janadhvani

Kannada Online News Paper

ಜೂನ್‌ 1ರ ಬಳಿಕ ಅಚ್ಛೇ ದಿನಗಳು ಬರುವುದು ಖಚಿತ- ಸಿ.ಎಂ.ಇಬ್ರಾಹಿಂ

ಮಂಗಳೂರು: ಈ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೋಲು ಕಾಣಲಿದ್ದು, ಮೈತ್ರಿ ಪಕ್ಷಗಳ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಜೂನ್‌ 1ರ ಬಳಿಕ ದೇಶದ ಜನರಿಗೆ ಅಚ್ಛೇ ದಿನಗಳು ಬರುವುದು ಖಚಿತ ಎಂದು ಕೆಪಿಸಿಸಿ ಮಾಧ್ಯಮ ಪ್ರಚಾರ ಸಮಿತಿ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಸಮಿತಿ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಚ್ಛೇ ದಿನ ತರವುದಾಗಿ ಹೇಳಿ ಅಧಿಕಾರಕ್ಕೆ ಬಂದಿದ್ದ ನರೇಂದ್ರ ಮೋದಿ ಏನನ್ನೂ ಮಾಡಿಲ್ಲ. ಒಳ್ಳೆಯ ದಿನಗಳನ್ನು ನಿರೀಕ್ಷಿಸಿದ್ದ ಜನರಿಗೆ ನಿರಾಸೆಯಾಗಿದೆ. ಈ ಬಾರಿ ಬಿಜೆಪಿಯನ್ನು ಜನರು ತಿರಸ್ಕರಿಸಲಿದ್ದಾರೆ’ ಎಂದರು.

70 ವರ್ಷಗಳ ಇತಿಹಾಸದಲ್ಲಿ ಇದು ಭಾರತಕ್ಕೆ ಐತಿಹಾಸಿಕ ಚುನಾವಣೆ. ಮುಂದೆ ಚುನಾವಣಾ ವ್ಯವಸ್ಥೆ ಇರಬೇಕೆ? ಬೇಡವೇ? ದೇಶದಲ್ಲಿ ಸಂವಿಧಾನ ಇರಬೇಕೆ? ಬೇಡವೇ? ಎಂಬುದನ್ನು ಈ ಚುನಾವಣೆ ನಿರ್ಧರಿಸಲಿದೆ. ಬಿಜೆಪಿ ಮತ್ತು ಮೋದಿಯನ್ನು ವಿರೋಧಿಸುವ ಎಲ್ಲರಿಗೂ ದೇಶದ್ರೋಹಿಗಳ ಪಟ್ಟ ಕಟ್ಟುವ ಪ್ರಯತ್ನಕ್ಕೆ ಈ ಚುನಾವಣೆ ತೆರೆ ಎಳೆಯಲಿದೆ ಎಂದು ಹೇಳಿದರು.

ಭಾರತ ಎಲ್ಲ ಕಾಲಕ್ಕೂ ಬಲಿಷ್ಠ ರಾಷ್ಟ್ರವಾಗಿಯೇ ಇತ್ತು ಮತ್ತು ಇದೆ. ಆದರೆ, 2014ರ ಲೋಕಸಭಾ ಚುನಾವಣೆಯಲ್ಲಿ ಸುಳ್ಳನ್ನು ಬಿತ್ತಿ ಬಿಜೆಪಿ ಗೆಲುವು ಪಡೆಯಿತು. ಜವಾಹರ ಲಾಲ್‌ ನೆಹರೂ, ಲಾಲ್‌ ಬಹದ್ದೂರ್‌ ಶಾಸ್ತ್ರಿಯವರ ಕಾಲದಲ್ಲೂ ದೇಶ ಯುದ್ಧಗಳನ್ನು ಎದುರಿಸಿ, ಜಯ ಸಾಧಿಸಿತ್ತು. ಇಂದಿರಾ ಗಾಂಧಿಯವರು ಪಾಕಿಸ್ತಾನವನ್ನೇ ಹೋಳು ಮಾಡಿದ್ದರು. ಮೋದಿ ಕಾಲದಲ್ಲಿ ಅಂತಹ ಯಾವ ಯುದ್ಧಗಳೂ ಆಗಿಲ್ಲ. ಸೈನಿಕರು ನಡೆಸಿದ ಹೋರಾಟದ ಕೀರ್ತಿಯನ್ನು ತನ್ನದೆಂದು ಪ್ರಧಾನಿ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.

