ಭಾರತದ ಮೊದಲ ಹಣಕಾಸು ಸಚಿವರಾಗಿದ್ದ ಆರ್.ಕೆ. ಷಣ್ಮುಖಂ ಚೆಟ್ಟಿ ಅವರು 1947ರ ಮೊದಲ ಬಜೆಟ್ನಲ್ಲಿ ಲೆದರ್ ಸೂಟ್ಕೇಸ್ ಅನ್ನು ಹೊತ್ತು ಬಂದಿದ್ದರು.

ಇಂದಿರಾ ಗಾಂಧಿ ನಂತರ ಭಾರತದ ಮೊದಲ ಮಹಿಳಾ ಹಣಕಾಸು ಸಚಿವರಾಗಿರುವ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಎನ್ಡಿಎ-2 ಸರ್ಕಾರದ ಮೊದಲ ಬಜೆಟ್ ಮಂಡನೆ ಮಾಡಲಿದ್ದಾರೆ. ಆರ್ಥಿಕ ಹಿನ್ನಡೆ, ನಿರುದ್ಯೋಗ ಸಮಸ್ಯೆಗಳಿಂದ ನಲುಗಿರುವ ಭಾರತದ ಆರ್ಥಿಕತೆಗೆ ಪುಷ್ಟಿ ಕೊಡುವಂತಹ ಘೋಷಣೆಗಳನ್ನು ಈ ಬಜೆಟ್ನಲ್ಲಿ ನಿರೀಕ್ಷಿಸಬಹುದು.

error: Content is protected !! Not allowed copy content from janadhvani.com