janadhvani

Kannada Online News Paper

ಒಂದು ಲಕ್ಷಕ್ಕೆ 15 ದಿನದಲ್ಲಿ 2 ಲಕ್ಷ ನೀಡುವುದಾಗಿ ವಂಚನೆ

ಬೆಂಗಳೂರು: ಹಣ ದುಪ್ಪಟ್ಟು ಮಾಡಿಕೊಡುವುದಾಗಿ ಜನರಿಂದ ಹಣ ಕಟ್ಟಿಸಿಕೊಂಡು ನಂತರ ಪರಾರಿಯಾಗುವ ಘಟನೆಗಳು ದಿನನಿತ್ಯ ವರದಿಯಾಗುತ್ತಿದ್ದರು ಜನರು ಮಾತ್ರ ಮತ್ತೆ ಮತ್ತೆ ಅಂತಹ ವಂಚನೆಗೆ ಬಲಿಪಶುಗಳಾಗುತ್ತಲೇ ಇದ್ದಾರೆ. ಇದೀಗ ಬೆಂಗಳೂರಿನಲ್ಲೂ ಅಂತಹದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

ಒಂದು ಲಕ್ಷ ಹೂಡಿಕೆ ಮಾಡಿದರೆ ಹದಿನೈದು ದಿನದಲ್ಲಿ 2 ಲಕ್ಷ ನೀಡುವುದಾಗಿ ಆರ್ಟಿ ನಗರದ ಎಜಿಐಎಂ ಎಂಬ ಕಂಪನಿ ಹೇಳಿದೆ. ಹಣ ದುಪ್ಪಟ್ಟು ಸಿಗುವುದಾಗಿ ಆಸೆಗೆ ಬಿದ್ದ ಪುರುಷೋತ್ತಮ್ ಎಂಬುವವರು 9 ಲಕ್ಷ ಹಣ ಹೂಡಿದ್ದಾರೆ. ಅದೇ ರೀತಿ ತಮ್ಮ ಗೆಳೆಯರನ್ನು ಸೇರಿಸಿದರೆ ಶೇ.5ರಷ್ಟು ಹೆಚ್ಚುವರಿ ಹಣ ನೀಡುವುದಾಗಿಯೂ ಆಮಿಷ ಒಡ್ಡಲಾಗಿದೆ. ಅದರಂತೆ ತನ್ನ ಗೆಳೆಯರಿಗೆ ಹಣ ಹೂಡಿಕೆ ಮಾಡುವಂತೆ ಪುರುಷೋತ್ತಮ್ ಸೂಚಿಸಿದ್ದರು. ನೂರಾರು ಮಂದಿ ಈ ಬೋಗಸ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದರು. ಹಣ ಪಡೆದ ಬಳಿಕ ಹಣ ನೀಡದೆ ಸತಾಯಿಸಿದ್ದಾರೆ.

ಇದರಿಂದ ಕಂಗಾಲಾದ ಗ್ರಾಹಕರು ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು, ತನಿಖೆ ನಡೆಸಿ ಎಜಿಐಎಂನ ಚಂದೇಶ್ ಹಾಗೂ ಆತನ ತಂದೆಯನ್ನು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಪ್ರವೀಣ್ ನಾಪತ್ತೆಯಾಗಿದ್ದು, ಆತನ ಬಂಧನಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ.

error: Content is protected !! Not allowed copy content from janadhvani.com