ದುಸ್ಸಾಹಸದಿಂದ ವಿಮಾನಗಳನ್ನು ಭೂ ಸ್ಪರ್ಶ ಮಾಡದಿರಿ- ಪೈಲಟ್ ಗಳಿಗೆ ಡಿಜಿಸಿಎ ಎಚ್ಟರಿಕೆ

ನವದೆಹಲಿ, ಜು.2: ಪ್ರತಿಕೂಲ ಹವಾಮಾನ ಸಂದರ್ಭದಲ್ಲಿ ಪೈಲೆಟ್‍ಗಳ ಮುಂಜಾಗ್ರತಾ ಮತ್ತು ಸುರಕ್ಷತಾ ಕ್ರಮಗಳ ನಿರ್ಲಕ್ಷ್ಯದಿಂದಾಗಿ ವಿಮಾನಗಳು ರನ್ ವೇನಲ್ಲಿ ಜಾರುತ್ತಿರುವ ಆತಂಕಕಾರಿ ಘಟನೆಗಳನ್ನು ನಾಗರಿಕ ವಿಮಾನ ಯಾನ ನಿರ್ದೇಶನಾಲಯ (ಡಿಜಿಸಿಎ) ಗಂಭೀರವಾಗಿ ಪರಿಗಣಿಸಿದೆ.

ಈ ಸಂಬಂಧ ಭಾರತದ ಏರ್‍ಲೈನ್ಸ್ ಸಂಸ್ಥೆಗಳಿಗೆ ಸ್ಪಷ್ಟವಾಗಿ ತಿಳಿಸಿರುವ ಡಿಜಿಸಿಎ ಪ್ರತಿಕೂಲ ಹವಾಮಾನ ಸಂದರ್ಭದಲ್ಲಿ ದುಸ್ಸಾಹಸ ಮಾಡಿ ಅಸ್ಥಿರವಾಗಿ ವಿಮಾನವನ್ನು ಭೂ ಸ್ಪರ್ಶ ಮಾಡಬಾರದು. ಇದನ್ನು ಉಲ್ಲಂಘಿಸಿದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ಈ ಕುರಿತು ನಾಗರಿಕ ವಿಮಾನ ಯಾನ ಮಹಾ ನಿರ್ದೇಶಕ ಅರುಣ್ ಕುಮಾರ್ ಇಂದು ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ಸುತ್ತೋಲೆ ರವಾನಿಸಿದ್ದಾರೆ.

ವಿಮಾನ ಕಾರ್ಪೆಟ್‍ನಲ್ಲಿ (ಪೈಲೆಟ್‍ಗಳು) ಸಮರ್ಥರು ಮತ್ತು ಅನುಭವಿಗಳನ್ನು ಮಾತ್ರ ನಿಯೋಜಿಸಬೇಕು. ಪ್ರತಿಕೂಲ ಹವಾಮಾನದಂತಹ ಪರಿಸ್ಥಿತಿಗಳಲ್ಲಿ ಈ ಅಪಾಯದ ಮುನ್ಸೂಚನೆ ಇದ್ದರೂ ದುಸ್ಸಾಹಸದಿಂದ ವಿಮಾನಗಳನ್ನು ಭೂ ಸ್ಪರ್ಶ ಮಾಡುವ ಯತ್ನಗಳನ್ನು ಮಾಡಬಾರದು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಈ ಸುತ್ತೋಲೆ ಹೊರಡಿಸಿದ ಹೊರತಾಗಿಯೂ ಇದನ್ನು ನಿರ್ಲಕ್ಷಿಸಿದರೆ ಅಂತಹ ಏರ್‍ಲೈನ್ಸ್ ಸಂಸ್ಥೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಪ್ರಯಾಣಿಕರ ಸುರಕ್ಷತೆ ಮತ್ತು ರಕ್ಷಣೆಗೆ ಆದ್ಯತೆ ನೀಡುವುದು ವಿಮಾನ ಯಾನ ಸಂಸ್ಥೆಗಳ ಆದ್ಯ ಕರ್ತವ್ಯ. ಆದರೆ ಇತ್ತೀಚಿನ ದಿನಗಳಲ್ಲಿ ರನ್ ವೇಗಳನ್ನು ಬಿಟ್ಟು ವಿಮಾನಗಳು ಪಕ್ಕದ ಸ್ಥಳಗಳಿಗೆ ಚಲಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಅನಾಹುತ ಸಂಭವಿಸಿದಲ್ಲಿ ಆಯಾ ವಿಮಾನ ಸಂಸ್ಥೆಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಅರುಣ್‍ಕುಮಾರ್ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಮುಂಬೈನಲ್ಲಿ ಧಾರಾಕಾರ ಮಳೆಯಿಂದ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಜೈಪುರದಿಂದ ಆಗಮಿಸಿದ ಸ್ಪೈಸ ಜೆಟ್ ವಿಮಾನ ಪ್ರತಿ ಕೂಲದ ಹವಾಮಾನದ ನಡುವೆ ನಿರ್ಲಕ್ಷ್ಯ ರೀತಿಯಲ್ಲಿ ರನ್‍ವೇಗೆ ಇಳಿದು ಪಕ್ಕದ ಹುಲ್ಲುಗಾವಲು ಪ್ರದೇಶದಲ್ಲಿ ಸಿಲುಕಿ ಇತರ ವಿಮಾನ ಗಳ ಪ್ರಯಾಣಕ್ಕೆ ತೊಂದರೆಯಾದ ಪ್ರಕರಣವನ್ನು ಡಿಜಿಸಿಎ ಮುಖ್ಯವಾಗಿ ಪ್ರಸ್ತಾಪಿಸಿದೆ.

Leave a Reply

Your email address will not be published. Required fields are marked *

error: Content is protected !!