ನವದೆಹಲಿ, ಏಪ್ರಿಲ್ 9: ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ಕಾರ್ಯವೈಖರಿಯ ಕುರಿತು ಕಳವಳ ವ್ಯಕ್ತಪಡಿಸಿರುವ ಸುಮಾರು 66 ಮಾಜಿ ಅಧಿಕಾರಿಗಳು ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದ್ದಾರೆ.
ಕೇಂದ್ರಾಡಳಿತ ನಡೆಸುತ್ತಿರುವ ಪಕ್ಷವು ಹಲವು ಬಾರಿ ನೀತಿ ಸಂಹಿತೆ ಉಲ್ಲಂಘಿಸಿದರೂ ಆಯೋಗವು ಮೌನ ವಹಿಸಿರುವುದು ಖೇದಕರ. ಕ್ಷಿಪಣಿ ಪರೀಕ್ಷಣೆ ಕುರಿತ ಪ್ರಧಾನಿಯ ಪರಾಮರ್ಷೆ, ಮೋದಿಯ ಸೇನೆ ಎಂದ ಯೋಗಿ, ಪ್ರಧಾನಿಯನ್ನು ಅವಲಂಭಿಸಿದ ಸಿನಿಮಾ ಬಿಡುಗಡೆ, ನಮೋ ಟಿವಿ ಚಾನಲ್ ಪ್ರಸಾರ ಮುಂತಾದ ಹಲವಾರು ತಪ್ಪುಗಳು ಕೇಂದ್ರ ಆಡಳಿತ ನಡೆಸುವವರಿಂದ ಮರುಕಳಿಸಿದರೂ ಚುನಾವಣಾ ಆಯೋಗ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಚುನಾವಣಾ ಆಯೋಗವು ವಿಶ್ವಾಸಾರ್ಹತೆಯ ಬಿಕ್ಕಟ್ಟಿನಿಂದ ಬಳಲುತ್ತಿದೆ. ಮತ್ತು ಚುನಾವಣಾ ಪ್ರಕ್ರಿಯೆಯ ಸಮಗ್ರತೆಗೆ ಅಪಾಯ ತಂದೊಡ್ಡಿದೆ ಎಂದು ಅವರು ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ದುರ್ಬಲಗೊಂಡಿರುವ ಚುನಾವಣಾ ಆಯೋಗ ಈ ಸಾಂವಿಧಾನಿಕ ಸಂಸ್ಥೆಯ ವಿಶ್ವಾಸಾರ್ಹತೆಯನ್ನು ಎಲ್ಲ ಕಾಲಕ್ಕೂ ಅತಿ ಕಡಿಮೆ ಮಟ್ಟಕ್ಕೆ ತಗ್ಗಿಸಿದೆ. ಆಯೋಗದ ವಿಶ್ವಾಸಾರ್ಹತೆ ಬಗ್ಗೆ ಜನರಲ್ಲಿ ನಂಬಿಕೆ ಕಳೆದುಹೋದರೆ ನಮ್ಮ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಮಾರಕವಾಗಲಿದೆ ಎಂದು ಅಧಿಕಾರಿಗಳು ಪತ್ರದಲ್ಲಿ ಹೇಳಿದ್ದಾರೆ.