janadhvani

Kannada Online News Paper

ನವದೆಹಲಿ, ಜುಲೈ.3: ಕೇಂದ್ರ ಸರ್ಕಾರದ ನೋಟು ಅಮಾನ್ಯೀಕರಣ ನೀತಿ ದೇಶದ ಆರ್ಥಿಕತೆ ಕುಸಿಯಲು ಕಾರಣವಲ್ಲ ಎಂಬ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್, ಅದರಿಂದ ಎಲ್ಲಾ ವಲಯದ ಪ್ರಗತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದಿದೆ.

2018-19ನೇ ಸಾಲಿನಲ್ಲಿ ಆರ್ಥಿಕ ಪ್ರಗತಿ ಕುಂಠಿತವಾಗಲು, ಕೃಷಿ, ವ್ಯಾಪಾರ, ಸಾರಿಗೆ, ರಕ್ಷಣೆ , ಸಂವಹನ ಹಾಗೂ ಸೇವೆಗಳ ವಲಯದಲ್ಲಿ ಕಡಿಮೆ ಪ್ರಗತಿಯಾಗಿದ್ದೇ ಕಾರಣ ಎಂದು ನಿರ್ಮಲಾ ಸೀತಾರಾಮನ್ ಅವರು ರಾಜ್ಯಸಭೆಗೆ ನೀಡಿದ ಉತ್ತರದಲ್ಲಿ ತಿಳಿಸಿದ್ದರು.
ಆದರೆ, ಈ ವಾದವನ್ನು ತಿರಸ್ಕರಿಸಿರುವ ಕಾಂಗ್ರೆಸ್, ಆರ್ಥಿಕತೆಯ ಪ್ರಗತಿ ಕುಂಠಿತವಾಗಲು ಈ ವಲಯಗಳ ಫಲಿತಾಂಶ ಕಾರಣವಾದರೆ, ಉತ್ಪಾದನಾ ವಲಯ ಸಂಪೂರ್ಣವಾಗಿ ಕುಸಿಯಲು ನೋಟು ಅಮಾನ್ಯೀಕರಣವೇ ಕಾರಣ ಎಂದಿದೆ.

ನೋಟು ಅಮಾನ್ಯೀಕರಣದಿಂದ ಜಿಡಿಪಿ ಪ್ರಗತಿಯಲ್ಲಿ ಶೇ.2ರಷ್ಟು ಕುಸಿತವಾಗಿದೆ. 1.5 ದಶಲಕ್ಷ ಉದ್ಯೋಗಾವಕಾಶಗಳು ಮುಚ್ಚಿಹೋಗಿವೆ, ಆರ್ ಬಿಐ ಉಳಿತಾಯದಲ್ಲಿ ಶೇ.53.46ರಷ್ಟು ಇಳಿಮುಖವಾಗಿದೆ, ಕೈಗಾರಿಕಾ ಉತ್ಪಾದನೆಯಲ್ಲಿ ಶೇ.23ರಿಂದ 30ರಷ್ಟಿ ಕುಸಿತವಾಗಿದೆ.ನಿರ್ಮಲಾ ಸೀತಾರಾಮನ್ ಅವರು ತಮ್ಮ ವೈಫಲ್ಯವನ್ನು ಒಪ್ಪಿಕೊಳ್ಳಲು ಇದಕ್ಕಿಂತ ಹೆಚ್ಚಿನ ಉದಾಹರಣೆಗಳು ಬೇಕೆ ಎಂದು ಪ್ರಶ್ನಿಸಿದೆ.

ಜಿಡಿಪಿ ಕುಸಿತದ ನಂತರವೂ, ನಮ್ಮದು ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಹೊಂದಿರುವ ದೇಶ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದರು. ಜೊತೆಗೆ, ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆಗಳ ಪೈಕಿ ಆರ್ಥಿಕ ಪ್ರಗತಿ ಪ್ರಮುಖ ಸ್ಥಾನದಲ್ಲಿದೆ ಎಂದಿದ್ದರು.

error: Content is protected !! Not allowed copy content from janadhvani.com