ಚಾಮರಾಜನಗರ: ಬಿಜೆಪಿ ಶಾಸಕ ಸಿ.ಟಿ.ರವಿ ದೇಶದ ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡಿರುವುದು ಖಂಡನೀಯ. ಅವರು ಹೆಣ್ಣು ಮಕ್ಕಳನ್ನು ಕ್ಷಮೆ ಕೇಳಲೂ ಅರ್ಹರಲ್ಲ. ಅಂತಹ ವ್ಯಕ್ತಿ ನಮ್ಮ ಪಕ್ಷದಲ್ಲಿದ್ದರೆ ಉಚ್ಚಾಟನೆ ಮಾಡುತ್ತಿದ್ದೆವು. ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡಿರುವ ಸಿ.ಟಿ.ರವಿಯ ನಾಲಗೆಯನ್ನು ಸೀಳಬೇಕು. ಬಿಜೆಪಿಯ ನಾಯಕರು ಮಹಿಳೆಯರ ವಿರೋಧಿಗಳಾಗಿದ್ದಾರೆ ಎಂದು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಆಕ್ರೋಶ ವ್ಯಕ್ತಪಡಿಸಿದರು.
ವೀರ ಯೋಧರ ಮರಣದ ಮೇಲೆ ಮತ ಕೇಳುತ್ತಿರುವ ಬಿಜೆಪಿಯನ್ನು ಈ ಬಾರಿಯ ಚುನಾವಣೆಯಲ್ಲಿ ಮತದಾರರು ಧಿಕ್ಕರಿಸಬೇಕು ಎಂದು ಡಾ.ಪುಷ್ಪಾ ಅಮರನಾಥ್ ತಿಳಿಸಿದರು. ಪಾಕಿಸ್ತಾನ, ಇಮ್ರಾನ್‌ಖಾನ್ ಎಂಬ ಮಾತನ್ನಷ್ಟೇ ಹೇಳುವ ಬಿಜೆಪಿ ದೇಶದ ಬಡವರು, ರೈತರು, ಯುವಕರ ಪರ ಕೆಲಸ ಮಾಡಿದ್ದೇವೆ ಮತ ನೀಡಿ ಎಂದು ಕೇಳುತ್ತಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ಬಿಜೆಪಿಯು ಭಾರತೀಯ ಜನದ್ರೋಹಿ ಪಕ್ಷವಾಗಿದ್ದು, 2014ರಲ್ಲಿ ವ್ಯಕ್ತಿಯೊಬ್ಬರ ಮುಖವಾಡ ಇಟ್ಟುಕೊಂಡು ಚುನಾವಣೆಯಲ್ಲಿ ಗೆದ್ದಿತ್ತು. ಅಂದು ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳು 5 ವರ್ಷ ಕಳೆದರೂ ಈಡೇರಿಲ್ಲ. ಕಾಂಗ್ರೆಸ್ ಪಕ್ಷವು ದೇಶಕ್ಕೆ ಸ್ವಾತಂತ್ರೃ ಕೊಡಿಸಿರುವುದಲ್ಲದೇ ದೇಶ ಕಟ್ಟುವ ಕೆಲಸ ಮಾಡಿದೆ ಎಂದರು.
ಧ್ರುವಗೆ ಮತ ನೀಡಿ: 2 ಬಾರಿ ಸಂಸದರಾಗಿ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿರುವ ಆರ್.ಧ್ರುವನಾರಾಯಣ ಅವರು ಎಲ್ಲ ಸಮುದಾಯಗಳನ್ನು ಒಗ್ಗಟ್ಟಿನಿಂದ ತೆಗೆದುಕೊಂಡು ಹೋಗುತ್ತಿದ್ದಾರೆ. ಇಂತಹ ವ್ಯಕ್ತಿಗೆ ಈ ಬಾರಿಯ ಚುನಾವಣೆಯಲ್ಲಿ ಮತದಾರರು ಹೆಚ್ಚಿನ ಮತ ನೀಡಿ ಗೆಲ್ಲಿಸುವ ಮೂಲಕ ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿಗೆ ಕಾರಣೀಭೂತರಾಗಬೇಕು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಾಸಂತಿ ಶಿವಣ್ಣ, ಜಿಲ್ಲಾಧ್ಯಕ್ಷೆ ಲತಾ ಜಯಣ್ಣ, ನಗರಸಭಾ ಸದಸ್ಯೆ ಚಿನ್ನಮ್ಮ, ಪಕ್ಷದ ಶಾಂತಲಾ, ರತ್ನಮ್ಮ ಇದ್ದರು.