janadhvani

Kannada Online News Paper

ಇವಿಎಂ ಬಗ್ಗೆ ಚರ್ಚಿಸಲು ಸಭೆ ಕರೆದಿದ್ರೆ ಭಾಗಿಯಾಗುತ್ತಿದ್ದೆ- ಮಾಯಾವತಿ

ನವದೆಹಲಿ(ಜೂನ್.19): ಒಂದು ದೇಶ ಮತ್ತು ಒಂದು ಚುನಾವಣೆ ಸೇರಿದಂತೆ ಹಲವು ವಿಚಾರಗಳ ಸುತ್ತ ಚರ್ಚಿಸಲು ಇಂದು ಪ್ರಧಾನಿ ನರೇಂದ್ರ ಮೋದಿಯವರು ಸರ್ವಪಕ್ಷಗಳ ಸಭೆ ಕರೆದಿದ್ದರು. ಈ ಸಭೆಗೆ ವಿರೋಧ ಪಕ್ಷದ ನಾಯಕರಾದ ಮಾಜಿ ಸಿಎಂ ಚಂದ್ರಬಾಬು ನಾಯ್ಡು, ಡಿಎಂಕೆ ವರಿಷ್ಠ ಸ್ಟಾಲಿನ್, ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೇರಿದಂತೆ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿಯವರು ಕೂಡ ಗೈರಾಗಿದ್ದಾರೆ.

ಹಾಗೆಯೇ ಕಾಂಗ್ರೆಸ್ ಕೂಡ ಸಭೆಗೆ ಹಾಜರಾಗಿಲ್ಲ ಎನ್ನಲಾಗಿದೆ. ಹಿಂದಿನಿಂದಲೂ ಬಿಜೆಪಿ ಪ್ರಸ್ತಾಪದ ಈ ವಿಷಯವನ್ನು ಕಾಂಗ್ರೆಸ್ ವಿರೋಧಿಸುತ್ತಾ ಬಂದಿತ್ತು. ಅಂತೆಯೇ ಈಗ ಸಭೆಗೆ ಗೈರಾಗುವ ಮೂಲಕ ಕಾಂಗ್ರೆಸ್ ತನ್ನ ನಿಲುವಿಗೆ ಬದ್ದವಾಗಿದೆ ಎನ್ನುತ್ತಿವೆ ಮೂಲಗಳು.

ಈ ಬೆನ್ನಲ್ಲೇ ಸಭೆಗೆ ಯಾಕೇ? ಹಾಜರಾಗುತ್ತಿಲ್ಲ ಎಂಬುದಕ್ಕೆ ಮಾಜಿ ಸಿಎಂ ಮಾಯಾವತಿ ಕಾರಣ ನೀಡಿದ್ದಾರೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿಯವರು ಇವಿಎಂ ಯಂತ್ರದ ಕುರಿತಾಗಿ ಸಭೆ ಕರೆಯಬೇಕಿತ್ತು. ನಾನು ಹೇಳಿದ ವಿಚಾರಕ್ಕೆ ಸರ್ವಪಕ್ಷಗಳ ಸಭೆ ಕರೆದಿದ್ದರೆ ಭಾಗಿಯಾಗುತ್ತಿದ್ದೆ ಎಂದಿದ್ದಾರೆ.

ಇನ್ನು ಜನರಿಗೆ ಇವಿಎಂ ಬಗ್ಗೆ ಅನುಮಾನವಿದೆ. ಬ್ಯಾಲೆಟ್ ಪೇಪರ್ ಬದಲಾಗಿ ಇವಿಎಂ ಮೂಲಕ ಚುನಾವಣೆ ಮಾಡುವುದು ಪ್ರಜಾಪ್ರಭುತ್ವಕ್ಕೆ ಬಹುದೊಡ್ಡ ಅಪಾಯ. ಹೀಗಾಗಿ ಇವಿಎಂ ಮತಯಂತ್ರದ ಬಗ್ಗೆ ಮಾತನಾಡಲು ಸಭೆ ಕರೆಯುವ ಅಗತ್ಯವಿದೆ. ಹಾಗೇ ಕರೆದರೆ ನಾನೂ ಸಭೆಗೆ ತೆರಳುತ್ತೇನೆ” ಎಂದು ಮಾಯಾವತಿ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ, “ಒಂದು ದೇಶ, ಒಂದು ಚುನಾವಣೆ” ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಜತೆಗೆ 2022ರಲ್ಲಿ ಮಹಾತ್ಮ ಗಾಂಧೀಜಿಯವರ 150ನೇ ಜನ್ಮದಿನವನ್ನು ಹೇಗೆ ಅದ್ಧೂರಿಯಾಗಿ ಆಚರಿಸಬೇಕು? ಎಂಬುದರ ಕುರಿತಾಗಿ ಸಲಹೆ ಮತ್ತು ಸೂಚನೆ ಆಲಿಸುತ್ತಿದ್ದಾರೆ.

error: Content is protected !! Not allowed copy content from janadhvani.com