janadhvani

Kannada Online News Paper

‘ನಾವು ಇಂಡಿಯನ್ಸ್‌, ‘ಹಿಂದಿ’ಯನ್ಸ್‌ ಅಲ್ಲ’- ತ್ರಿಭಾಷಾ ಶಿಕ್ಷಣ ನೀತಿಯ ವಿರುದ್ಧ ಆಕ್ರೋಶ

ಚೆನ್ನೈ: ಹಿಂದಿ ಭಾಷೆ ಮಾತನಾಡದ ರಾಜ್ಯಗಳಲ್ಲಿ ಸ್ಥಳೀಯ ಭಾಷೆ ಮತ್ತು ಇಂಗ್ಲಿಷ್‌ನ ಜತೆಗೆ ಹಿಂದಿಯನ್ನು ಕಡ್ಡಾಯವಾಗಿ ಬೋಧಿಸಬೇಕು ಎಂಬ ರಾಷ್ಟ್ರೀಯ ಶಿಕ್ಷಣ ನೀತಿಯ ನೂತನ ಕರಡು ತಮಿಳುನಾಡಿನಲ್ಲಿ ಭಾರಿ ವಿರೋಧಕ್ಕೆ ಗುರಿಯಾಗಿದೆ.

ಸಾಮಾಜಿಕ ತಾಣ ಟ್ವಿಟರ್‌, ಫೇಸ್‌ಬುಕ್‌ಗಳಲ್ಲಿ #StopHindiImposition, #TNAgainstHindiImposition ಹ್ಯಾಷ್ ಟ್ಯಾಗ್‌ ಅಡಿಯಲ್ಲಿ ಹಿಂದಿ ಹೇರಿಕೆ ವಿರುದ್ಧ ಬಹುದೊಡ್ಡ ಕೂಗು ಎದ್ದಿದೆ.

ಇಸ್ರೋದ ಮಾಜಿ ಮುಖ್ಯಸ್ಥರಾದ ಕೆ. ಕಸ್ತೂರಿ ರಂಗನ್‌ ಅವರ ಸಮಿತಿಯು ಹಿಂದಿಯೇತರ ರಾಜ್ಯಗಳಲ್ಲಿ ಸ್ಥಳೀಯ ಭಾಷೆ, ಇಂಗ್ಲಿಷ್‌ನ ಜೊತೆಗೆ ಹಿಂದಿಯನ್ನು ಕಡ್ಡಾಯವಾಗಿ ಬೋಧಿಸಬೇಕು ಎಂದೂ, ಹಿಂದಿ ಭಾಷಿಕ ರಾಜ್ಯಗಳಲ್ಲಿ ಹಿಂದಿ, ಇಂಗ್ಲಿಷ್‌ನ ಜೊತೆಗೆ ಆಧುನಿಕ ಭಾರತದ ಯಾವುದಾದರೂ ಒಂದು ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಸಿದ್ಧಪಡಿಸಿದೆ. ಈ ಕರಡು ಶುಕ್ರವಾರವಷ್ಟೇ ಬಿಡುಗಡೆಗೊಂಡಿತ್ತು.

ಭಾಷೆ ಮತ್ತು ಗಡಿ ವಿಚಾರದಲ್ಲಿ ಸದಾ ಜಾಗೃತವಾಗಿರುವ ತಮಿಳುನಾಡಿನಲ್ಲಿ ನೂತನ ಕರಡು ಕೋಲಾಹಲವನ್ನೇ ಸೃಷ್ಟಿ ಮಾಡಿದ್ದು, ನಾವು ಇಂಡಿಯನ್ಸ್‌, ‘ಹಿಂದಿ’ಯನ್ಸ್‌ ಅಲ್ಲ ಎಂಬ ಘೋಷ ವಾಕ್ಯಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿವೆ. ರಾಜಕೀಯ ನಾಯಕರು ಕೇಂದ್ರದ ವಿರುದ್ಧ ತಿರುಗಿಬಿದ್ದಿದ್ದಾರೆ.

‘ಬಿಜೆಪಿ ಇಂಥ ಕೃತ್ಯಗಳಿಗೆ ಕೈ ಹಾಕಿದ್ದೇ ಆದರೆ, ಅದು ಬಹುದೊಡ್ಡ ಹಾನಿಯನ್ನು ಮುಂದೆ ಎದುರಿಸಬೇಕಾಗುತ್ತದೆ,’ ಎಂದು ಡಿಎಂಕೆ ನಾಯಕ ಎಂ.ಕೆ ಸ್ಟಾಲಿನ್‌ ಹೇಳಿದ್ಧಾರೆ.

ಡಿಎಂಕೆ ನಾಯಕಿ ಕನಿಮೋಳಿ, ‘ ಹಿಂದಿಯನ್ನು ಹೇರುವ ಇಂಥ ತ್ರಿಭಾಷಾ ಸೂತ್ರಗಳನ್ನು ನಾವು ವಿರೋಧಿಸುತ್ತೇವೆ,’ ಎಂದಿದ್ದಾರೆ.

ರಾಜಯಕೀಯಕ್ಕೆ ಧುಮುಕಿರುವ ನಟ ಕಮಲ್‌ ಹಾಸನ್‌ ಮಾತನಾಡಿ, ‘ಯಾವುದೇ ಭಾಷೆಗಳನ್ನು ಯಾರೂ ಹೇರಬಾರದು. ಇಷ್ಟವಿದ್ದವರು, ಇಷ್ಟಪಟ್ಟ ಭಾಷೆಗಳನ್ನು ಕಲಿಯಲಿ,’ ಎಂದು ಹೇಳಿದ್ದಾರೆ.

‘ಇಂಥ ಕರಡು ನೀತಿಗಳು ಭಾಷಾ ಯುದ್ಧಕ್ಕೆ ಕಾರಣವಾಗಲಿವೆ,’ ಎಂದು ಎಂಡಿಎಂಕೆಯ ನಾಯಕ ವೈಕೋ ಎಚ್ಚರಿಸಿದ್ಧಾರೆ.

‘ಭಾರತದ ಬಹುಸಂಸ್ಕೃತಿಯನ್ನು ಹಾಳು ಮಾಡುವ ಪ್ರಯತ್ನವಿದು. ಇಂಥ ನೀತಿಗಳು ಹಿಂದಿ ಭಾಷಿಕರಲ್ಲದವರು ಎರಡನೇ ದರ್ಜೆಯ ಪ್ರಜೆಗಳನ್ನಾಗಿ ಮಾಡುತ್ತದೆ,’ ಎಂದು ಎಎಂಎಂಕೆ ಪಕ್ಷದ ಟಿಟಿವಿ ದಿನಕರ್‌ ಹೇಳಿದ್ದಾರೆ.

ಒಟ್ಟಾರೆ, ತ್ರಿಭಾಷಾ ಸೂತ್ರ ಪ್ರಸ್ತಾಪಿಸಿ ಕಸ್ತೂರಿ ರಂಗನ್‌ ಶಿಫಾರಸು ಮಾಡಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ತಮಿಳುನಾಡಿನಲ್ಲಿ ರಾಜಕಾರಣವನ್ನೂ ಮೀರಿ ಎಲ್ಲರಿಂದಲೂ ವಿರೋಧಕ್ಕೆ ಗುರಿಯಾಗಿದೆ.

error: Content is protected !! Not allowed copy content from janadhvani.com