ನಾನು ಸಿದ್ದರಾಮಯ್ಯ ಅವರ ಕಾಂಗ್ರೆಸ್ನಲ್ಲಿಲ್ಲ- ರೋಷನ್ ಬೇಗ್

ಬೆಂಗಳೂರು, ಜೂ19-: ನಾನು ನ್ಯಾಷನಲ್ ಕಾಂಗ್ರೆಸ್ನಲ್ಲಿರುವುದು, ಸಿದ್ದರಾಮಯ್ಯ ಅವರ ಕಾಂಗ್ರೆಸ್ನಲ್ಲಿಲ್ಲ ,ನನ್ನ ಅಮಾನತ್ತಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒತ್ತಡವೂ ಕಾರಣವಿರಬಹುದು, ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ನಮ್ಮ ಪಕ್ಷದ ನಾಯಕರನ್ನು ಭೇಟಿ ಮಾಡಿ ಮುಂದಿನ ನಡೆ ಕುರಿತು ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಕಾಂಗ್ರೆಸ್ ಪಕ್ಷದಿಂದ ಅಮಾನತ್ತಾದ ಶಾಸಕ ರೋಷನ್ ಬೇಗ್ ತಿಳಿಸಿದ್ದಾರೆ.

ಪಕ್ಷದಿಂದ ಅಮಾನತು ಮಾಡಿದ ಬಗ್ಗೆ ತಮ್ಮ ಫ್ರೇಜರ್ ಟೌನ್ ನ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ನಾನು ಹೇಳಿರುವುದು ಸತ್ಯ , ಸತ್ಯ ಹೇಳುವುದು ಅಪರಾಧವಾ ಎಂದು ಪ್ರಶ್ನಿಸಿದರು. ನಾನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಟೀಕೆ ಮಾಡಿಲ್ಲ. ಪಕ್ಷದ ರಾಜ್ಯ ನಾಯಕರನ್ನು ನಾನು ಟೀಕಿಸಿದ್ದೆ. ಹಾಗಾಗಿ ನನ್ನ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಪಕ್ಷ ವಿರೋಧಿ ಚಟುವಟಿಕೆ ಎಂದು ನನ್ನ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಕಾಂಗ್ರೆಸ್ ನಾಯಕರೊಬ್ಬರು ಲೋಕಸಭಾ ಚುನವಣೆಯಲ್ಲಿ ಹಿರಿಯ ದಲಿತ ನಾಯಕ ಕೆ ಎಚ್. ಮುನಿಯಪ್ಪ ಅವರನ್ನು ಸೋಲಿಸುತ್ತೇನೆ ಎಂದು ಬಹಿರಂಗವಾಗಿ ಹೇಳಿಕೆ ನೀಡುತ್ತಾರೆ. ಅವರ ವಿರುದ್ಧ ಯಾಕೆ ಕ್ರಮ ತೆಗೆದುಕೊಳ್ಳುವುದಿಲ್ಲ? ಮುನಿಯಪ್ಪ ಅವರನ್ನು ನಮ್ಮ ಮುಖಂಡರೇ ಸೋಲಿಸಿರುವುದು ಇವರಿಗೆ ತಿಳಿದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ತಾವು ಪಕ್ಷದ ವಿರುದ್ಧ ಮಾತನಾಡಿಲ್ಲ, ಪಕ್ಷದ ಲಕ್ಷಾಂತರ ಅಭಿಪ್ರಾಯವನ್ನು ನಾನು ತಿಳಿಸಿದ್ದೇನೆ. ಇದಕ್ಕೆ ನನಗೆ ಈ ಶಿಕ್ಷೆ ಸಿಕ್ಕಿದೆ. ತುಮಕೂರಿನಲ್ಲಿ ಮುದ್ದಹನುಮೇಗೌರನ್ನು ಬಲಿಕೊಟ್ಟಿದ್ದಾರೆ. ಅವರು ಏನು ತಪ್ಪು ಮಾಡಿದ್ದರು? ಮಂಡ್ಯದಲ್ಲಿ ಸುಮಲತಾ ಅವರಿಗೆ ಬಹಿರಂಗವಾಗಿ ಬೆಂಬಲ ಸೂಚಿಸಿದ್ದಾರೆ. ಮೈತ್ರಿ ಮಾಡಿಕೊಂಡು ಪಕ್ಷಕ್ಕಾಗಿ ದುಡಿದವರಿಗೆ ಅನ್ಯಾಯ ಮಾಡಿದ್ದಾರೆ. ಕೊನೆಗೆ ಮಾಜಿ ಪ್ರಧಾನ ಮಂತ್ರಿ ಎಚ್.ಡಿ. ದೇವೇಗೌಡರನ್ನೂ ಸೋಲಿಸಿದ್ದಾರೆ ಇದಕ್ಕೆಲ್ಲಾ ಹೊಣೆಯಾರು,ಅವರ ವಿರುದ್ಧ ಯಾಕೆ ಕ್ರಮ ಕೈಗೊಳ್ಳುವುದಿಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕರ ಬಗ್ಗೆ ಆಕ್ರೋಷ ವ್ಯಕ್ತಪಡಿಸಿದರು.

ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ಬಗ್ಗೆ ಎಲ್ಲಾ ಮುಖಂಡರನ್ನು ಕರೆದು ಚರ್ಚೆ ಮಾಡಬೇಕಿತ್ತು. ಬಾಗಿಲು ಹಾಕಿಕೊಂಡು ರಹಸ್ಯವಾಗಿ ಗುಸು ಗುಸು ಎಂದು ಪಕ್ಷದ ಬಗ್ಗೆ ಚರ್ಚೆ ಮಾಡುವುದಕ್ಕಾಗಲ್ಲ. ಎಲ್ಲರೂ ಒಟ್ಟಾಗಿ ಚರ್ಚೆ ಮಾಡಬೇಕು. ನಾನು ಪಕ್ಷದ ರಾಜ್ಯ ನಾಯಕರ ಬಗ್ಗೆ ಮಾತಾಡಿದ್ದಕ್ಕೆ ಹಲವರಿಂದ ಬೆಂಬಲ ಬಂತು ಎಂದು ರಾಮಲಿಂಗಾ ರೆಡ್ಡಿ ಸೇರಿದಂತೆ ಪಕ್ಷದ ನಾಯಕರ ವಿರುದ್ದ ಅಸಮಾಧಾನಿತರು ತಮ್ಮ ಬೆಂಬಲಕ್ಕಿದ್ದಾರೆಂಬ ಸಂದೇಶ ನೀಡಿದರು.

ತಮ್ಮನ್ನು ಪಕ್ಷ ವಿರೋಧಿ ಎಂದು ಅಮಾನತ್ತು ಮಾಡಲಾಗಿದೆ.ಈ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕರಾದ ಮುನಿಯಪ್ಪ, ರಾಮಲಿಂಗಾರೆಡ್ಡಿ ,ಎಚ್ ಕೆ ಪಾಟೀಲ್, ಮಲ್ಲಿಕಾರ್ಜುನ್ ಖರ್ಗೆ ಜೊತೆ ಚರ್ಚಿಸಿ ಮುಂದಿನ ನಿರ್ಣಯ ತೆಗೆದುಕೊಳ್ಳುತ್ತೇನೆ ಎಂದು ಬಂಡಾಯದ ಕಹಳೆ ಮೊಳಗಿಸುವ ಸೂಚನೆ ನೀಡಿದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪಕ್ಷದ ನಾಯಕತ್ವ ,ಸರ್ಕಾರದ ವಿರುದ್ಧವೇ ಹೋರಾಟ ನಡೆಸುತ್ತಿದ್ದಾರೆ ಅವರ ಬಗ್ಗೆ ಯಾರು ತುಟಿ ಬಿಚ್ಚುತ್ತಿಲ್ಲ. ಕೆ.ಎನ್ ರಾಜಣ್ಣ ಅವರ ವಿರುದ್ಧ ಯಾಕೆ ಕ್ರಮ ತೆಗೆದುಕೊಂಡಿಲ್ಲ ಎಂದು ಪ್ರಶ್ನಿಸಿದರು.

ಐಎಂಎ ಪ್ರಕರಣದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು ರೋಷನ್ ಬೇಗ್ ಎಸ್ ಐಟಿ ತನಿಖೆ ಆರಂಬವಾಗಿದೆ ಎಂದು ಹೇಳಿದರು.ಇಂದು ರಾಹುಲ್ ಗಾಂಧಿ ಅವರ ಜನ್ಮದಿನ. ಅವರಿಗೆ ಜನ್ಮದಿನದ ಶುಭಾಶಯ ಕೋರುತ್ತೇನೆ ಅವರೇ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರಿಯಬೇಕು, ನಾನು ಕಾಂಗ್ರೆಸ್ ಪಕ್ಷದಲ್ಲೇ ಇರುತ್ತೇನೆ ಯಾವುದೇ ಕಾರಣಕ್ಕೂ ಪಕ್ಷ ತೊರೆಯುವುದಿಲ್ಲ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!