ರೇಪಿಸ್ಟ್ ಬಾಬಾ ಬೆಂಬಲಿಗ ಜೈಲಿನಲ್ಲಿ ಹತ್ಯೆ-ಪಂಜಾಬ್‌ನಲ್ಲಿ ಪ್ರಕ್ಷುಬ್ಧ ವಾತಾವರಣ

ಚಂಡೀಗಡ (ಪಂಜಾಬ್‌): ಬರ್ಗಾಲಿ ಪವಿತ್ರ ಗ್ರಂಥಗಳ ಅಪಮಾನ ಪ್ರಕರಣದ ಪ್ರಮುಖ ಆರೋಪಿಯನ್ನು ಪಟಿಯಾಲಾದ ನಭಾ ಕಾರಾಗೃಹದಲ್ಲಿ ಸಹ ಕೈದಿಗಳೇ ಹತ್ಯೆಗೈದಿದ್ದಾರೆ. ಈ ಘಟನೆಯು ಪಂಜಾಬ್‌ನಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣ ಮಾಡಿದ್ದು, ಸಂಭಾವ್ಯ ಕೋಮು ಗಲಭೆಗಳನ್ನು ತಡೆಯುವ ಉದ್ದೇಶದಿಂದ ರಾಜ್ಯದಲ್ಲಿ ಸೇನೆ ನಿಯೋಜನೆ ಮಾಡಲಾಗಿದೆ.

ಪಂಜಾಬ್‌ನ ಫರೀದ್‌ಕೋಟ್‌ನ ಬರ್ಗಾಲಿ ಗ್ರಾಮದಲ್ಲಿ 2015ರಲ್ಲಿ ಸಿಖ್ಖರ ಪವಿತ್ರ ಗ್ರಂಥವನ್ನು ಅಪಮಾನಿಸಲಾಗಿತ್ತು. ಈ ಪ್ರಕರಣದಲ್ಲಿ ಮೊಹೀಂದರ್‌ ಪಾಲ್‌ ಬಿಟ್ಟೂ (49) ಪ್ರಮುಖ ಆರೋಪಿಯಾಗಿದ್ದ. ಗುರ್ಮಿಟ್‌ ರಾಮ್‌ ರಹೀಮ್‌ ಬಾಬಾನ ಡೇರಾ ಸಚ್ಚಾ ಸೌಧದ ಅನುಯಾಯಿಯೂ ಆಗಿರುವ ಬಿಟ್ಟೂನನ್ನು ನಭಾ ಜೈಲಿನಲ್ಲಿ ಬಂಧಿಸಿಡಲಾಗಿತ್ತು. ಆದರೆ, ಶನಿವಾರ ಸಂಜೆ 5.45ರಲ್ಲಿ ಸಹ ಕೈದಿಗಳಾದ ಗುರುಸೇವಕ ಸಿಂಗ್‌ ಮತ್ತು ಮಣೀಂದರ್‌ ಸಿಂಗ್‌ ಎಂಬುವವರು ಬಿಟ್ಟುನನ್ನು ಕಬ್ಬಿಣದ ಸರಳುಗಳಿಂದ ದಾಳಿ ಮಾಡಿ ಕೊಂದಿದ್ದಾರೆ.

ಬಿಟ್ಟೂವಿನ ಹತ್ಯೆಯು ಪಂಜಾಬ್‌ನಲ್ಲಿ ಕೋಮು ಗಲಭೆಗಳಿಗೆ ಇಂಬು ನೀಡುವ ಸಾಧ್ಯತೆಗಳಿವೆ. ಇದೇ ಹಿನ್ನೆಲೆಯಲ್ಲಿ ರಾಜ್ಯದ ಜನರಲ್ಲಿ ಮನವಿ ಮಾಡಿರುವ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌, ಜನತೆ ಶಾಂತಿಯಿಂದ ವರ್ತಿಸಬೇಕು. ಯಾವುದೇ ಗಾಳಿ ಸುದ್ದಿಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದ್ದಾರೆ. ಪ್ರಕರಣದ ತನಿಖೆಗೆ ಆದೇಶಿಸಿರುವ ಅವರು ದಾಳಿಕೋರರಿಗೆ ಕಠಿಣ ಶಿಕ್ಷೆ ಕೊಡಿಸುವ ಭರವಸೆ ನೀಡಿದ್ದಾರೆ. ಇದೇ ವೇಳೆ, ಇಬ್ಬರು ಜೈಲು ಅಧಿಕಾರಿಗಳನ್ನು ಅಮಾನತುಗೊಳಿಸಿದೆ.

ರಾಜ್ಯದಲ್ಲಿ ಪ್ರಕ್ಷುಬ್ಧ ವಾತಾವರಣ ಮನೆ ಮಾಡಿರುವ ಹಿನ್ನೆಲೆಯಲ್ಲಿ ಗಡಿ ಭದ್ರತಾ ಪಡೆಯ 10 ತುಕಡಿಗಳನ್ನು, ಕ್ಷಿಪ್ರ ಕಾರ್ಯಪಡೆಯ 2 ತುಕಡಿಗಳನ್ನು ಪಂಜಾಬ್‌ನಲ್ಲಿ ನಿಯೋಜಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!