janadhvani

Kannada Online News Paper

ಅಮೇಥಿ, ಏ.10- ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚಿಗೆ ಸಂದರ್ಶನವೊಂದರಲ್ಲಿ ರಫೇಲ್ ಹಗರಣದ ಬಗ್ಗೆ ಸುಪ್ರೀಂಕೋರ್ಟ್ ಕ್ಲೀನ್‍ಚಿಟ್ ನೀಡಿದೆ ಎಂದು ಹೇಳಿಕೊಂಡಿದ್ದರು. ಆದೆರೆ, ಇಂದು ಸುಪ್ರೀಂಕೋರ್ಟ್ ರಫೇಲ್ ಹಗರಣವನ್ನು ಮರು ವಿಚಾರಣೆಗೆ ಅಂಗೀಕಾರ ನೀಡಿದೆ. ಇದು ಅತ್ಯಂತ ಖುಷಿಯ ದಿನ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಹೇಳಿದರು.  ರಫೇಲ್‍ನಲ್ಲಿ 30ಸಾವಿರ ಕೋಟಿ ರೂ. ಹಣವನ್ನು ಮೋದಿ ಅವರು ತಮ್ಮ ಉದ್ಯಮಿ ಸ್ನೇಹಿತನಿಗೆ ಕೊಟ್ಟಿದ್ದಾರೆ. ಚೌಕಿದಾರ್ ಚೋರ್ ಎಂದು ಈ ಮೂಲಕ ಸಾಬೀತಾಗಿದೆ ಎಂದರು.

ಭ್ರಷ್ಟಾಚಾರದ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮೊಂದಿಗೆ ಮುಖಾಮುಖಿ ಚರ್ಚೆಗೆ ಬರಲಿ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಸವಾಲು ಹಾಕಿದ್ದಾರೆ. ಅಮೇಥಿಯಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಅವರು ನನ್ನೊಂದಿಗೆ 15 ನಿಮಿಷ ಚರ್ಚೆಗೆ ಬರಲಿ. ಅಮಿತ್ ಶಾ ಪುತ್ರನ ಆಸ್ತಿಯ ಮೌಲ್ಯ ಏರಿಕೆ, ರಫೇಲ್ ಹಗರಣ, ನೋಟು ಅಮಾನೀಕರಣ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಪ್ರೀತಿಯಿಂದ ಚರ್ಚೆ ಮಾಡೋಣ.

ನನ್ನ ಮುಂದೆ ಬನ್ನಿ ಎಂದು ರಾಹುಲ್ ಅವರು ಮೋದಿಗೆ ಸವಾಲು ಹಾಕಿದ್ದಾರೆ.  ದೇಶದ ಜನ ರಫೇಲ್ ಹಗರಣದ ಬಗ್ಗೆ ಸತ್ಯಾಂಶ ತಿಳಿದುಕೊಳ್ಳಲು ಬಯಸುತ್ತಿದ್ದಾರೆ. ನಾನು ಪ್ರತಿ ದಿನ ಈ ಬಗ್ಗೆ ಮಾತನಾಡುತ್ತಿದ್ದೇನೆ.ಸುಪ್ರೀಂಕೋರ್ಟ್‍ನ ಇಂದಿನ ತೀರ್ಪು ನನ್ನ ಮಾತಿಗೆ ಪುಷ್ಠಿ ನೀಡಿದಂತಾಗಿದೆ. ನ್ಯಾಯವನ್ನು ಎತ್ತಿ ಹಿಡಿದಿರುವ ಸುಪ್ರೀಂಕೋರ್ಟ್‍ಗೆ ನಾನು ಧನ್ಯವಾದ ಹೇಳುತ್ತೇನೆ ಎಂದರು.

error: Content is protected !! Not allowed copy content from janadhvani.com