ಪ್ರಧಾನಿ ಮೋದಿಯನ್ನು ಹೊಗಳಿದ ಅಬ್ದುಲ್ಲಕುಟ್ಟಿ ಪಕ್ಷದಿಂದ ಉಚ್ಛಾಟನೆ

ತಿರುವನಂತಪುರಂ(ಜೂ. 03): ಪ್ರಧಾನಿ ನರೇಂದ್ರ ಮೋದಿ ಅವರನ್ನ ಹೊಗಳಿದ ಕಾರಣಕ್ಕೆ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಂಸದ ಎ.ಪಿ. ಅಬ್ದುಲ್ಲಾಕುಟ್ಟಿ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ.

ಇದೇ ಕಾರಣಕ್ಕೆ ಈ ಮುಂಚೆ ಅಬ್ದುಲ್ಲಾ ಕುಟ್ಟಿ ಅವರು ಸಿಪಿಐಎಂ ಪಕ್ಷದಿಂದಲೂ ಉಚ್ಛಾಟನೆಗೊಂಡಿದ್ದರು. ಆದರೂ ಕೂಡ ಅಬ್ದುಲ್ಲಾ ಕುಟ್ಟಿ ಅವರು ತಮ್ಮ ಮೋದಿ ಮೇಲಿನ ಅಭಿಮಾನವನ್ನು ಮುಚ್ಚಿಟ್ಟುಕೊಳ್ಳಲು ನಿರಾಕರಿಸಿದ್ದರು. ಪದೇ ಪದೇ ಮೋದಿ ಪರವಾಗಿ ಅವರು ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದ ಹಿನ್ನೆಲೆಯಲ್ಲಿ ಕೇರಳದ ಕಾಂಗ್ರೆಸ್ ಘಟಕವು ಶಿಸ್ತಿನ ಕ್ರಮ ಕೈಗೊಂಡು ಅಬ್ದುಲ್ಲಾ ಅವರನ್ನು ಪಕ್ಷದಿಂದ ಉಚ್ಛಾಟಿಸಿದೆ.

ನರೇಂದ್ರ ಮೋದಿ ಅವರು ಗಾಂಧಿ ತತ್ವ ಪಾಲನೆ ಮಾಡುತ್ತಿದ್ದಾರೆಂದು ಹೇಳಿ ಅಬ್ದುಲ್ಲಾ ತಮ್ಮ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದರು. “ನರೇಂದ್ರ ಮೋದಿ ಅವರು ಯಾಕಿಷ್ಟು ಜನಪ್ರಿಯತೆ ಗಳಿಸಿದ್ದಾರೆಂಬುದಕ್ಕೆ ಒಂದು ವಿಶೇಷ ಕಾರಣವಿದೆ. ಮೋದಿ ಅವರು ತಮ್ಮ ಆಡಳಿತದಲ್ಲಿ ಗಾಂಧಿ ತತ್ವವನ್ನು ಅಳವಡಿಸಿದ್ದಾರೆ” ಎಂದು ಅವರು ಈ ಪೋಸ್ಟ್ನಲ್ಲಿ ಬರೆದುಕೊಂಡಿದ್ದರು.

ಈ ವಿಚಾರವನ್ನು ಗಂಭಿರವಾಗಿ ಪರಿಗಣಿಸಿದ ಕೇರಳ ಕಾಂಗ್ರೆಸ್, ಒಂದು ಸಮಿತಿ ರಚಿಸಿ ತನಿಖೆ ನಡೆಸಿತು. ಸಮಿತಿಯ ಶಿಫಾರಸಿನಂತೆ ಅವರನ್ನು ಕಾಂಗ್ರೆಸ್ನಿಂದ ಉಚ್ಛಾಟಿಸಲಾಗಿದೆ.

ಪಕ್ಷದ ಈ ಕ್ರಮದ ಬಗ್ಗೆ ಪ್ರತಿಕ್ರಿಯಿಸಿದರು ಅಬ್ದುಲ್ಲಾ ಕುಟ್ಟಿ, “ಮೋದಿ ಅವರನ್ನು ಅವಹೇಳನ ಮಾಡುವ ಮೂಲಕ ಕೇರಳದ ಬಗ್ಗೆ ತಪ್ಪು ಕಲ್ಪನೆಗೆ ಆಸ್ಪದ ನೀಡಬಾರದು” ಎಂದು ಮತ್ತೆ ತಮ್ಮ ವಾದವನ್ನು ಸಮರ್ಥಿಸಿಕೊಂಡಿದ್ದಾರೆ.

