ಸೌದಿ ಸೀಝನ್ ಫೆಸ್ಟಿವಲ್: ಕೇವಲ 3 ನಿಮಿಷಗಳಲ್ಲಿ ಟೂರಿಸ್ಟ್ ವಿಸಾ ಲಭ್ಯ

ರಿಯಾದ್: ಸೌದಿ ಅರೇಬಿಯಾಗೆ ವಿನೋದ ಸಂಚಾರಿಗಳನ್ನು ಆಕರ್ಷಿಸುವ ಸಲುವಾಗಿ ಅಲ್ಲಿನ ಸರಕಾರವು ಟೂರಿಸ್ಟ್ ವಿಸಾಗೆ ಅನುಮೋದನೆ ನೀಡಿದೆ. ನಲ್ವತ್ತು ದಿನಗಳ ಜಿದ್ದಾ ಸೀಝನ್ ಫೆಸ್ಟಿವಲ್‌ನಲ್ಲಿ ಭಾಗವಹಿಸಲು ಇಷ್ಟಪಡುವವರಿಗೆ ಮೂರು ನಿಮಿಷಗಳಲ್ಲಿ ವಿಸಾ ನೀಡುವುದಾಗಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಫೆಸ್ಟಿವಲ್‌ನಲ್ಲಿ ಯಾವುದಾದರೂ ಒಂದು ಕಾರ್ಯಕ್ರಮದ ಟಿಕೆಟ್ ಪಡೆದಿರಬೇಕು ಎಂಬುದು ವಿಸಾ ಪಡೆಯಲು ಇರುವ ಏಕೈಕ ಮಾನದಂಡವಾಗಿದೆ. ಹೊಸ ಯೋಜನೆಯು ವಿನೋದ ಸಂಚಾರಿ ವಲಯ ಮತ್ತು ಸೀಝನ್ ಫೆಸ್ಟಿವಲ್ ‌ಗೆ ಲಾಭದಾಯಕವಾಗಿ ಪರಿಣಮಿಸಲಿದೆ ಎಂದು ಸೀಝನ್ ಫೆಸ್ಟಿವಲ್‌ನ ಜನರಲ್ ಸೂಪರ್‌ ವೈಸರ್ ರಾಇದ್ ಅಬೂ ಸಿಂದ ಹೇಳಿದ್ದಾರೆ.

ತೈಲೇತರ ವಲಯದ ಮೂಲಕ ವರಮಾನ ಹೆಚ್ಚಿಸುವ ಸಲುವಾಗಿ ಈ ತೀರ್ಮಾನ ಎಂದವರು ಹೇಳಿದ್ದು, ಟಿಕೆಟ್ ಖರೀದಿಸಲು ಆನ್ ಲೈನ್ ಮೂಲಕ ಅಪೇಕ್ಷೆ ಸಲ್ಲಿಸುವಾಗ ಟೂರಿಸ್ಟ್ ವಿಸಾದ ಲಿಂಕ್ ಅಲ್ಲೇ ಲಭ್ಯವಾಗಲಿದೆ. ವಿಸಾ ಅಪೇಕ್ಷಿತರು ಹೆಸರು ಮತ್ತು ವಿಳಾಸ ನೀಡಿದಾಗ ನಿಮಿಷಗಳ ಒಳಗಾಗಿ ವಿಸಾ ಲಭಿಸಲಿದೆ.

ಹೊಸ ಯೋಜನೆ ಮೂಲಕ ಜಿದ್ದಾಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗಳು ಆಗಮಿಸಲಿದ್ದಾರೆ ಎಂಬುದು ಸರಕಾರದ ನಿರೀಕ್ಷೆಯಾಗಿದೆ. ಶನಿವಾರ ಪ್ರಾರಂಭಗೊಂಡ ಉತ್ಸವವು ಜುಲೈ 18ರ ವರೆಗೆ ಮುಂದುವರಿಯಲಿದೆ. ಕುಟುಂಬ ಸಮೇತವಾಗಿ ವೀಕ್ಷಿಸಬಹುದಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಮೀನು ಹಿಡಿಯುವುದು, ಮುತ್ತುಗಳನ್ನು ಹೆಕ್ಕುವುದು ಮುಂತಾದ ಪಾರಂಪರಿಕ ಜೀವನ ಪದ್ದತಿಯನ್ನು ಆವಿಷ್ಕಾರಗೊಳಿಸುವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯ ನಿರ್ವಾಹಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!