ಪಾಕಿಸ್ತಾನದ ಪ್ರೀತಿ:

ಬಿಜೆಪಿ ಮತ್ತು ಮೋದಿ ಮತ್ತೆ ಅಧಿಕಾರಕ್ಕೆ ಬರುವುದು ಭಾರತಕ್ಕಿಂತಲೂ ಪಾಕಿಸ್ತಾನಕ್ಕೆ ಮುಖ್ಯವಾಗಿದೆ. ಹಿಂದೆ ಯಾವತ್ತೂ ಇಂತಹ ಸ್ಥಿತಿ ನಿರ್ಮಾಣವಾಗಿರಲಿಲ್ಲ. ದೇಶದ ಸೈನಿಕರನ್ನು ಪಾಕಿಸ್ತಾನ ಹತ್ಯೆ ಮಾಡುತ್ತಿರುವಾಗಲೇ ಮೋದಿ ಆ ರಾಷ್ಟ್ರದ ಪ್ರಧಾನಿಯ ಮೊಮ್ಮಗಳ ಜನ್ಮದಿನ ಆಚರಿಸಲು ಹೋಗಿದ್ದರು ಎಂದು ಟೀಕಸಿದರು.

ಮನಮೋಹನ್‌ ಸಿಂಗ್‌ ದುರ್ಬಲ ಪ್ರಧಾನಿ ಎಂದು ಟೀಕಿಸಲಾಗುತ್ತಿತ್ತು. ಅವರ ಕಾಲದಲ್ಲಿ ಡಾಲರ್‌ ಮೌಲ್ಯ ₹ 55 ಇತ್ತು. 56 ಇಂಚಿನ ಎದೆಯ ಪ್ರಧಾನಿ ಕಾಲದಲ್ಲಿ ಅದು ₹ 70ಕ್ಕೆ ಏರಿದೆ. ಎಲ್‌ಪಿಜಿ ಸಿಲಿಂಡರ್ ಬೆಲೆ ₹ 400ರಿಂದ ₹ 1,000 ತಲುಪಿದೆ. ಇದೇ ಮೋದಿಯ ಸಾಧನೆ ಎಂದರು.

ಮುಸ್ಲಿಮರ ವಿರುದ್ಧ ಬಿಜೆಪಿ ತಪ್ಪು ಭಾವನೆ ಬಿತ್ತುತ್ತಿದೆ. ಮೋದಿ ಮತ್ತು ಬಿಜೆಪಿ ಮುಸ್ಲಿಮರಿಗೆ ಏನನ್ನೂ ಕೊಡುವುದು ಬೇಡ. ಮುಸ್ಲಿಮರಿಗೆ ತೊಂದರೆ ಕೊಡದಿದ್ದರೆ ಸಾಕು. ಈ ನೆಲದಲ್ಲಿ ಎಲ್ಲ ಧರ್ಮದ ಜನರು ಸಹಬಾಳ್ವೆ ನಡೆಸಲು ಅವಕಾಶ ಕೊಡಲಿ ಎಂದು ಹೇಳಿದರು.

ಮುಖವಿಲ್ಲದ ಅಭ್ಯರ್ಥಿ:

ನಳಿನ್‌ ಕುಮಾರ್‌ ಕಟೀಲ್‌ ಎರಡು ಬಾರಿ ಸಂಸದರಾಗಿ ಜಿಲ್ಲೆಗೆ ಯಾವ ಕೆಲಸವನ್ನೂ ಮಾಡಿಲ್ಲ. ಅವರು ಈಗ ಮುಖವಿಲ್ಲದ ಅಭ್ಯರ್ಥಿ. ಇಲ್ಲಿನ ವಿಜಯ ಬ್ಯಾಂಕ್‌ ಅನ್ನು ಗುಜರಾತಿನ ಬರೋಡಾ ಬ್ಯಾಂಕ್‌ನಲ್ಲಿ ವಿಲೀನ ಮಾಡುವಾಗ ತುಟಿ ಪಿಟಕ್ಕೆನ್ನದೆ ಕುಳಿತಿದ್ದರು. ಈ ಬಾರಿ ಜನರು ಅವರಿಗೆ ಸೋಲಿನ ರುಚಿ ತೋರಿಸಲಿದ್ದಾರೆ ಎಂದರು.

ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಕೆ.ಹರೀಶ್‌ ಕುಮಾರ್, ವಿಧಾನ ಪರಿಷತ್‌ ಸದಸ್ಯ ಐವನ್ ಡಿಸೋಜ, ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಶಾಲೆಟ್ ಪಿಂಟೊ, ಮುಖಂಡರಾದ ಕೋಡಿಜಾಲ್‌ ಇಬ್ರಾಹಿಂ, ವಿಶ್ವಾಸ್‌ಕುಮಾರ್‌ ದಾಸ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

error: Content is protected !! Not allowed copy content from janadhvani.com