ಕಣ್ಣೂರು ಜಿಲ್ಲೆಯವರಾದ ಅಬ್ದುಲ್ಲಾಕುಟ್ಟಿ ಮೂಲತಃ ಎಸ್ಎಫ್ಐ ಸಂಘಟನೆಯ ಮೂಲಕ ರಾಜಕಾರಣಕ್ಕೆ ಬಂದವರು. ಸಿಪಿಐಎಂ ಪಕ್ಷ ಸೇರಿದ ಅವರು 1999ರ ಲೋಕಸಭಾ ಚುನಾವಣೆಯಲ್ಲಿ ಹಾಲಿ ಕಾಂಗ್ರೆಸ್ ಸಂಸದ ಮುಲ್ಲಪ್ಪಳ್ಳಿ ರಾಮಚಂದ್ರನ್ ವಿರುದ್ಧ ಜಯಭೇರಿ ಭಾರಿಸಿದರು. ಆ ದೊಡ್ಡ ಗೆಲುವಿನ ಬಳಿಕ ಅಬ್ದುಲ್ಲಾ ಕುಟ್ಟಿ ಅವರು ಅಲ್ಭುದಕುಟ್ಟಿ(ಅದ್ಭುತ ಕುಟ್ಟಿ) ಎಂದು ಖ್ಯಾತರಾದರು. ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗೊಮ್ಮೆ ಅಬ್ದುಲ್ಲಾಕುಟ್ಟಿ ಅವರು ಗುಜರಾತ್ ಮಾದರಿಯ ಅಭಿವೃದ್ಧಿಯನ್ನು ಮೆಚ್ಚಿಕೊಂಡು ಅಭಿಪ್ರಾಯ ವ್ಯಕ್ತಪಡಿಸಿದ್ದರು.

“ಮೋದಿ ಅವರ ರಾಜಕೀಯ ನೀತಿ ನಮಗೆ ಒಪ್ಪಿಗೆ ಆಗದೇ ಇರಬಹುದು. ಆದರೆ, ಅವರು ತಮ್ಮ ರಾಜ್ಯಕ್ಕೆ ತಂದ ಅಭಿವೃದ್ಧಿ ಕ್ರಮಗಳು ಅನುಕರಣೀಯವಾಗಿರುವಂಥವು” ಎಂದು 2009ರಲ್ಲೇ ದುಬೈನ ಮಲಯಾಳಂ ಟಿವಿ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಅಬ್ದುಲ್ಲಾಕುಟ್ಟಿ ಹೇಳಿದ್ದರು.

ಅದಾದ ಬಳಿಕ ಸಿಐಎ(ಎಂ) ಪಕ್ಷವು ಅವರನ್ನು ಉಚ್ಛಾಟಿಸಿತು. ನಂತರ ಅವರು ಕಾಂಗ್ರೆಸ್ ಸೇರ್ಪಡೆಯಾದರು. ತರುವಾಯ ಕಣ್ಣೂರು ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಅವರು ಜಯಭೇರಿ ಭಾರಿಸಿದರು. 2011ರ ವಿಧಾನಸಭಾ ಚುನಾವಣೆಯಲ್ಲಿ ಅವರು ಸ್ಪರ್ಧಿಸಿ ಜಯಶೀಲರಾದರು. ಆದರೆ, 2016ರಲ್ಲಿ ಕಮ್ಯೂನಿಸ್ಟ್ ಭದ್ರಕೋಟೆ ತಲಶೇರಿಯಲ್ಲಿ ಅವರು ಗೆಲ್ಲಲು ವಿಫಲರಾದರು. ಆ ನಂತರದಿಂದ ಅವರು ಕಾಂಗ್ರೆಸ್ನೊಳಗೆ ಅಪ್ರಸ್ತುತವಾಗಿ ಉಳಿದುಕೊಂಡಿದ್ದಾರೆ.

ನರೇಂದ್ರ ಮೋದಿ ಅವರನ್ನು ಪದೇ ಪದೇ ಹೊಗಳುವ ಅಬ್ದುಲ್ಲಾ ಕುಟ್ಟಿ ಅವರು ಬಿಜೆಪಿ ಸೇರುವ ಸಾಧ್ಯತೆ ಇಲ್ಲದಿಲ್ಲ. ತಾವಿನ್ನೂ ಬಿಜೆಪಿ ಸೇರುವ ಯೋಚನೆ ಮಾಡಿಲ್ಲ ಎಂದು ಅವರು ಹೇಳಿದರೂ ಕೇರಳದ ಬಿಜೆಪಿ ನಾಯಕರು ಈಗಾಗಲೇ ಅಬ್ದುಲ್ಲಾಕುಟ್ಟಿ ಅವರನ್ನು ಸಂಪರ್ಕಿಸಿ ಪಕ್ಷಕ್ಕೆ ಕರೆತರುವ ಪ್ರಯತ್ನ ಮಾಡುತ್ತಿದ್ದಾರೆ. ಅಬ್ದುಲ್ಲಾ ಅವರು ಬಿಜೆಪಿ ಸೇರದೇ ಬೇರೆ ವಿಧಿಯಿಲ್ಲ. ಬಿಜೆಪಿಗೂ ಈಗ ಕೇರಳದಲ್ಲಿ ಬೆಳೆಯಲು ಅಬ್ದುಲ್ಲಾ ಅವರಂಥ ನಾಯಕರ ಅಗತ್ಯವಿದೆ.

Leave a Reply

Your email address will not be published. Required fields are marked *

error: Content is protected !!