janadhvani

Kannada Online News Paper

ಮಂಗಳೂರು: ವಿಮಾನದಲ್ಲಿ ತಾಂತ್ರಿಕ ದೋಷ-10 ಗಂಟೆ ಟರ್ಮಿನಲ್ ನಲ್ಲೇ ಉಳಿದ ಪ್ರಯಾಣಿಕರು

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಭಾನುವಾರ ರಾತ್ರಿ ಅಬುಧಾಬಿಗೆ ಹೊರಡಬೇಕಿದ್ದ ಏರ್ ಇಂಡಿಯಾ ವಿಮಾನ ತಾಂತ್ರಿಕ ಸಮಸ್ಯೆಯಿಂದ ವಿಮಾನ ನಿಲ್ದಾಣದಲ್ಲೇ ಬಾಕಿಯಾಗಿದ್ದು, ಅದರಲ್ಲಿದ್ದ ಪ್ರಯಾಣಿಕರು ಸುಮಾರು 10 ಗಂಟೆಗಳ ಕಾಲ ಟರ್ಮಿನಲ್‌ನಲ್ಲೇ ಬಾಕಿಯಾದ ಘಟನೆ ನಡೆದಿದೆ.

ಮಂಗಳೂರು- ಅಬುಧಾಬಿ ನಡುವಿನ ಏರ್ ಇಂಡಿಯಾ ವಿಮಾನ ಭಾನುವಾರ ರಾತ್ರಿ 8.45ಕ್ಕೆ ಮಂಗಳೂರು ವಿಮಾನ ನಿಲ್ದಾಣದಿಂದ ಟೇಕಾಫ್ ಆಗಬೇಕಿತ್ತು. ಆದರೆ ತಾಂತ್ರಿಕ ಸಮಸ್ಯೆ ಕಂಡು ಬಂದಿದ್ದರಿಂದ ವಿಮಾನದ ಪೈಲಟ್ ಸಂಸ್ಥೆಗೆ ಮಾಹಿತಿ ನೀಡಿ ಎಂಜಿನಿಯರ್‌ಗಳನ್ನು ಕರೆಸಿದ್ದಾರೆ.

ತಡರಾತ್ರಿ ವರೆಗೂ ದುರಸ್ತಿ ಕಾರ್ಯ ನಡೆಸಿದ ಎಂಜಿನಿಯರ್‌ಗಳು ದುರಸ್ತಿಗೆ ಬೇಕಾದ ಬಿಡಿಭಾಗಗಳು ಇಲ್ಲದ ಕಾರಣಕ್ಕೆ ದುರಸ್ತಿ ನಡೆಸದೆ ಕೈ ಚೆಲ್ಲಿದ್ದಾರೆ. ಬಿಡಿಭಾಗಗಳು ಮುಂಬಯಿ ಮತ್ತು ತಿರುವನಂತಪುರದಲ್ಲಿ ಮಾತ್ರ ಲಭ್ಯವಿದ್ದ ಕಾರಣ ಅಲ್ಲಿಂದ ಬಿಡಿಭಾಗಗಳನ್ನು ತರಿಸಿ ದುರಸ್ತಿ ಮಾಡಿಸಬೇಕಾಗಿತ್ತು.

ಮಧ್ಯರಾತ್ರಿ ವೇಳೆಗೆ ದುರಸ್ತಿಗೆ ಬಿಡಿಭಾಗ ಇಲ್ಲ ಎಂಬ ಮಾಹಿತಿ ಬಂದ ಬಳಿಕ ಅಬುದಾಬಿಗೆ ಪ್ರಯಾಣಿಸಬೇಕಾಗಿದ್ದ 112 ಮಂದಿ ಪ್ರಯಾಣಿಕರಿಗೆ ಬದಲಿ ವ್ಯವಸ್ಥೆ ಅಥವಾ ಹೋಟೆಲ್ ವಾಸ್ತವ್ಯದ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಿರಲಿಲ್ಲ. ಇದರಿಂದಾಗಿ ಪ್ರಯಾಣಿಕರು ಅತಂತ್ರರಾಗಿ ಟರ್ಮಿನಲ್‌ನಲ್ಲೇ ಉಳಿಯುವಂತಾಯಿತು.

ಬದಲೀ ವಿಮಾನದಲ್ಲಿ ವ್ಯವಸ್ಥೆ
ದುಬೈಯಿಂದ ಸೋಮವಾರ ಮುಂಜಾನೆ 4.30ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಏರ್ ಇಂಡಿಯಾ ವಿಮಾನ ಮರಳಿ ಬೆಳಗ್ಗೆ 9.10ಕ್ಕೆ ದುಬೈಗೆ ಪ್ರಯಾಣಿಸಬೇಕಿತ್ತು. ಈ ವಿಮಾನದ ಸಮಯ ಮತ್ತು ಮಾರ್ಗವನ್ನು ಬದಲಿಸಿ ಅಬುದಾಬಿಗೆ ತೆರಳಬೇಕಾದ ಪ್ರಯಾಣಿಕರಿಗೆ ಈ ವಿಮಾನದಲ್ಲಿ ವ್ಯವಸ್ಥೆ ಮಾಡಿಸಿ ಅವರನ್ನು ಕಳುಹಿಸಿಕೊಡಲಾಯಿತು.
ಬೆಳಗ್ಗೆ 6.30ರ ಸುಮಾರಿಗೆ ಬಾಕಿಯಾಗಿದ್ದ ಪ್ರಯಾಣಿಕರು ಅಬುದಾಬಿಗೆ ಪ್ರಯಾಣಿಸಿದರು. ಬೆಳಗ್ಗೆ 9.10ಕ್ಕೆ ದುಬೈಗೆ ಪ್ರಯಾಣಿಸಲಿದ್ದ ಪ್ರಯಾಣಿಕರಿಗೆ ಮೊದಲೇ ವಿಮಾನ ಅಲಭ್ಯತೆ ಬಗ್ಗೆ ಮಾಹಿತಿ ನೀಡಲಾಗಿತ್ತು. ತಾಂತ್ರಿಕ ದೋಷ ಕಾಣಿಸಿಕೊಂಡ ವಿಮಾನ ದುರಸ್ತಿ ಆದ ಬಳಿಕ ಮಧ್ಯಾಹ್ನ 2.30ಕ್ಕೆ
ದುಬೈ ಪ್ರಯಾಣಿಕರನ್ನು ಆ ವಿಮಾನದಲ್ಲಿ ಕಳುಹಿಸಿಕೊಡಲಾಗಿದೆ.
ಸಂವಹನ ಕೊರತೆಯಿಂದಾಗಿ ರಾತ್ರಿಯಿಡೀ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ಉಳಿಯುವಂತಾಗಿತ್ತು.

error: Content is protected !! Not allowed copy content from janadhvani.com