janadhvani

Kannada Online News Paper

ಮತಪತ್ರಗಳನ್ನು ಬಳಸದಿದ್ದಲ್ಲಿ ಚುನಾವಣೆಯನ್ನು ಬಹಿಷ್ಕರಿಸಿ- ಇವಿಎಂ ವಿರೋಧಿ ವೇದಿಕೆ ಕರೆ

ಮುಂಬೈ :ಇವಿಎಂ ವಿರೋಧಿ ರಾಷ್ಟ್ರೀಯ ಆಂದೋಲನ ಮುಂಬೈಯಲ್ಲಿ ಆಯೋಜಿಸಿದ್ದ ಸಮ್ಮೇಳನದಲ್ಲಿ, ಮಹಾರಾಷ್ಟ್ರ, ಜಾರ್ಖಂಡ್, ಹರ್ಯಾಣ ಮತ್ತು ಸಿಕ್ಕಿಂನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳಲ್ಲಿ ಮತಪತ್ರಗಳನ್ನು ಬಳಸದೆ ಇದ್ದರೆ ಚುನಾವಣೆಯನ್ನೇ ಬಹಿಷ್ಕರಿಸುವಂತೆ ರಾಜಕೀಯ ಪಕ್ಷಗಳಿಗೆ ಮತ್ತು ಜನರಿಗೆ ಕರೆ ನೀಡಿದೆ.

ಸಮ್ಮೇಳನದಲ್ಲಿ ಮಂಡಿಸಲಾದ ಎಂಟು ಅಂಶಗಳ ನಿರ್ಣಯದಲ್ಲಿ, ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಭಾರತದ ಜನರಿಗೆ ಕನಿಷ್ಟ ನಂಬಿಕೆಯಿದೆ. ಈ ಚುನಾವಣೆಯಲ್ಲಿ ಇವಿಎಂ-ವಿವಿಪ್ಯಾಟ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ತಿರುಚಲಾಗಿದೆ ಎಂದು ತಿಳಿಸಿದೆ. ಈ ಬಗ್ಗೆ ಭಾರತದ ಮುಖ್ಯ ನ್ಯಾಯಾಧೀಶರ ನೇತೃತ್ವದಲ್ಲಿ ಸರ್ವೋಚ್ಚ ನ್ಯಾಯಾಲಯದ ಮೂವರು ನ್ಯಾಯಾಧೀಶರ ಪೀಠದಿಂದ ತನಿಖೆ ನಡೆಸಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಗಿದೆ.

ನ್ಯಾಯಾಧೀಶ ಕೊಲ್ಸೆ ಪಾಟಿಲ್ ಇವಿಎಂ ಬಳಕೆಯನ್ನು ವಿರೋಧಿಸುತ್ತಾ ಇದು ಭಾರತವನ್ನು ವಿಭಜಿಸುತ್ತದೆ ಎಂದು ತಿಳಿಸಿದ್ದಾರೆ. ಸ್ವಾತಂತ್ರ ಹೋರಾಟಗಾರ ಜಿ.ಜಿ ಪಾರಿಖ್ ಈ ಆಂದೋಲನವನ್ನು ಭಾರತ ಚಳುವಳಿ ಎಂದು ಕರೆದಿದ್ದು ಇದು ಅರೆಕಾಲಿಕ ಅಥವಾ ತಾತ್ಕಾಲಿಕ ಆಂದೋಲನವಲ್ಲ, ಬದಲಿಗೆ ಪೂರ್ಣಕಾಲಿಕ ಕಾರಣಕ್ಕಾಗಿ ನಡೆಯುತ್ತಿರುವ ಹೋರಾಟ ಎಂದು ತಿಳಿಸಿದ್ದಾರೆ.

ಸಮ್ಮೇಳನದ ಉದ್ಘಾಟನಾ ದಿನದಂದು ಇವಿಎಂ ಹ್ಯಾಕ್ ಮಾಡುವ, ಕಳ್ಳ ಮತದಾನ ಮತ್ತು ಹ್ಯಾಕಿಂಗ್‌ಗೆ ರಹಸ್ಯ ಸಾಫ್ಟ್‌ವೇರ್ ಬಳಸುತ್ತಿರುವ ವೀಡಿಯೊಗಳನ್ನು ಪ್ರದರ್ಶಿಸಲಾಯಿತು. ಈ ವೇಳೆ ಮಾತನಾಡಿದ ಪಾರಿಖ್, ನಾವು ರಾಷ್ಟ್ರವ್ಯಾಪಿ ಆಂದೋಲನವನ್ನು ಸೃಷ್ಟಿಸುತ್ತಿದ್ದು ಅದಕ್ಕಾಗಿ ದೇಶಾದ್ಯಂತದ ವ್ಯಾಪಾರಿ ಸಂಘಟನೆಗಳು ಮತ್ತು ರೈತ ಸಂಘಟನೆಗಳ ಜೊತೆ ಸಮನ್ವಯ ಸಾಧಿಸಲು ಪ್ರಯತ್ನಿಸುತ್ತಿದ್ದೇವೆ. ಇವಿಎಂ ವಿರುದ್ಧ ಸಮರ್ಥನೀಯ ಸಾಮೂಹಿಕ ಆಂದೋಲನವನ್ನು ಸೃಷ್ಟಿಸುವ ಉದ್ದೇಶದಿಂದ ವಿವಿಧ ರಾಜಕೀಯ ಪಕ್ಷಗಳ ಜೊತೆಗೂ ಮಾತುಕತೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಇವಿಎಂ ವಿರುದ್ಧ ನಾವು ಹೋರಾಡಿ ಜಯ ಗಳಿಸಬೇಕಿದೆ. ಈ ಯಂತ್ರಗಳು ನಮ್ಮ ಪ್ರಜಾಪ್ರಭುತ್ವ, ನಮ್ಮ ದೇಶದ ಮೂಲ ಆಶಯಕ್ಕೇ ಧಕ್ಕೆ ಉಂಟು ಮಾಡುತ್ತದೆ. ಹಾಗಾಗಿ, ಎಲ್ಲ ಪ್ರಜಾಸತಾತ್ಮಕ ಶಕ್ತಿಗಳು ಒಂದಾಗಿ ಇವಿಎಂ ವಂಚನೆಯನ್ನು ಬಯಲಿಗೆಳೆಯಬೇಕು ಮತ್ತು ಈ ಐತಿಹಾಸಿಕ ಆಂದೋಲನದಲ್ಲಿ ಪಾಲ್ಗೊಳ್ಳಬೇಕು ಎಂದು ನಾವು ಮನವಿ ಮಾಡುತ್ತೇವೆ ಎಂದು ಪಾರಿಖ್ ತಿಳಿಸಿದ್ದಾರೆ.

error: Content is protected !! Not allowed copy content from janadhvani.com