janadhvani

Kannada Online News Paper

ಪ್ರಜ್ಞೆ ತಪ್ಪಿಸಿ ಕಳ್ಳತನ- ರೈಲ್ವೆ ಪೊಲೀಸರಿಂದ ಎಚ್ಚರಿಕೆ

ಬೆಂಗಳೂರು : ರೈಲಿನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರೇ ಎಚ್ಚರ. ನೀವು ಸ್ವಲ್ಪ ಯಾಮಾರಿದರೂ ನಿಮ್ಮ ಪ್ರಜ್ಞೆ ತಪ್ಪಿಸಿ ಕಳ್ಳತನ ಮಾಡಿ ಬಿಡುತ್ತಾರೆ. ದೆಹಲಿಗೆ ಹೊರಟಿದ್ದ ಕರ್ನಾಟಕ ಎಕ್ಸ್​​ಪ್ರೆಸ್​ ರೈಲಿನಲ್ಲಿ ಹೀಗೊಂದು ಘಟನೆ ನಡೆದಿದ್ದು, ರೈಲ್ವೆ ಪೊಲೀಸರು ಪ್ರಯಾಣಿಕರ ಬಳಿ ಎಚ್ಚರಿಕೆಯಿಂದ ಇರುವಂತೆ ಕೋರಿದ್ದಾರೆ.

ಏಪ್ರಿಲ್ 19 ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೆಆರ್ ಪುರಂ ರೈಲ್ವೆ ನಿಲ್ದಾಣದಲ್ಲಿ ನಾಲ್ವರು ಕಳ್ಳರು ಹತ್ತಿದ್ದರು. ಚಿನ್ನವನ್ನು ಯಾರು ಹೆಚ್ಚು ಧರಿಸಿದ್ದಾರೆ ಎಂಬುದನ್ನು ನೋಡಿ ಇವರು ಟಾರ್ಗೆಟ್​ ಫಿಕ್ಸ್​ ಮಾಡಿಕೊಳ್ಳುತ್ತಾರೆ. ಅದೇ ರೀತಿ ಕೆಆರ್​ಪುರಂನಲ್ಲಿ ಹತ್ತಿದ್ದ ಇವರು 6 ಪ್ರಯಾಣಿಕರಿಗೆ ನಿದ್ರೆ ಬರುವ ಔಷಧಿ ಬೆರೆಸಿದ ಬಿಸ್ಕತ್​ ಹಾಗೂ ತಂಪು ಪಾನಿಯಾ ನೀಡಿದ್ದರು. ಅವರು ಪ್ರಜ್ಞೆ ತಪ್ಪಿದ ನಂತರ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಚಿನ್ನಾಭರಣದ ಮೌಲ್ಯ 74 ಸಾವಿರ ರೂ. ಆಗಿತ್ತು ಎಂದು ತಿಳಿದು ಬಂದಿದೆ.

ರೈಲು ಸೊಲ್ಲಾಪುರ ಹೋದಾಗ 6 ಪ್ರಯಾಣಿಕರು ಪ್ರಜ್ಞೆ ತಪ್ಪಿದ್ದನ್ನು ರೈಲ್ವೆ ಸಿಬ್ಬಂದಿ ನೋಡಿದ್ದಾರೆ. ನಂತರ ಆ ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ರೈಲ್ವೆ ಪೊಲೀಸರು ಏಪ್ರಿಲ್ 19ರಂದು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಈಗ ಬೆಂಗಳೂರು ರೈಲ್ವೆ ಪೊಲೀಸರಿಗೆ ಕೇಸ್ ವರ್ಗಾವಣೆ ಮಾಡಲಾಗಿದೆ.

6 ಜನರು ಪ್ರಜ್ಞೆ ತಪ್ಪಿದರ ಹಿಂದಿನ ಕಾರಣವೇನು ಎಂಬುದು ಪೊಲೀಸರಿಗೆ ತಿಳಿದಿರಲಿಲ್ಲ. ಆದರೆ, ಈ ಪ್ರಯಾಣಿಕರು ನಡೆದ ಘಟನೆ ಬಗ್ಗೆ ಸಂಪೂರ್ಣವಾಗಿ ವಿವರಣೆ ನೀಡಿದ್ದರು. ಈ ಸಂಬಂಧ ಈಗ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.

error: Content is protected !! Not allowed copy content from janadhvani.com