janadhvani

Kannada Online News Paper

ಮೋದಿಯ ಸಂಪುಟದಲ್ಲಿ ಕ್ರಿಮಿನಲ್ ಮತ್ತು ಕೋಟ್ಯಾದಿಪತಿ ಸಚಿವರ ಸಂಖ್ಯೆ ಏರಿಕೆ

ನವದೆಹಲಿ: ಪ್ರಧಾನ ಮಂತ್ರಿ ಮೋದಿಯವರ ನೂತನ ಸಚಿವ ಸಂಪುಟದಲ್ಲಿನ 22 ಸಚಿವರು ತಮ್ಮ ವಿರುದ್ದ ಕ್ರಿಮಿನಲ್ ಪ್ರಕರಣಗಳಿವೆ ಎಂದು ಘೋಷಿಸಿಕೊಂಡಿದ್ದಾರೆ ಎಂದು ಚುನಾವಣೆ ವಾಚ್ ಡಾಗ್ ಎಂದು ಕರೆಯಲಾಗುವ ಅಸೋಸಿಯೇಷನ್ ಫಾರ್ ಡೆಮೋಕ್ರಾಟಿಕ್ ರಿಫಾರ್ಮ್ಸ್ (ಎಡಿಆರ್) ಎನ್ನುವ ಸಂಸ್ಥೆ ತನ್ನ ವರದಿಯಲ್ಲಿ ಹೇಳಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ 17ನೇ ಲೋಕಸಭೆ ಮತ್ತು ಪ್ರಸ್ತುತ ರಾಜ್ಯಸಭೆಯಿಂದ ಆಯ್ಕೆಯಾಗಿರುವ 58 ಮಂತ್ರಿಗಳಲ್ಲಿ 56 ಮಂತ್ರಿಗಳ ಅಫಿಡವಿಟ್ಗಳನ್ನು ವಿಶ್ಲೇಷಿಸಿದ ನಂತರ ಎಡಿಆರ್ ತನ್ನ ವರದಿಯನ್ನು ಬಿಡುಗಡೆ ಮಾಡಿದೆ. ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ ಹಾಗೂ ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ,ಮತ್ತು ವಿದೇಶಾಂಗ ಸಚಿವ ಸುಬ್ರಹ್ಮಣ್ಯಂ ಜೈಶಂಕರ್ ಅವರು ಎರಡು ಸದನ ಸದಸ್ಯರಲ್ಲದ ಕಾರಣ ಅವರನ್ನು ವರದಿಯಲ್ಲಿ ಪರಿಗಣಿಸಿಲ್ಲ ಎಂದು ಹೇಳಲಾಗಿದೆ.

ಒಟ್ಟು 56 ಮಂತ್ರಿಗಳ ಪೈಕಿ 51 ಮಂತ್ರಿಗಳು ಕೋಟ್ಯಾದಿಪತಿಗಳು ಎಂದು ಹೇಳಲಾಗಿದೆ. ಇದರಲ್ಲಿ ಪ್ರತಿ ಸಚಿವರ ಸರಾಸರಿ ಆಸ್ತಿ 14.72 ಕೋಟಿ ರೂ. ಎಂದು ತಿಳಿದುಬಂದಿದೆ. ಹರ್ಸಿಮ್ರತ್ ಕೌರ್ ಬಾದಲ್, ಪಿಯುಶ್ ಗೋಯಲ್, ರಾವ್ ಇಂದರ್ಜಿತ್ ಸಿಂಗ್ ಮತ್ತು ಅಮಿತ್ ಶಾ ಅವರು ತಮ್ಮ ಆಸ್ತಿ ಮೌಲ್ಯ 40 ಕೋಟಿಗೂ ಅಧಿಕ ಎಂದು ಘೋಷಿಸಿದ್ದಾರೆ. ಇನ್ನು ಪ್ರತಾಪ್ ಚಂದ್ರ ಸಾರಂಗಿ, ಕೈಲಾಶ್ ಚೌಧರಿ, ವಿ. ಮುರಳಿಧರನ್, ರಾಮೇಶ್ವರ್ ತೆಲಿ ಮತ್ತು ದೇಬಶ್ರೀ ಚೌಧರಿ ಅವರು 1 ಕೋಟಿ ರೂ. ಗಿಂತ ಕಡಿಮೆ ಆಸ್ತಿ ಮೌಲ್ಯವನ್ನು ಹೊಂದಿದ ಸಚಿವರಾಗಿದ್ದಾರೆ ಎಂದು ವರದಿ ತಿಳಿಸಿದೆ.

ಕ್ರಿಮಿನಲ್ ಮೊಕದ್ದಮೆಗಳನ್ನು ಹೊಂದಿರುವ ಮಂತ್ರಿಗಳಿಗೆ ಸಂಬಂಧಿಸಿದಂತೆ ಒಟ್ಟು 22 ಮಂತ್ರಿಗಳು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿದ್ದಾರೆ, 16 ಮಂತ್ರಿಗಳು ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿದ್ದಾರೆ. ಹತ್ಯೆಗೆ ಪ್ರಯತ್ನಿಸುವ ಪ್ರಕರಣಗಳು, ಕೋಮುಗಲಭೆ, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಇತ್ಯಾದಿ ಕ್ರಿಮಿನಲ್ ಪ್ರಕರಣಗಳಿವೆ ಎಂದು ವರದಿ ಹೇಳಿದೆ. ಮಹಾರಾಷ್ಟ್ರದ ಬಿಜೆಪಿ ರಾಜ್ಯಸಭೆ ಸದಸ್ಯ ವಿ ಮುರಳಿಧರನ್ ಕೊಲೆ ಯತ್ನಕ್ಕೆ ಸಂಬಂಧಿಸಿದ ಪ್ರಕರಣವನ್ನು ಘೋಷಿಸಿದ್ದಾರೆ.

2014 ರ ಲೋಕಸಭೆಯ ಮಾಹಿತಿಯೊಂದಿಗೆ ಹೋಲಿಸಿದಾಗ, ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ಮಂತ್ರಿಗಳ ಸಂಖ್ಯೆಯು ಶೇಕಡಾ 8 ಕ್ಕೆ ಏರಿದೆ ಮತ್ತು ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ ಸಚಿವರ ಸಂಖ್ಯೆ ಶೇ 12ಕ್ಕೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.

error: Content is protected !! Not allowed copy content from janadhvani.com